Bankers Jigajinagi: ಬಾಕಿ ಇರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ- ರಮೇಶ ಜಿಗಜಿಣಗಿ

ವಿಜಯಪುರ: ನಾನಾ ಯೋಜನೆಗಳಡಿ ಬಾಕಿ ಇರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಎಂದು ಸಂಸದ ರಮೇಶ ಜಿಗಜಿಣಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ ಜಿ. ಪಂ. ಸಭಾಂಗಣದಲ್ಲಿ ನಡೆದ ನಾನಾ ಬ್ಯಾಂಕುಗಳ ಮುಖ್ಯಸ್ಥರು ಮತ್ತು ಜಿಲ್ಲಾ ಮಟ್ಟದ ಇಲಾಖೆಗಳ ಅಧಿಕಾರಿಗಳ ಜಿಲ್ಲಾ ಮಟ್ಟದ ಬ್ಯಾಂಕುಗಳ ಸಮೀಕ್ಷೆ ಸಭೆಯಲ್ಲಿ ಅವರು ಮಾತನಾಡಿದರು.

ಜಿ. ಪಂ. ಸಭಾಂಗಣದಲ್ಲಿ ಸಂಸದ ರಮೇಶ ಜಿಗಜಿಣಗಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಬೀದಿ ಬದಿ ವ್ಯಾಪಾರಿಗಳ ಪಿಎಂ ಸ್ವನಿಧಿ, ಪಿಎಂಇಜಿಪಿ ಮತ್ತು ಡೇ ನಲ್ಮ ಸೇರಿದಂತೆ ಜಿಲ್ಲೆಯಲ್ಲಿ ನಾನಾ ಬ್ಯಾಂಕುಗಳಲ್ಲಿ ಬಾಕಿ ಇರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ ಅವರು, ಜಿಲ್ಲೆಯಲ್ಲಿ ಹೆಚ್ಚಿನ ರೈತರು ದೀರ್ಘಾವಧಿ ಕೃಷಿ ಸಾಲ ಪಡೆದು ತಮ್ಮ ಕೃಷಿ ಭೂಮಿ ಅಭಿವೃದ್ಧಿ ಪಡಿಸಿ ಕೃಷಿ ಉತ್ಪನ್ನ ಹೆಚ್ಚು ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಈ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಜುಲೈನಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಅಡಿಯಲ್ಲಿ ಸ್ವಾನಿಧಿ ಉತ್ಸವ ಆಯೋಜಿಸಲಾಗುತ್ತಿದ್ದು, ಎಲ್ಲಾ ಬ್ಯಾಂಕಿನ ಅಧಿಕಾರಿಗಳು ಕೈಜೋಡಿಸಿ ಈ ಕಾರ್ಯಕ್ರಮದ ಯಶಸ್ಸಿಗೆ ಸಹಾಯ ಮಾಡಬೇಕು ಎಂದು ಹೇಳಿದರು.

ನಾನಾ ಬ್ಯಾಂಕಗಳಲ್ಲಿ ಬಾಕಿ ಇರುವ ಬೆಳೆ ವಿಮೆ ಅರ್ಜಿಗಳು, ಸಾಲ ಮನ್ನಾ ಯೋಜನೆ-2008ರ ಅರ್ಹ ಫಲಾನುಭವಿಗಳ ಅರ್ಜಿಗಳು, ತಹಸೀಲ್ದಾರ್ ಮಟ್ಟದಲ್ಲಿ ಹಾಗೂ ಬ್ಯಾಂಕ್ ಗಳ ಮಟ್ಟದಲ್ಲಿ ಬಾಕಿ ಇರುವ ಅರ್ಜಿಗಳನ್ನು ಕೂಡಲೆ ವಿಲೇವಾರಿ ಮಾಡುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಮಾತನಾಡಿ, ಜಿಲ್ಲಾ ಮಟ್ಟದ ನಾನಾ ಇಲಾಖೆ ಅಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳು ಒಮ್ಮತದಿಂದ ಜಿಲ್ಲೆಯ ಅಭಿವೃದ್ಧಿಗಾಗಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಿವೈಎಸ್ಪಿ  ಜಯಪ್ರಕಾಶ ನ್ಯಾಮಗೌಡ, ಲೀಡ್ ಜಿಲ್ಲಾ ಆಫಿಸರ್ ಆರ್ಬಿಐ ಶ್ರೀಶಾಂತ ಪ್ರಕಾಶ, ಲೀಡ್ ಬ್ಯಾಂಕಿನ ವ್ಯವಸ್ಥಾಪಕ ನರೇಂದ್ರ ಬಾಬು, ನಬಾರ್ಡ್ ಬ್ಯಾಂಕಿನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿಕಾಸ ರಾಠೋಡ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