ವಿಜಯಪುರ: ಇತ್ತೀಚೆಗೆ ನಡೆದ ಎಸ್ ಎಸ್ ಎಲ್ ಸಿ(SSLC) ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಆರು ಜನ ವಿದ್ಯಾರ್ಥಿಗಳು ಶೇ. 100 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಹೆಮ್ಮೆಯ ಕ್ಷಣಗಳು ಇನ್ನೂ ಹಸಿರಾಗಿರುವಾಗಲೇ ಬಸವ ನಾಡು(Basava Nadu) ವಿಜಯಪುರ ಜಿಲ್ಲೆಯ ಭೀಮಾ ತೀರದ(Bheema Shore) ಯುವತಿ ಪಿಯುಸಿ ಪರೀಕ್ಷೆಯಲ್ಲಿ(PUC Exam) ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ(1st Rank To State) ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾಳೆ.
ಚಡಚಣ ತಾಲೂಕಿನ ಧೂಳಖೇಡ ಗ್ರಾಮದ ಯುವತಿ ಶ್ವೇತಾ ಭೀಮಾಶಂಕರ ಭೈರಗೊಂಡ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಕೊಟ್ಟೂರು ಇಂದು ಸ್ವತಂತ್ರ ಪಿಯು ಕಾಲೇಜಿನಲ್ಲಿ ದ್ವಿತಿಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, 600ಕ್ಕೆ 594 ಅಂಕಗಳನ್ನು ಪಡೆಯುವ ಮೂಲಕ ಬಳ್ಳಾರಿ ಜಿಲ್ಲೆ ಅಷ್ಟೇ ಅಲ್ಲ, ವಿಜಯಪುರ ಜಿಲ್ಲೆಗೂ ಕೀರ್ತಿ ತಂದಿದ್ದಾಳೆ.
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶ್ವೇತಾ ಭೀಮಾಶಂಕರ ಭೈರಗೊಂಡ ಪಡೆದಿರುವ ಅಂಕಗಳು.
ಕನ್ನಡ- 97,
ಸಂಸ್ಕೃತ- 100,
ಕನ್ನಡ(ಐಚ್ಛಿಕ)- 98,
ಇತಿಹಾಸ- 100,
ಸಮಾಜ ಶಾಸ್ತ್ರ- 99 ಮತ್ತು
ಶಿಕ್ಷಣ- 100.
ಭೀಮಾ ತೀರದಲ್ಲಿಯೇ ಹೈಸ್ಕೂಲ್ ವರೆಗೆ ಓದಿರುವ ವಿದ್ಯಾರ್ಥಿನಿ
ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ ಭೀಮಾ ತೀರದಲ್ಲಿ ಬರುವ ಧೂಳಖೇಡ ಗ್ರಾಮದ ಭೀಮಾಶಂಕರ ಮತ್ತು ಪುಷ್ಪಾವತಿ ಭೈರಗೊಂಡ ಅವರ ಪುತ್ರಿ ಇಬ್ಬರು ಮಕ್ಕಳಲ್ಲಿ ಎರಡನೇಯವರು ಶ್ವೇತಾ ಹೈಸ್ಕೂಲ್ ವರೆಗೆ ಧೂಳಖೇಡ ಗ್ರಾಮದಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದಳು.
ಧೂಳಖೇಡ ಗ್ರಾಮದಲ್ಲಿರುವ ಕಮಲ ಪಬ್ಲಿಕ್ ಸ್ಕೂಲ್ ನಲ್ಲಿ ಒಂದರಿಂದ ನಾಲ್ಕನೇ ತರಗತಿಯವರೆಗೆ ಓದಿದ ಶ್ವೇತಾ ನಂತರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಐದರಿಂದ ಏಳನೇ ತರಗತಿಯ ವರೆಗೆ ವಿದ್ಯಾಭ್ಯಾಸ ಮಾಡಿದ್ದಾಳೆ. ನಂತರ ಇದೇ ಗ್ರಾಮದ ಭೀಮಾಶಂಕರ ಹೈಸ್ಕೂಲ್ ನಲ್ಲಿ 8 ರಿಂದ 10ನೇ ತರಗತಿಯವರೆಗೆ ಶಿಕ್ಷಣ ಪೂರೈಸಿದ್ದಾಳೆ. ಎಸ್ ಎಸ್ ಎಸ್ ಲಿ ಪರೀಕ್ಷೆಯಲ್ಲಿ ಶೇ. 93ಕ್ಕೂ ಹೆಚ್ಚು ಅಂಕ ಗಳಿಸಿ ಇಡೀ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದಿದ್ದ ಈಕೆ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಇಡೀ ನಾಡು ಹೆಮ್ಮೆ ಪಡುವ ಸಾಧನೆ ಮಾಡಿದ್ದಾಳೆ.
