ವಿಜಯಪುರ: ನಗರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಸಂಗನಬಸವ ಫಾರ್ಮಸಿ ಕಾಲೇಜಿಗೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮೌಲ್ಯಾಂಕ ಮಂಡಳಿ(NAAC)ಯಿಂದ A++ ಗ್ರೇಡ್ ಮಾನ್ಯತೆ ದೊರೆತಿದೆ.
ಈ ಕುರಿತು ಬಿ ಎಲ್ ಡಿ ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ವಿ. ಕುಲಕರ್ಣಿ ಮಾಧ್ಯಮ ಪ್ರಕಟಣೆ ನೀಡಿದ್ದಾರೆ.
ಜೂ. 17 ಮತ್ತು 18 ರಂದು ಎರಡು ದಿನಗಳ ಕಾಲ ಬಿ ಎಲ್ ಡಿ ಇ ಸಂಸ್ಥೆಯ ಸಂಗನಬಸವ ಫಾರ್ಮಸಿ ಕಾಲೇಜಿಗೆ ಭೇಟಿ ನೀಡಿದ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮೌಲ್ಯಾಂಕ ಮಂಡಳಿ(NAAC) ಸದಸ್ಯರು, ಇಲ್ಲಿನ ಮೂಲಭೂತ ಸೌಕರ್ಯಗಳು, ಪಠ್ಯಕ್ರಮ ಮತ್ತು ಅನುಷ್ಠಾನ, ಬೋಧನೆ ಮತ್ತು ಕಲಿಕೆಯ ವಿಧಾನಗಳು, ವಿದ್ಯಾರ್ಥಿಗಳು ಕಲಿಕೆಯಲ್ಲಿ ಪಾಲ್ಗೊಳ್ಳುವಿಕೆ ಹಾಗೂ ಸೇವೆಗಳು, ಆಡಳಿತ, ಸಂಶೋಧನಾ ಚಟುವಟಿಕೆಗಳು ಒಳಗೊಂಡಂತೆ ಇತರೆ ದಾಖಲೆಗಳನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡಿದ್ದಾರೆ. ಎಲ್ಲ ಪರಿಶೀಲನೆ ಬಳಿಕ ನಮ್ಮ ಕಾಲೇಜಿಗೆ A++ ಗ್ರೇಡ್ ನೀಡಲಾಗಿದೆ. ಅಲ್ಲದೇ, ಭಾರತದಲ್ಲಿಯೇ ಮೊಟ್ಟಮೊದಲ A++ ಗ್ರೇಡ್ ಪಡೆದ ಔಷಧ ಮಹಾವಿದ್ಯಾಲಯ ಎಂಬ ಹೆಗ್ಗಳಿಕೆಗೆ ಕಾಲೇಜು ಪಾತ್ರವಾಗಿದೆ ಎಂದು ಡಾ. ಆರ್. ವಿ. ಕುಲಜರ್ಣಿ ಹರ್ಷ ವ್ಯಕ್ತಪಡಿಸಿದ್ದಾರೆ.
ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ, ಮತ್ತು ಶಾಸಕ ಎಂ. ಬಿ. .ಪಾಟೀಲ ಅವರು ಸಂಗನಬಸವ ಫಾರ್ಮಸಿ ಕಾಲೇಜು A++ ಗ್ರೇಡ್ ಮಾನ್ಯತೆ ಪಡೆದಿರುವುದಕ್ಕೆ ಕಾಲೇಜು ಪ್ರಾಚಾರ್ಯ ಡಾ. ಆರ್.ಬಿ.ಕೊಟ್ನಾಳ, ಬೋದಕ, ಬೋಧಕೇತರ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.