ವಿಜಯಪುರ: ಐಟಿ, ಇಡಿ ಮತ್ತು ಸಿಬಿಐ(IT, ED And CBI)ನಂಥ ತನಿಖಾ ಸಂಸ್ಥೆಗಳು(Investigation Agencies) ಬಿಜೆಪಿಯ ಅಂಗಸಂಸ್ಥೆಗಳಾಗಿವೆ. ಬಿಜೆಪಿ ಐಟಿ ಡಿಪಾರ್ಟಮೆಂಟ್, ಬಿಜೆಪಿ ಇಡಿ ಡಿಪಾರ್ಟಮೆಂಟ್, ಬಿಜೆಪಿ ಸಿಬಿಐ ಡಿಪಾರ್ಟಮೆಂಟ್ ನಂತೆಕೆಲಸ ಮಾಡುತ್ತಿವೆ. ಈ ಎಲ್ಲ ವಿರೋಧಿ ಕೆಲಸಗಳಿಗೆ ಜನ ಇತಿಶ್ರೀ(People Say Bye) ಹಾಡಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ(KPCC Campaign Committee Chairman) ಎಂ. ಬಿ. ಪಾಟೀಲ(M B Patil) ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಂದು ಕಾಲದಲ್ಲಿ ಕಾಂಗ್ರೆಸ್ ನಾಯಕರು ನಮ್ಮನ್ನು ಬಿಟ್ಟರೆ ಬೇರೆ ಯಾರೂ ಅಧಿಕಾರಕ್ಕೆ ಬರುವುದಿಲ್ಲ ಎಂಬ ಭಾವನೆ ಹೊಂದಿದ್ದರು. ಇವತ್ತು ನಮಗೆ ಸಾಕಷ್ಟು ಹಿನ್ನಡೆಯಾಗಿದೆ. ಈಗ ಬಿಜೆಪಿಯ ಹಿನ್ನಡೆ ಆರಂಭವಾಗಿದೆ. ಮಮತಾ ಬ್ಯಾನರ್ಜಿ ಸಿಎಂ ಆಗಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ ಎಂದು ಹೇಳಿದರು.
ಬಿಜೆಪಿಯವರ ಈ ಆಟ ಬಹಳ ದಿನ ನಡೆಯುವುದಿಲ್ಲ. ಪಾಪದ ಕೊಡ ತುಂಬಿ ಬಂದ ಮೇಲೆ ಜನ ಇತಿಶ್ರೀ ಹಾಡಲಿದ್ದಾರೆ. ಪ್ರಜಾಪ್ರಭುತ್ವದ ವಿರುದ್ಧವಾಗಿ ನಡೆಯುತ್ತಿರುವ ಆಪರೇಷನ್ ಕಮಲ ಮತ್ತಿತರ ವಿಚಾರಗಳಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ. ಕರ್ನಾಟಕ ಮತ್ತು ಇತರ ಕಡೆ ಬಿಜೆಪಿ ಆಪರೇಷನ್ ಕಮಲ ಎಂಬ ಹೆಸರಿನಲ್ಲಿ ಪ್ರಜಾಪ್ರಭುತ್ವ ವಿರೋಧಿ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಶಾಸಕರಿಗೆ ದುಡ್ಡು ನೀಡಿ ರಾಜಿನಾಮೆ ಕೊಡಿಸಿ ಮತ್ತೆ ಅವರನ್ನು ಚುನಾವಣೆಗೆ ನಿಲ್ಲಿಸಿ ಅವರ ಸಹಾಯದಿಂದ ಸರಕಾರವನ್ನು ರಚಿಸಿದ್ದು ಈಗಾಗಲೇ ನಡೆದಿದೆ. ಈಗ ಇದೇ ಕೆಲಸ ಮಹಾರಾಷ್ಟ್ರದಲ್ಲಿ ನಡೆಯುತ್ತಿದೆ ಎಂದು ಎಂ. ಬಿ. ಪಾಟೀಲ ಆರೋಪಿಸಿದರು.
