ವಿಜಯಪುರ: ಜಿಲ್ಲೆಯಲ್ಲಿ ಅಂತಾರಾಷ್ಟೀಯ ಯೋಗ ದಿನಾಚರಣೆಯ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಖುದ್ದಾಗಿ ಐತಿಹಾಸಿಕ ಗೋಳಗುಮ್ಮಟ ಆವರಣಕ್ಕೆ ಭೇಟಿ ನೀಡಿ ಅಂತಿಮ ಹಂತದ ಸಿದ್ಧತೆಯನ್ನು ಪರಿಶೀಲಿಸಿದರು.
ಈ ಕಾರ್ಯಕ್ರಮದಲ್ಲಿ ಯೋಗಪಟುಗಳಿಗೆ ಸ್ಥಳವಕಾಶ, ಜನಪ್ರತಿನಿಧಿಗಳು ಮತ್ತು ಗಣ್ಯರಿಗೆ ಆಸನದ ವ್ಯವಸ್ಥೆಗೆ ನಿಗದಿ ಪಡಿಸಿದ ಸ್ಥಳ ವೀಕ್ಷಣೆ ಮಾಡಿದ ಅವರು, ಪ್ರವೇಶ ದ್ವಾರಗಳ ಬಗ್ಗೆ ಮಾಹಿತಿ ಪಡೆದರು. ಕುಡಿಯುವ ನೀರು ಮತ್ತು ಇನ್ನೀತರ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಗಮನಿಸಿದರು. ರಿಹರ್ಷಲ್ ಕೂಡ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಲು ಅವರು ಅಧಿಕಾರಿಗಳಿಗೆ ತಿಳಿಸಿದರು.
75ನೇ ಭಾರತ ಸ್ವಾತಂತ್ರ‍್ಯೋತ್ಸವದ ಅಮೃತ್ ಮಹೋತ್ಸವ ಹಿನ್ನಲೆಯಲ್ಲಿ ಜೂ. 21 ಮಂಗಳವಾರ ಭಾರತಾದ್ಯಂತ 75 ಇತಿಹಾಸ ಪ್ರಸಿದ್ಧ ಹಾಗೂ ಪಾರಂಪರಿಕ ತಾಣಗಳಲ್ಲಿ ಏಕ ಕಾಲಕ್ಕೆ ಯೋಗ ದಿನಾಚರಣೆಯನ್ನು ಆಚರಿಸಲು ಕೇಂದ್ರ ಸರಕಾರದ ಸೂಚನೆ ಇದೆ. ಅಂಥ 75 ತಾಣಗಳ ಪೈಕಿ ನಮ್ಮೂರು ವಿಜಯಪುರ ಕೂಡ ಒಂದು ಎನ್ನುವುದು ನಮಗೆ ಹೆಮ್ಮೆಯ ಸಂಗತಿ. ಈ ಹಿನ್ನೆಲೆಯಲ್ಲಿ ವಿಶ್ವಪ್ರಸಿದ್ಧ ಗೋಳಗುಮ್ಮಟ ಆವರಣದಲ್ಲಿ ಯೋಗ ಪ್ರದರ್ಶನ ನಡೆಯಲಿದೆ. ಕೇಂದ್ರ ಸರಕಾರದ ಆಯುಷ ಮಂತ್ರಾಲಯ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಸಚಿವಾಲಯ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ, ಭಾರತದ ಸಾಫ್ಟ ವೇರ್ ಟೆಕ್ನಾಲಜಿ ಪಾರ್ಕ್, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ಈ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.
ಮಂಗಳವಾರ ಯೋಗ ದಿನದ ಉದ್ಘಾಟನೆ, ಭಾಷಣ, ಮಾನ್ಯ ಪ್ರಧಾನ ಮಂತ್ರಿಗಳ ಭಾಷಣದ ನೇರ ಪ್ರಸಾರ ವೀಕ್ಷಣೆ, ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮಗಳು ನಡೆಯಲಿವೆ. ಈ ಐತಿಹಾಸಿಕ ಕಾರ್ಯಕ್ರಮ ಯಶಸ್ವಿಗೆ ವಿಜಯಪುರ ಜಿಲ್ಲೆಯ ಸಾರ್ವಜನಿಕರು ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ.ದಾನಮ್ಮನವರ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಮಹಾನಗರ ಪಾಲಿಕೆಯ ಆಯುಕ್ತ ವಿಜಯ ಮೆಕ್ಕಳಕೆ, ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಎ. ಎಲ್. ಚಂಚಲಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ನಾಗರಾಜ್ ಬಿ., ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಾಜು ಮುಜುಮದಾರ ಮತ್ತು ಇತರರು ಉಪಸ್ಥಿತರಿದ್ದರು.