ವಿಜಯಪುರ: ಕಾಂಗ್ರೆಸ್‌ನವರು ಸಭೆ ಸಮಾರಂಭ ಮಾಡಿದರೆ ಕೊರೊನಾ ಬರುತ್ತದೆ ಎಂದು ಬಿಜೆಪಿ ಸರ್ಕಾರ ಹೇಳುತ್ತದೆ. ಆದರೆ, ಈಗ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದರಿಂದ ಕೊರೊನಾ ಬರಲ್ವಾ ಎಂದು ವಿಧಾನ ಸಭೆ ಪ್ರತಿಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.
ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿಯಲ್ಲಿ ಗೌರಮ್ಮ ಮುತ್ತತ್ತಿ ಫೌಂಡೆಶನ್ ವತಿಯಿಂದ ಆಯೋಜಿಸಲಾಗಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ಆಗಮಿಸಿದ್ದ ಅವರು ಹೆಲಿಪ್ಯಾಡ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕಾಂಗ್ರೆಸ್ಸಿನವರು ಸಮಾರಂಭ ಮಾಡಿದರೆ ಕೊರೊನಾ ಬರುತ್ತದೆ ಎಂದು ಬಿಜೆಪಿಯವರು ಹೇಳುತ್ತಾರೆ ಈಗ ಅವರೇ ಸಭೆ ಸಮಾರಂಭ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದಕ್ಕೆ ಬಿಜೆಪಿಯವರೇ ಉತ್ತರ ಕೊಡಬೇಕಲ್ವಾ ಎಂದು ಹೇಳಿದರು.
ಶನಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ರಾಜ್ಯಕ್ಕೆ ಬಂದಿದ್ದರು. ತಾಲೂಕುಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಹೆಸರಿನಲ್ಲಿ ಸಾರ್ವಜನಿಕ ಸಭೆ ಮಾಡಿದ್ದಾರೆ. ಅಲ್ಲಿಯೂ ಸಾಕಷ್ಟು ಜನಾ ಸೇರಿದ್ದರು. ಇಗಾ ರವಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಬರಲಿದ್ದಾರೆ. ಬೆಂಗಳೂರಿನಲ್ಲಿ ಸಭೆ ಮಾಡಲಿದ್ದಾರೆ. ಮೈಸೂರಿನಲ್ಲಿ ಯೋಗ ಮಾಡಲಿದ್ದಾರೆ. ಯೋಗ ಕಾರ್ಯಕ್ರಮದಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಜನ ಸೇರುತ್ತಾರೆ. ನಂತರ ಸಾರ್ವಜನಿಕ ಸಭೆ ಮಾಡಲಿದ್ದಾರೆ. ಅಲ್ಲಿ ಕೊರೋನಾ ಹಬ್ಬುವುದಿಲ್ಲವಾ ಎಂದು ಸಿದ್ಧರಾಮಯ್ಯ ಖಾರವಾಗಿ ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಕಂಡು ಕೊರೊನಾ ಓಡಿ ಬಿಟ್ಟಿದ್ದಾವಾ? ಆ ಸೂಕ್ಷ್ಮಾಣುಗಳು ಓಡಿ ಬಿಟ್ಟಿದ್ದಾವಾ? ಎಂದು ಮಾಜಿ ಸಿಎಂ ಪ್ರಶ್ನಿಸಿದರು.
ವಿಶ್ವ ಯೋಗ ದಿನಾಚರಣೆ ಹಿನ್ನೆಲೆ ಮೈಸೂರಿಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಮೋದಿ ದೇಶದ ಪ್ರಧಾನಿ. ಮೈಸೂರಿಗೆ ಬರುವದರಲ್ಲಿ ತಪ್ಪಿಲ್ಲ. ಬರಬೇಡ ಎಂದು ಹೇಳಲು ಆಗುತ್ತಾ? ಲೇಟ್ ಹಿಮ್ ಕಂ. ಅಟಂಡ್ ದಿ ಫಂಕ್ಷನ್. ದೇಶದ ಪ್ರಧಾನಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸುತ್ತಾರೆ. ರಾಜಕೀಯ ಕೂಡಾ ಮಾಡಲಿಕ್ಕೆ ಬರುತ್ತಿದ್ದಾರೆ. ಇದರಿಂದ ಕೊರೊನಾ ಬರುವುದಿಲ್ಲವಾ ಎಂದು ಎಸ್. ಸಿದ್ಧರಾಮಯ್ಯ ಖಾರವಾಗಿ ಪ್ರಶ್ನಿಸದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಎಂ. ಬಿ. ಪಾಟೀಲ ಮತ್ತು ಶಿವಾನಂದ ಪಾಟೀಲ, ಕಾಂಗ್ರೆಸ್ ಮುಖಂಡರಾದ ಎಸ್. ಎಂ. ಪಾಟೀಲ ಗಣಿಹಾರ, ಜಿ. ಪಂ. ಮಾಜಿ ಸದಸ್ಯೆ ಗೌರಮ್ಮ ಮುತ್ತತ್ತಿ ಉಪಸ್ಥಿತರಿದ್ದರು.