ಶಿಕ್ಷಕ ತಂದೆಯ ಹೆಮ್ಮೆಯ ಪುತ್ರಿ ಶ್ವೇತಾ
ಶ್ವೇತಾ ತಂದೆ ಭೀಮಾಶಂಕರ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಕೇಗಾಂವ ಹೈಸ್ಕೂಲಿನಲ್ಲಿ ಗಣಿತ ಶಿಕ್ಷಕರಾಗಿದ್ದಾರೆ. ಭೀಮಾಶಂಕರ ಮತ್ತು ಪುಶ್ಪಾವತಿ ದಂಪತಿಗೆ ಇಬ್ಬರು ಮಕ್ಕಳಿದ್ದು, ಹಿರಿಯ ಮಗ ಆನಂದ ಭೀಮಾಶಂಕರ ಭೈರಗೊಂಡ ಬೆಳಗಾವಿ ಜಿಲ್ಲೆಯ ಗೋಕಾಕ ಕಾಲೂಕಿನ ಅರಭಾವಿಯಲ್ಲಿರುವ ತೋಟಗಾರಿಕೆ ಕಾಲೇಜಿನಲ್ಲಿ ಬಿ ಎಸ್ಸಿ ಹರ್ಟಿಕಲ್ಟರ್ ಓದುತ್ತಿದ್ದಾರೆ. ಶ್ವೇತಾ ಇವರ ದ್ವಿತೀಯ ಪುತ್ರಿಯಾಗಿದ್ದಾರೆ.
ಉತ್ತಮ ಅಂಕ ಗಳಿಸಿದರೂ ಸಾಯಿನ್ಸ್ ಬದಲು ಆರ್ಟ್ಸ್ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿನಿ
ಎಸ್ ಎಸ್ ಎಲ್ ಸಿ ಯಲ್ಲಿ ಶೇ. 93ಕ್ಕೂ ಹೆಚ್ಚು ಅಂಕ ಗಳಿಸಿ ಇಡೀ ಪರೀಕ್ಷಾ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದಿದ್ದ ಶ್ವೇತಾ ಭೀಮಾಶಂಕರ ಭೈರಗೊಂಡ ಪ್ರತಿಭೆಯನ್ನು ಕಂಡ ಅಲ್ಲಿನ ಶಿಕ್ಷಕರು ಈಕೆಯನ್ನು ಪಿಯು ಸಾಯಿನ್ಸ್ ವಿಭಾಗಕ್ಕೆ ಸೇರಿಸಲು ಸಲಹೆ ನೀಡಿದ್ದರು. ವಿದ್ಯಾರ್ಥಿನಿಯ ಪೋಷಕರು ಈ ನಿಟ್ಟಿನಲ್ಲಿ ಪ್ರಯತ್ನಿಸಿದರೂ ಒಪ್ಪದ ಆಕೆ ಕಲಾ ವಿಭಾಗದಲ್ಲಿಯೇ ಓದಲು ಹಂಬಲ ವ್ಯಕ್ತಪಡಿಸಿದ್ದಳು. ಇದಕ್ಕೆ ಪೋಷಕರೂ ಒಪ್ಪಿಗೆ ಸೂಚಿಸಿದ್ದರು. ವಿಜಯಪುರದಲ್ಲಿಯೇ ಓದಿಸುವಂತೆ ಒತ್ತಾಯ ಕೇಳಿ ಬಂದಿತ್ತು.
