ವಿಜಯಪುರ: ಅಗ್ನಿಪಥ ಯೋಜನೆ ವಿಚಾರದಲ್ಲಿ ಯುವಕರಿಗೆ ಅಭದ್ರತೆ ಕಾಡುತ್ತಿದೆ. ಈ ಹೀಗಾಗಿ ಯುವಕರು ಆ ರೀತಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವ ಶಿವಾನಂದ ಪಾಟೀಲ ಅಭಿಪ್ರಾಯ ಪಟ್ಟಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಗ್ನಿಪಥ ಯೋಜನೆ ಜಾರಿ ವಿಚಾರದಲ್ಲಿ ಸ್ವಲ್ಪ ಆತುರತೆಯಾಗಿದೆ. ಕಳೆದ ಏಳೆಂಟು ವರ್ಷಗಳಲ್ಲಿ ಯುವಕರಿಗೆ ನಿರುದ್ಯೋಗ ಸಮಸ್ಯೆ ಕಳೆದ ಹೆಚ್ಚಾಗಿದೆ. ಈ ಬಗ್ಗೆ ಸ್ವತಃ ಬಿಜೆಪಿ ಸಂಸದ ವರುಣ ಗಾಂಧಿ ಅವರಂಥ ನಾಯಕರೇ ಹೇಳಿದ್ದಾರೆ. ಕೇಂದ್ರದಲ್ಲಿ 60 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಅವರು ಈ ಹಿಂದೆ ಹೇಳಿಕೆ ನೀಡಿದ್ದನ್ನು ನೋಡಿದ್ದೇನೆ. ಆದರೆ, ಜನ ಇದನ್ನು ಬಹಳ ಗಂಭೀರವಾಗಿ ಗಮನಿಸಲಿಲ್ಲ ಎಂದು ಹೇಳಿದರು.
ಈ ರೀತಿ ನಿರುದ್ಯೋಗ ಸಮಸ್ಯೆ ಉಲ್ಬಣವಾಗುತ್ತ ಹೋದರೆ ಮತ್ತು ಹೊರ ಗುತ್ತಿಗೆ ಹೆಸರಿನಲ್ಲಿ ನಾಲ್ಕು ವರ್ಷ ಐದು ವರ್ಷ ತಾತ್ಕಾಲಿಕ ಉದ್ಯೋಗ ನೀಡುವುದರಿಂದ ಜನರಲ್ಲಿ ಉದ್ಯೋಗ ಮತ್ತು ಜೀವನದ ಬಗ್ಗೆ ಅಭದ್ರತೆ ಕಾಡುತ್ತದೆ ಎಂದು ಹೇಳಿದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ, ಉದ್ಯೋಗಕ್ಕೆ ಸೇರುವ ಯುವಕರಿಗೆ 20 ರಿಂದ 25 ವರ್ಷ ಸರಕಾರಿ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವಂತಾಗಬೇಕು. ಆಗ ಯುವಕರಿಗೆ ತಂತಮ್ಮ ಕುಟುಂಬ ನಿರ್ವಹಣೆ ಮಾಡುವ ಶಕ್ತಿ ಸಾಮರ್ಥ್ಯ ಬರಬಹುದು ಎಂದು ತಿಳಿಸಿದರು.
ಕೇಂದ್ರವಿರಲಿ, ರಾಜ್ಯವಿರಲಿ ಎಲ್ಲ ಸರಕಾರಗಳು ಬಂಡವಾಳ ಹಿಂತೆಗೆತ ಖಾತೆ ತೆರೆದು ಒಂದು ಕಾಲದಲ್ಲಿ ನೂಲಿನ ಗಿರಣಿಗಳನ್ನು ಮಾರಾಟ ಮಾಡಿದರು. ಸಕ್ಕರೆ ಕಾರ್ಖಾನೆಗಳನ್ನು ಮಾರಾಟ ಮಾಡಿದರು. ಎಣ್ಣೆ ಮಿಲ್ಲುಗಳನ್ನು ಖಾಸಗೀಕರಣ ಮಾಡಿದ ಮೇಲೆ ಕಾಲಕ್ರಮೇಣ ಜನರಿಗೆ ನಿರುದ್ಯೋಗ ಸಮಸ್ಯೆ ಉಲ್ಬಣೆಯಾಯಿತು. ಇದು ಒಂದು ಕಾರಣವಾದರೆ, ಜನಸಂಖ್ಯೆ ಹೆಚ್ಚಳ ಕೂಡ ಮತ್ತೋಂದು ಕಾರಣವಾಗಿದೆ. ಸಾಲ ಮಾಡಿ ಸರಕಾರ ನಡೆಸುವುದು ಸಾಧನೆಯಲ್ಲ. ಅದು ನಮ್ಮದೇ ಸರಕಾರವಿರಬಹುದು ಇಲ್ಲವೇ ಬೇರೆ ಯಾವುದೇ ಸರಕಾರವಿರಬಹುದು ಎಂದು ಅವರು ಹೇಳಿದರು.
ಇವತ್ತು ರಾಜ್ಯ ಸರಕಾರ ರೂ. 5 ಲಕ್ಷ ಕೋ. ಸಾಲ ಮಾಡಿದೆ. ಕೇಂದ್ರ ಸರಕಾರ ಕೂಡ ರೂ. 50 ರಿಂದ ರೂ. 60 ಲಕ್ಷ ಕೋಟಿ ಸಾಲ ಮಾಡಿದೆ. ಇದರಿಂದ ಭವಿಷ್ಯ ಕಗ್ಗತ್ತಲ್ಲಿ ಸಾಗಲಿದೆ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗಾಗಿ ಮೈಸೂರಿಗೆ ಬರುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಬರಲಿ ಯೋಗ ಮಾಡಲಿ. ನಮ್ಮದೇನೂ ಅಭ್ಯಂತರವಿಲ್ಲ. ಪ್ರವಾಹ ಉಂಟಾದ ಸಂದರ್ಭದಲ್ಲಿ ಜನ ಬೀದಿಗೆ ಬಂದಿದ್ದರು. ಆಗ ಬರಲಿಲ್ಲ. ಪ್ರಕೃತಿ ವಿಕೋಪದಂಥ ಸಂದರ್ಭದಲ್ಲಿ ಯೋಗ ದಿನವನ್ನು ಸಾಂಕೇತಿಕವಾಗಿ ಮಾಡಲಿ. ಕೇಂದ್ರವಿರಲಿ ಅಥವಾ ರಾಜ್ಯ ಸರಕಾರಗಳಿರಲಿ ಆ ಕಡೆ ಗಮನ ನೀಡಬೇಕು. ಯೋಗ ನಿರಂತರ ಪ್ರಕ್ರಿಯೆಯಾಗಿದೆ. ಅದಕ್ಕಾಗಿಯೇ ದಿನವನ್ನು ಮೀಸಲಿಡಬಾರದು ಎಂದು ಶಿವಾನಂದ ಪಾಟೀಲ ಹೇಳಿದರು.