ವಿಜಯಪುರ: ಮೈಲಿಗೆ ತೊಳೆಯುವ ಹೆಸರಿನಲ್ಲಿ ಭಕ್ತರು ನದಿ ತೀರಕ್ಕೆ ತೆರಳಿ, ತಾವು ಧರಿಸಿದ ಮತ್ತು ಈ ಹಿಂದೆ ತ್ಯಜಿಸಿದ ಬಟ್ಟೆ ಮತ್ತೀತರ ವಸ್ತುಗಳನ್ನು ಹೊಳೆ ನೀರಿಗೆ ಎಸೆಯುವುದು ಹೆಚ್ಚಾಗುತ್ತಿದೆ. ತಾವು ಪವಿತ್ರರಾಗುವ ಹೆಸರಿನಲ್ಲಿ ಭಕ್ತರು ನದಿಗಳನ್ನು ಮಲೀನಗೊಳಸುವುದು ನದಿ ತೀರದ ಗ್ರಾಮಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಅದರಲ್ಲೂ ನದಿ ತೀರದಿಂದ ದೇವಸ್ಥಾನಗಳು ಅಣತಿ ದೂರದಲ್ಲಿದ್ದರೆ ಸಾಕು ತ್ಯಾಜ್ಯಗಳನ್ನು ನೀರಿಗೆ ಎಸೆಯುವ ಕಾರ್ಯ ಹೆಚ್ಚಾಗಿಯೇ ನಡೆಯುತ್ತದೆ.
ಇದೇ ರೀತಿ ಉತ್ತರ ಕರ್ನಾಟಕದ ಜೀವ ನದಿ ಕೃಷ್ಣಾ ತೀರದಲ್ಲಿ ಹರಡಿದ್ದ ಸುಮಾರು ಎರಡು ಕಿ. ಮೀ. ಗೂ ಹೆಚ್ಚಿನ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಮೂಲಕ ಬಸವ ನಾಡಿನ ಸ್ವಾಮೀಜಿಯೊಬ್ಬರು ಗಮನ ಸೆಳೆದಿದ್ದಾರೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಷಯದ ಬಳಿ ಇರುವ ಕೃಷ್ಣಾ ತೀರದ ಶ್ರೀ ಚಂದ್ರಗಿರಿ ಚಂದ್ರಮ್ಮ ತಾಯಿ ದೇವಸ್ಥಾನದ ಹತ್ತಿರ ಈ ಸ್ವಚ್ಛತಾ ಕಾರ್ಯ ನಡೆದಿದೆ. ಸ್ವಾಮೀಜಿ ನೀಡಿದ ಕರೆಗೆ ಓಗೊಟ್ಟ ಕನ್ನಡಿಗ ನಿಮ್ಮ ಸೇವೆಗೆ ಸದಾ ಸಿದ್ಧನಾ ಯುವಕರು ಈ ಅಭಿಯಾನಕ್ಕೆ ಕೈಜೋಡಿಸಿ ಸ್ವಯಂಸೇವಕರಾಗಿ ದುಡಿದಿದ್ದಾರೆ. ಸುಮಾರು 200 ಟ್ರ್ಯಾಕ್ಟರ್ ತ್ಯಾಜ್ಯ ವಿಲೇವಾರಿ ಮಾಡಿದರು.
