ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ನೀಡುವಂತೆ ಹೋರಾಟ ನಡೆಸುತ್ತಿರುವ ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನಡೆಸುತ್ತಿರುವ ಹೋರಾಟವನ್ನು ಉಪೇಕ್ಷಿಸಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ವಕ್ತಾರ ಸಂಗಮೇಶ ಬಬಲೇಶ್ವರ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಶ್ರೀಗಳು ಮೀಸಲಾತಿಗೆ ಆಗ್ರಹಿಸಿ ಕೂಡಲ ಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿ ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ ನಡೆಸಿದ್ದಾರೆ. ಆದರೂ, ಸಮುದಾಯಕ್ಕೆ 2A ಮೀಸಲಾತಿ ನೀಡಿಲ್ಲ. ರಾಜ್ಯ ಸರಕಾರ ಶ್ರೀಗಳ ಹೋರಾಟ ಮತ್ತು ಸಮುದಾಯದ ಜನರ ಬೇಡಿಕೆಯನ್ನು ಉಪೇಕ್ಷಿಸಿದರೆ ಭವಿಷ್ಯದ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ.
ಎಲ್ಲರೊಂದಿಗೆ ಬೆರೆತು ಬಾಳುವ ಕೃಷಿ ಪ್ರಧಾನ ಪಂಚಮಸಾಲಿ ಸಮುದಾಯದ ಬಹುದಿನಗಳ ಬೇಡಿಕೆಯನ್ನು ನಮ್ಮದೇ ಸಮುದಾಯದ ಸಚಿವರ ಮೂಲಕ ನಮ್ಮ ಜಗದ್ಗುರುಗಳಿಗೆ ಮತ್ತು ಹೋರಾಟಗಾರರಿಗೆ ಮನವರಿಕೆ ಮಾಡಿಕೊಡುವ ನೆಪದಲ್ಲಿ ಜಗದ್ಗುರುಗಳು ನೀಡುವ ಗಡುವನ್ನು ವಿಸ್ತರಿಸುತ್ತ ಹೋಗುತ್ತಿರುವುದು ಸಮಾಜ ಸಮಾಜ ಬಾಂಧವರಲ್ಲಿ ವ್ಯಾಪಕವಾದ ಆಕ್ರೋಶ ಮೂಡಲು ಕಾರಣವಾಗಿದೆ. ಬುಧವಾರ ಕೂಡ ನಮ್ಮದೇ ಸಮುದಾಯದ ಮುಖಂಡರು ಮತ್ತು ಸಚಿವ ಸಿ ಸಿ ಪಾಟೀಲ ಅವರ ನಿವಾಸದಲ್ಲಿ ಜಗದ್ಗುರುಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮತ್ತೆ ಎರಡು ತಿಂಗಳ ಕಾಲಾವಕಾಶ ಕೇಳಲಾಗಿದೆ. ಅದಕ್ಕೆ ಜಗದ್ಗುರುಗಳು ಮತ್ತು ಸಭೆಯಲ್ಲಿದ್ದ ಮುಖಂಡರು ಕೂಡ ಸಹಮತ ವ್ಯಕ್ತಪಡಿಸಿದ್ದಾರಾದರೂ ನಾಡಿನಾದ್ಯಂತ ಸಮಾಜ ಬಾಂಧವರ ಸಹನೆಯ ಕಟ್ಟೆಯೊಡೆಯುವ ಮೊದಲೇ ಮಾತು ಕೊಟ್ಟಂತೆ ಮುಖ್ಯಮಂತ್ರಿಗಳು ನಡೆದುಕೊಳ್ಳಬೇಕು ಎಂದು ಬಬಲೇಶ್ವರ ಆಗ್ರಹಿಸಿದ್ದಾರೆ.
ಐತಿಹಾಸಿಕ ಪಾದಯಾತ್ರೆಯ ಮೂಲಕ ಸಮುದಾಯದಲ್ಲಿ ಜಾಗೃತಿಯನ್ನು ಮೂಡಿಸಿರುವ ಶ್ರೀಗಳ ಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ. ಆ ಶ್ರಮ ವ್ಯರ್ಥವಾಗಲು ನಾವು ಬಿಡುವುದಿಲ್ಲ. ಯಾರೇ ಆಗಲಿ ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಸಮಾಜವನ್ನು ಮತ್ತು ಜಗದ್ಗುರುಗಳ ಘನತೆ ಕುಂದಿಸುವ ಪ್ರಯತ್ನ ಮಾಡಬಾರದು. ಸರಕಾರ ಕೂಡ ಆದಷ್ಟು ಬೇಗ ಆಯೋಗದಿಂದ ವರದಿಯನ್ನು ತರಿಸಿಕೊಂಡು ಬೇಡಿಕೆ ಈಡೇರಿಸಲಿ ಎಂದು ಎಂದು ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ.