International Yoga Day: ಐತಿಹಾಸಿಕ ಗೋಳಗುಮ್ಮಟದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ- ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯ ಸಚಿವ ಉಮೇಶ ಕತ್ತಿ ಭಾಗಿ

ವಿಜಯಪುರ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ದೇಶದ 75 ಪ್ರಾಚೀನ ಸ್ಮಾರಕಗಳಲ್ಲಿ ಯೋಗ ದಿನ ಕಾರ್ಯಕ್ರಮ ನಡೆದಿದ್ದು, ಬಸವ ನಾಡು ವಿಜಯಪುರ ನಗರದ ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿಯೂ ಯೋಗ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಗೋಳಗುಮ್ಮಟ ಆವರಣದಲ್ಲಿ ಆಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿದ ಸಚಿವ ಭಗವಂತ ಖೂಬಾ

 

ಗೋಳಗುಮ್ಮಟ ಆವರಣದಲ್ಲಿರುವ ಹುಲ್ಲಿನ ಹಾಸಿನ ಮೇಲೆ ಈ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೇಂದ್ರ ನವೀಕರಿಸಬಹುದಾದ ಇಂಧನ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ, ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಸೇರಿದಂತೆ ನಾನಾ ಮುಖಂಡರು ಮತ್ತು ಅಧಿಕಾರಿಗಳು ಪಾಲ್ಗೋಂಡರು.

ಕೇಂದ್ರ ಆಯುಷ್ ಮಂತ್ರಾಲಯ, ರಾಜ್ಯ ಆಯುಷ್ ಇಲಾಖೆ, ವಿಜಯಪುರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮವನ್ನು ಕೇಂದ್ರ ಸಚಿವ ಭಗವಂತ ಖೂಬಾ ಉದ್ಘಾಟಿಸಿ ಮಾತನಾಡಿದರು.

 

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಭಗವಂತ ಖೂಬಾ, ನಾನಾ ಜಾತಿ, ಧರ್ಮ, ಭಾಷೆ ಮೀರಿ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಯೋಗಕ್ಕಿದೆ ಎಂದು ಹೇಳಿದರು.

ಕೇಂದ್ರ ಸಚಿವ ಭಗವಂತ ಖೂಬಾ ಗೋಳಗುಮ್ಮಟದಲ್ಲಿ ಆಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದರು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಡೀ ವಿಶ್ವಕ್ಕೆ ಮನವರಿಕೆ ಮಾಡಿಕೊಟ್ಟಿದ್ದರಿಂದ ಯೋಗವನ್ನು ಜೂನ್ 21ರಂದು ವಿಶ್ವದ‌ 190ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ.  ಇದು ಸಮಸ್ತ ಭಾರತಿಯರಿಗೆ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ನಾವೆಲ್ಲರೂ ಯೋಗ ಮಾಡುವ ಸಂಕಲ್ಪ ಹೊಂದೋಣ. ಯೋಗ ಮಾಡಲು ಇತರರಿಗೆ ಪ್ರೇರೇಪಿಸೋಣ.  ಇಡೀ ಸಮಾಜವನ್ನು ಒಂದೇ ಸೂತ್ರದಡಿ ತರುವ ಪ್ರಯತ್ನದಡಿ ಯೋಗ ದಿನಾಚರಣೆಗೆ ವಿಶೇಷ ಆದ್ಯತೆ ನೀಡಿದ್ದು, ಹಲವು ಧರ್ಮಿಯರು ಹಲವು ಭಾಷಿಕರನ್ನು ಒಳಗೊಂಡ ಭಾರತ ದೇಶದಲ್ಲಿ ಎಲ್ಲರನ್ನು ಒಗ್ಗೂಡಿಸಲು ಯೋಗದಲ್ಲಿ ಮಾತ್ರ ಅಂತ ಶಕ್ತಿ ಇದೆ ಎಂದು ಭಗವಂತ ಖೂಬಾ ತಿಳಿಸಿದರು.