ನಾಲ್ಕಾರು ವರ್ಷದಿಂದ ಯಾರೊಬ್ಬರೂ ಸ್ವಚ್ಛಗೊಳಿಸದೆ ಕಲ್ಮಶ ಗೊಂಡಿದ್ದ ಈ ನದಿ ತೀರದ ಮಾಹಿತಿ ಪಡೆದ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಂಗಳವೇಡೆ ತಾಲೂಕಿನ ಸುಕ್ಷೇತ್ರ ಶ್ರೀ ಮಹಾಳಿಂಗರಾಯ ದೇವಸ್ಥಾನದ ಪಟ್ಟದ ದೇವರು ಮತ್ತು ಮಹಾಳಿಂಗರಾಯರ ವಂಶಸ್ಥರಾದ ಶ್ರೀ ಮಹಾಳಿಂಗರಾಯರು ನೂರಾರು ಯುವಕರೊಂದಿಗೆ ಸ್ವತಃ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ನದಿಯಲ್ಲಿ ನೀರು ಪಾಲಾಗಿದ್ದ ಮತ್ತು ನದಿ ದಡಕ್ಕೆ ಬಂದು ಬಿದ್ದಿದ್ದ ಬಟ್ಟೆ ಮತ್ತೀತರ ತ್ಯಾಜ್ಯಗಳನ್ನು ತಾವೇ ಖುದ್ದಾಗಿ ಸಂಗ್ರಹಿಸಿದ್ದಾರೆ. ಸಂಗ್ರಹಿಸಲಾದ ಕಸವನ್ನು ಸ್ವಯಂ ಸೇವಕರ ಸಹಾಯದಿಂದ ಟ್ರ್ಯಾಕ್ಟರ್ ಗೆ ತುಂಬಿದ್ದಾರೆ. ಅಲ್ಲದೇ ಆ ಟ್ರ್ಯಾಕ್ಟರನ್ನು ಚಲಾಯಿಸಿಕೊಂಡು ಮುಂದೆ ಸಾಗಿದ್ದಾರೆ. ಈ ಮೂಲಕ ನದಿ ತೀರ ಮತ್ತು ಈ ದಡದಲ್ಲಿರುವ ದೇವಸ್ಥಾನ ಬಳಿ ಸುಮಾರು ಎರಡು ಕಿಲೋಮೀಟರ್ ಹೆಚ್ಚಿನ ಪ್ರದೇಶದಲ್ಲಿ ಬಿದ್ದಿದ್ದ ನಾನಾ ತ್ಯಾಜ್ಯವನ್ನು ಹೊರ ತೆಗೆದು ಭೇಷ್ ಎನಿಸಿಕೊಂಡಿದ್ಸಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಲಮೂಲಗಳನ್ನು ಮನುಷ್ಯರು ಮನುಷ್ಯರೇ ಮಲೀನಗೊಳಿಸುತ್ತಾರೆ. ಅವರೇ ಇದನ್ನು ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ, ಈ ತ್ಯಾಜ್ಯದ ವಿಷಕಾರಿ ಅಂಶಗಳು ಪ್ರಾಣಿ, ಪಕ್ಷಿ, ಜಲಚರಗಳಿಗೆ ಕಂಟಕ ತಂದೊಡ್ಡುತ್ತಿವೆ. ಇಂಥ ಸ್ವಚ್ಛ ಅಭಿಯಾನದಲ್ಲಿ ಪಾಲ್ಗೊಳ್ಳುವುದಷ್ಟೇ ಜೀವಕುಲ ಸಂರಕ್ಷಿಸಲು ಕೈಜೋಡಿಸಬೇಕು ಎಂದು ಕರೆ ನೀಡಿದ್ದಾರೆ.
ನ್ಯಾಯವಾದಿ ಧರೆಪ್ಪ ಅರ್ಧಾವೂರ, ಮುಖಂಡರಾದ ವಿಕಾಸ ಜೋಗಿ, ಆಕಾಶ ಕಾರಿಕೋಳ, ರಮೇಶ ಮಾಗಿ, ಯಲಗುರೇಶ್ ಮೇಟಿ, ಸಿದ್ದು ಗುಣಕಿ, ರವಿ ಚವ್ಹಾಣ, ರವಿ ವಡ್ಡೋಡಗಿ, ಶ್ರೀಶೈಲ ಬಂಚೋಡಿ, ಸೋಮ ಪೂಜಾರಿ, ಲಕ್ಷ್ಮಣ ಖಣಿಮನಿ
ಮತ್ತು ಸರ್ವ ಧರ್ಮದ ಯುವಮುಖಂಡರು ಪಾಲ್ಗೊಂಡಿದ್ದಾರೆ. ಅಲ್ಲದೇ, ಸುತ್ತಮುತ್ತಲಿನ ನಾನಾ ಗ್ರಾಮಗಖ ಕೈ ಜೋಡಿಸಿ ಬೆ. 10 ರಿಂದ ಸಂ. 5ರ ವರೆಗೆ ಏಳು ಗಂಟೆಗಳ ಕಾಲ ಸ್ವಚ್ಛತೆ ಕೈಗೊಂಡಿದ್ದಾರೆ. ಈ ಅಭಿಯಾನದಲ್ಲಿ ಪಾಲ್ಗೊಂಡ ಜನರಿಗೆ ನಿಡಗುಂದಿ ತಾಲೂಕಿನ ಪೂಜ್ಯರ ಭಕ್ತರು ಊಟದ ವ್ಯವಸ್ಥೆ ಮಾಡಿ ಬೆಂಬಲಿಸಿದ್ದಾರೆ.
ಬಳಿಕ ಎಲ್ಲರೂ ಸೇರಿ ಚಂದ್ರಮ್ಮ ದೇವಿಯ ದರ್ಶನ ಪಡೆದು ಚಂದ್ರಗಿರಿಯ ಮಠಕ್ಕೆ ಭೇಟಿಕೊಟ್ಟು ವಿಜಯಪುರಕ್ಕೆ ಮರಳಿದ್ದಾರೆ.