ಇದು ಸ್ವಲ್ಪ ದಿನ ನಡೆಯುತ್ತದೆ. ಇಂದಲ್ಲ ನಾಳೆ ಬಿಜೆಪಿಯ ಈ ಎಲ್ಲ ವ್ಯವಸ್ಥೆಗಳ ವಿರುದ್ಧ ಜನ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅಗ್ನಿಪಥ ಯೋಜನೆ ಜಾರಿ ವಿಚಾರದಲ್ಲೂ ಇದೇ ರೀತಿಯಾಗಿದೆ. ನಾವು ಮಾಡಿದ್ದೆಲ್ಲ ನಡೆಯುತ್ತದೆ ಎಂಬ ಭಾವನೆ ಅವರಲ್ಲಿದೆ. ಸ್ವಲ್ಪ ದಿನ ಕೆಲವು ಜನರನ್ನು ಮೋಸ ಮಾಡಬಹುದು. ಬಹಳಷ್ಟು ಮೂರ್ಖರನ್ನಾಗಿ ಮಾಡಬಹುದು. ಆದರೆ, ಎಲ್ಲ ಸಮಯದಲ್ಲೂ ಎಲ್ಲರನ್ನೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಇವರಿಗೆ ರಾಷ್ಟ್ರ ಮತ್ತು ರಾಜ್ಯದ ಜನ ಪಾಠ ಕಲಿಸುವ ಕಾಲ ಬಂದಿದೆ. ಮಾಹಾರಾಷ್ಟ್ರದ ಜನರು ಈ ನಿಟ್ಟಿನಲ್ಲಿ ತೀರ್ಮಾನ ಮಾಡುತ್ತಾರೆ ಎಂದು ಅವರು ಹೇಳಿದರು.
ಇದು ಪ್ರಜಾತಂತ್ರ ವಿರೋಧಿ ಕೆಲಸ. ನಾವಿದನ್ನು ಖಂಡಿಸುತ್ತೇವೆ. ಚುನಾವಣೆಯಲ್ಲಿ ನೇರವಾಗಿ ಗೆದ್ದು ಬನ್ನಿ. ಕರ್ನಾಟಕದಲ್ಲಿ ಇದೇ ರೀತಿ ಆಯಿತು. ಅವರು ಶಾಸಕರನ್ನು ಸೆಳೆದು ಸರಕಾರ ರಚನೆ ಮಾಡಿದರು. ಆಪರೇಷನ್ ಕಮಲದಿಂದ ರಚಿತವಾದ ಸರಕಾರ ಹೇಗೆ ಕೆಲಸ ಮಾಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದು 40 ಪರ್ಸೆಂಟ್ ಸರಕಾರ ಎಂದು ಗುತ್ತಿಗೆದಾರರ ಸಂಘದವರೇ ಹೇಳುತ್ತಿದ್ದಾರೆ. ಅಭಿವೃದ್ಧಿ ಶೂನ್ಯವಾಗಿದೆ ದಿಕ್ಕು ದಿಸೆ ಇಲ್ಲದೆ ಸರಕಾರ ನಡೆಯುತ್ತಿದೆ. ಇವರ ನಡವಳಿಕೆಗೆ ಜನ ಒಂದು ದಿನ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ. ಇತಿಶ್ರೀ ಹಾಡಲಿದ್ದಾರೆ ಎಂದು ಮಾಜಿ ಸಚಿವರೂ ಆಗಿರುವ ಎಂ. ಬಿ. ಪಾಟೀಲ ಹೇಳಿದರು.
ಪಠ್ಯಕ್ರಮ ವಿಚಾರ
ಚಕ್ರತೀರ್ಥ ಇತಿಹಾಸ ತಿರುಚಿದ್ದು ಎಲ್ಲರಿಗೂ ಗೊತ್ತಿದೆ. ಮೊದಲಿಗೆ ಮುಸ್ಲಿಮರನ್ನು ಗುರಿ ಮಾಡಿದರು. ನಂತರ ಬಸವಣ್ಣನವರ ಹಾಗೂ ನಾರಾಯಣ ಗುರು ಅವರ ಇತಿಹಾಸ ತಿರುಚಲಾಯಿತು. ಕುವೆಂಪು ಅವರನ್ನು ಬಿಡಲಿಲ್ಲ. ಆದಿಚುಂಚನಗಿರಿ ಮಹಾಸ್ವಾಮೀಜಿ, ಸಿದ್ದಗಂಗಾ ಸ್ವಾಮೀಜಿ ಮತ್ತು ಮಹಾತ್ಮ ಗಾಂಧಿಯನ್ನೂ ಬಿಡಲಿಲ್ಲ. ಇದು ಎಲ್ಲಿವರೆಗೆ ನಡೆಯುತ್ತೆ? ಇವರಿಗೆ ಜನ ಅಂತಿಮ ಮುದ್ರೆ ಒತ್ತಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದರು.
ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ ಎಂದು ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ ಎಂಬುದನ್ನು ಒಪ್ಪಬಹುದು. ನಾವು ಕೂಡ ಸನ್ಯಾಸಿಗಳಲ್ಲ. ಆದರೆ ಆಪರೇಷನ್ ಕಮಲದಂಥ ಪ್ರಜಾತಂತ್ರದ ವಿರುದ್ಧವಾದ ನಡೆಗಳ ಮೂಲಕ ಅಧಿಕಾರಕ್ಕೆ ಬರುವುದು ತಪ್ಪು. ಸನ್ಯಾಸತ್ವ ಬಿಡಲು ಏನು ಬೇಕಾದರೂ ಮಾಡಬಹುದಾ? ಅನೈತಿಕ ಕೆಲಸ ಮಾಡಬಹುದಾ? ಪ್ರಜಾತಂತ್ರವನ್ನು ಕಗ್ಗೊಲೆ ಮಾಡಿ ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬರುವುದಕ್ಕಿಂತ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಿರಿ ಎಂದು ಅವರು ವಾಗ್ದಾಳಿ ನಡೆಸಿದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ
ಉತ್ತರ ಕರ್ನಾಟಕವನ್ನು ಪ್ರತ್ಯೇಕ ಮಾಡುವ ಕುರಿತು ಸಚಿವ ಉಮೇಶ ಕತ್ತಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಚಿವ ಉಮೇಶ್ ಕತ್ತಿ ಹೇಳಿರುವುದು ನನ್ನ ಗಮನಕ್ಕೆ ಬಂದಿಲ್ಲ. ಆ ಬಗ್ಗೆ ಉಮೇಶ ಕತ್ತಿ ಅವರನ್ನೇ ಕೇಳಿ. ನಮ್ಮದು ಅಖಂಡ ಭಾರತ ಮತ್ತು ಅಖಂಡ ಕರ್ನಾಟಕ. ಹಿರಿಯರ ತ್ಯಾಗ ಮತ್ತು ಬಲಿದಾನದಿಂದಾಗಿ ಒಂದಾಗಿದ್ದೇವೆ. ನಮ್ಮದು ಸಮಗ್ರ ಕರ್ನಾಟಕದ ಪರಿಕಲ್ಪನೆಯಾಗಬೇಕು. ಉತ್ತರ ಕರ್ನಾಟಕ ಸಮಗ್ರವಾಗಿ ಅಭಿವೃದ್ಧಿಯಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಪ್ರತ್ಯೇಕ ರಾಜ್ಯ ಬೇಡಿಕೆ ಸೂಕ್ತವಾದುದಲ್ಲ ಎಂದು ಎಂ. ಬಿ. ಪಾಟೀಲ ಹೇಳಿದರು.