ರಾಜ್ಯ ಅರಣ್ಯ ಮತ್ತು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಕೋವಿಡ್ ಉಸ್ತುವಾರಿ ಸಚಿವರು ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ ವಿ. ಕತ್ತಿ ಅವರು ಮಾತನಾಡಿ, ಪ್ರಧಾನ ಮಂತ್ರಿಗಳು ಯೋಗವನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ಕಾರ್ಯಕ್ರಮ ಮಾಡಿದ್ದಾರೆ.  ಯೋಗವು ಭಾರತದ ದೇಶದ ಕೊಡುಗೆಯಾಗಿದೆ. ವರ್ಷವಿಡೀ ಯೊಗ ಮಾಡಿದರೆ ಆರೋಗ್ಯಕ್ಕೆ ಸಹಕಾರಿ ಎಂಬುದನ್ಮು ತೋರಿಸಿ ಕೊಟ್ಟ ದೇಶ ನಮ್ಮದಾಗಿದೆ.  ಇಡೀ ವಿಶ್ವದ ಗಮನ ಈ ದಿನ ಮೈಸೂರಿನತ್ತ ಇದೆ.‌  ವಿಜಯಪುರದ ಕೀರ್ತಿಯನ್ನು ಇಡೀ ವಿಶ್ವಕ್ಕೆ ಸಾರಿದ ಗೋಲಗುಂಬಜ್ ಆವರಣದಲ್ಲಿ ಯೋಗ ದಿನ ಸಂಘಟಿಸಿ ಜಿಲ್ಲೆಯ ಸರ್ವ ಸಮುದಾಯದ ಜನರನ್ನು ಒಂದೆಡೆ ಸೇರಿಸಿದ ಪ್ರಯತ್ನ ಅಭಿನಂದನಾರ್ಹ ಎಂದು ತಿಳಿಸಿದರು.

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ದೇವಾನಂದ ಚವ್ಹಾಣ ಮಾತನಾಡಿ, ಶಾರೀರಿಕ, ಮಾನಸೀಕ ಆರೋಗ್ಯಕ್ಕೆ ಸಹಕಾರಿಯಾಗುವ ಯೋಗವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡಲ್ಲಿ ಈ ಕಾರ್ಯಕ್ರಮ ಸಾರ್ಥಕವಾಗಲಿದೆ ಎಂದು ತಿಳಿಸಿದರು.

ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮಾತನಾಡಿ, ಯೋಗಕ್ಕೆ ತನ್ನದೇ ಆದ ಐತಿಹ್ಯವಿದೆ. ಪ್ರಾಚೀನ ಕಾಲದಿಂದಲೂ ಯೋಗ ಮನೆಮಾತಾಗಿದೆ.  ಜನಹಿತ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಯೋಗಕ್ಕೆ ವಿಶೇಷ ಆದ್ಯತೆ ನೀಡಿವೆ.  ದೇಶದ 75 ಐತಿಹಾಸಿಕ ತಾಣಗಳ ಪೈಕಿ ನಮ್ಮ ವಿಜಯಪುರ ಕೂಡ ಒಂದಾಗಿ ಐತಿಹಾಸಿಕ ತಾಣದಲ್ಲಿ ನಾವಿಂದು ಯೋಗ ಮಾಡುತ್ತಿರುವುದು ನಮ್ಮ ಸೌಭಾಗ್ಯ ಎಂದು ತಿಳಿಸಿದರು.

ಈ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷರಾದ ವಿಜುಗೌಡ ಎಸ್.ಪಾಟೀಲ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಅಶೋಕ ಅಲ್ಲಾಪೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಹರಿ ಗೊಳಸಂಗಿ, ಎಸ್ಪಿ ಎಚ್. ಡಿ. ಆನಂದ ಕುಮಾರ, ಜಿಲ್ಲಾ ಪಂಚಾಯಿತಿ ಸಿಇಓ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ದಿ, ವಿಜಯಪುರ ಡಿವೈಎಸ್ಪಿ ಲಕ್ಷ್ಮಿನಾರಾಯಣ, ಮಹಾನಗರ ಪಾಲಿಕೆಯ ಆಯುಕ್ತ ವಿಜಯಕುಮಾರ ಮೆಕ್ಕಳಕೆ, ಜಿಲ್ಲಾ ಆಯುಷ್ ಅಧಿಕಾರಿ ಅನುರಾಧಾ ಎಲ್. ಚಂಚಲಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಪತಂಜಲಿಯ ಯೋಗಪಟು ನಾಗೂರು ಹಾಗೂ ಇತರರು ಉಪಸ್ಥಿತರಿದ್ದರು.

ವೀರೇಶ ವಾಲಿ ಮತ್ತು ತಂಡದವರು ನಾಡಗೀತೆ ಹಾಡಿದರು. ಸಂಗೀತಾ ಮಠಪತಿ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