Dress Code: ಸರಕಾರಿ ಡಿಗ್ರಿ ಕಾಲೇಜಿನಲ್ಲಿ ಸಮವಸ್ತ್ರ ಜಾರಿ ನಿರ್ಣಯಕ್ಕೆ ಶಾಸಕರ ಅಧ್ಯಕ್ಷತೆಯ ಸಿಡಿಸಿ ಸಮಿತಿ ಅನುಮತಿ

ವಿಜಯಪುರ:  ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಆಗಿರುವ ವಿಜಯಪುರ ನಗರ ಶಾಸಕರಾಗಿರುವ ಬಸನಗೌಡ ಆರ್.ಪಾಟೀಲ (ಯತ್ನಾಳ) ಇವರ ಅಧ್ಯಕ್ಷತೆಯಲ್ಲಿ ಜೂನ್ 28ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿ ಸಭೆ ನಡೆಯಿತು.

ಈ ವೇಳೆ ಮಾತನಾಡಿದ ಶಾಸಕರು, ಕಾಲೇಜಿಗೆ ಬೇಕಾದ ಕೆಲವು ಅತ್ಯವಶ್ಯಕವಾದ ಸೌಕರ್ಯಗಳನ್ನು ಒದಗಿಸಿಕೊಡಲು ಭರವಸೆ ನೀಡಿದರು.

ಸಭೆಯಲ್ಲಿ, ವಿದ್ಯಾರ್ಥಿಗಳ ಬೇಡಿಕೆಯಂತೆ ಸಮವಸ್ತ್ರ ಜಾರಿ ಬಗ್ಗೆ ಚರ್ಚೆ ನಡೆಯಿತು. ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ಶಿಸ್ತು ಕಾಪಾಡಲು ಸಮವಸ್ತ್ರ ಅವಶ್ಯಕವಾಗಿರುವುದರಿಂದ ಹಾಗೂ ವಿದ್ಯಾರ್ಥಿಗಳ ಬೇಡಿಕೆಯೂ ಇರುವುದರಿಂದ ಮತ್ತು ಪ್ರಸ್ತುತ ಕಾಲೇಜಿನಲ್ಲಿ ನ್ಯಾಕ್ ಪ್ರಕ್ರಿಯೆ ಪ್ರಗತಿಯಲ್ಲಿರುವುದರಿಂದ ವಿದ್ಯಾರ್ಥಿಗಳ ಶಿಸ್ತಿಗಾಗಿ ಸಮವಸ್ತç ಅವಶ್ಯವಿರುತ್ತದೆ. ಈ ವಿಷಯ ಈಗಾಗಲೇ ಕಾಲೇಜಿನ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ ಸಮವಸ್ತ್ರ ಜಾರಿ ತರಲು ನಿರ್ಣಯ ಕೈಗೊಳ್ಳಲಾಗಿತ್ತು. ಹಾಗೂ ಸಿಡಿಸಿ ಅನುಮತಿ ಪಡೆಯಲು ನಿರ್ಧರಿಸಲಾಗಿತ್ತು ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎ.ಟಿ.ಮುದಕಣ್ಣವರ ಎ.ಟಿ. ಅವರು ಸಭೆಗೆ ತಿಳಿಸಿದರು.

ಅದರಂತೆ ಜೂನ್ 28ರಂದು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಕಾಲೇಜಿನ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಶಾಸಕರು ಸೇರಿದಂತೆ ಸಿಡಿಸಿ ಸದಸ್ಯರಾದ ಅಶೋಕ ದತ್ತುರಾವ್ ದೇಶಪಾಂಡೆ, ಮಹಾದೇವಪ್ಪ ನೀಲಪ್ಪ ದಿಂಡೂರ, ಸದಾಶಿವ ಷಣ್ಮುಖಪ್ಪ ಗುಡ್ಡೋಡಗಿ, ಸಂಗನಗೌಡ ಎಚ್.ನಾಡಗೌಡ, ಪ್ರಕಾಶ ಎಸ್.ಪಾಟೀ. (ಹಾಲಳ್ಳಿ), ವೆಂಕಟೇಶ ಚಿದಂಬರಾವ್ ಕುಲಕರ್ಣಿ, ಮಡಿವಾಳ ಯಾಳವಾರ, ಆನಂದ ವಿಜಯ ಚೌಧರಿ, ಮಲ್ಲಮ್ಮ ರಾ.ಜೋಗುರ ಅವರು ಅನುಮತಿ ನೀಡಿ ಠರಾವು ಪಾಸು ಮಾಡಿದರು. ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕೂಡ ಇದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಎ.ಐ.ಹಂಜಗಿ ಸ್ವಾಗತಿಸಿದರು. ಪ್ರೊ.ಬಿ.ಜಿ.ಪತ್ತಾರ ವಂದಿಸಿದರು. ಡಾ.ಚಂದ್ರಕಾಂತ ಬಿ. ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