ಕಾಲೇಜನ್ನೂ ಸ್ವತಃ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿನಿ
ಜೀವನದ ಬಗ್ಗೆ ಸ್ಪಷ್ಟ ಗುರಿಯನ್ನು ಹೊಂದಿರುವ ಶ್ವೇತಾ ಭೀಮಾಶಂಕರ ಭೈರಗೊಂಡ ತಾನು ಯಾವ ಕಾಲೇಜಿನಲ್ಲಿ ಪಿಯು ಓದಬೇಕು ಎಂಬುದನ್ನು ತಾನೇ ನಿರ್ಧರಿಸಿದ್ದಳು. ಇಂಟರ್ನೆಟ್ ನಲ್ಲಿ ಹುಡುಕಿ ಕೊಟ್ಟೂರಿನ ಇಂದು ಪಿಯು ಕಾಲೇಜನ್ನು ಆಯ್ಕೆ ಮಾಡಿಕೊಂಡು ಪೋಷಕರಿಗೆ ತನ್ನ ಇಚ್ಛೆಯನ್ನು ತಿಳಿಸಿದಾಗ ಅವರೂ ಕೂಡ ಮಗಳ ಆಸೆಗೆ ನೀರೆರೆದು ಪೋಷಿಸಿದ್ದು ಈಗ ಫಲ ನೀಡಿದ್ದು, ಶ್ವೇತಾ ಭೀಮಾಶಂಕ ಭೈರಗೊಂಡ ತನ್ನ ಸಾಧನೆಯ ಮೂಲಕ ಈಗ ಮನೆಮಾತಾಗಿದ್ದಾಳೆ.
ಪೋಷಕರಲ್ಲಿ ಮನೆ ಮಾಡಿದ ಸಂತಸ
ಮಗಳು ಶ್ವೇತಾ ಮಾಡಿರುವ ಸಾಧನೆ ಅವರ ತಂದೆ ಭೀಮಾಶಂಕರ ಮತ್ತು ತಾಯಿ ಪುಷ್ಪಾವತಿ ಹಾಗೂ ಅಣ್ಣ ಆನಂದ ಭೈರಗೊಂಡ ಅವರಲ್ಲಿ ತೀವ್ರ ಸಂತಸ ಮೂಡಿಸಿದೆ. ಫಲಿತಾಂಶ ಪ್ರಕಟವಾಗುತ್ತಲೇ ಗಣ್ಯರೂ ಕೂಡ ಇವರ ಮನೆಗೆ ಧಾವಿಸಿ ಸಾಧನೆಯನ್ನು ಪ್ರಶಂಸಿಸಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ನಾಗಠಾಣ(ಮೀ) ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಇವರ ಮನೆಗೆ ತೆರಳಿ ವಿದ್ಯಾರ್ಥಿನಿಯ ಸಾಧನೆಯನ್ನು ಕೊಂಡಾಡಿ ಭಕ್ಷೀಸು ನೀಡಿ ಹೋಗಿದ್ದಾರೆ. ಅಲ್ಲದೇ, ಮಾಜಿ ಶಾಸಕ ಮತ್ತು ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ ಕೂಡ ಇವರ ಮನೆಗೆ ಭೇಟಿ ನೀಡಿ ಸನ್ಮಾನಿಸಿ ಅಭಿನಂದಿಸಿದ್ದಾರೆ.
ವಿದ್ಯಾರ್ಥಿನಿಯ ಗುರಿ
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 93 ಕ್ಕಿಂತಲೂ ಹೆಚ್ಚು ಅಂಕ ಗಳಿಸಿದ್ದರೂ ವಿಜ್ಞಾನದ ಬದಲು ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡಿರುವ ಈ ವಿದ್ಯಾರ್ಥಿನ ಅದಕ್ಕೆ ಕಾರಣವನ್ನೂ ಪೋಷಕರಿಗೆ ತಿಳಿಸಿದ್ದಳು. ಅದಕ್ಕೆ ಪೋಷಕರೂ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು.
ಕಲಾ ವಿಭಾಗವನ್ನು ಆಯ್ದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಗಿಸಿ ಅಧಿಕಾರಿಯಾಗಿ ಜನಸೇವೆ ಮಾಡುವ ಮಹಾದಾಸೆಯನ್ನು ವ್ಯಕ್ತಪಡಿಸಿರುವ ಶ್ವೇತಾ ಭೀಮಾಶಂಕರ ಕನಸು ನನಸಾಗಲಿ ಎಂದು ಬಸವ ನಾಡು ಕೂಡ ಶುಭ ಹಾರೈಸುತ್ತದೆ.