DC Grievances: ಮುದ್ದೇಬಿಹಾಳ ತಾಲೂಕು ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ

ವಿಜಯಪುರ: ಪ್ರತಿ ಮಂಗಳವಾರ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿಗಳ ಭೇಟಿ’ ಕಾರ್ಯಕ್ರಮದ ಪೂರ್ವನಿಯೋಜಿತ ವೇಳಾಪಟ್ಟಿಯಂತೆ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಜೂನ್ 28ರಂದು ಮುದ್ದೇಬಿಹಾಳ ತಾಲೂಕು ತಹಸೀಲ್ದಾರ ಕಚೇರಿಗೆ ಭೇಟಿ ನೀಡಿದರು.

ನಿಗದಿ ಪಡಿಸಿದ ಅವಧಿಗಿಂತ ಗಂಟೆಗೂ ಹೆಚ್ಚಿನ ಸಮಯ ಜಿಲ್ಲಾಧಿಕಾರಿಗಳು ತಾಲೂಕು ಕಚೇರಿಯಲ್ಲಿದ್ದು, ತಾಲೂಕಿನ ಸಾರ್ವನಿಕರ ಕುಂದುಕೊರತೆಗಳನ್ನು ಆಲಿಸಿದರು. ಈ ವೇಳೆ ಒಟ್ಟು 23 ಕುಂದುಕೊರತೆ ಅರ್ಜಿಗಳು ಸ್ವೀಕೃತವಾದವು. ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಅರ್ಜಿಗಳ ವಿಲೇವಾರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಮುದ್ದೇಬಿಹಾಳ ತಾಲೂಕಿನಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಸರ್ಕಾರದ ನಿಯಮಾವಳಿಯನ್ನು ಉಲ್ಲಂಘಿಸುತ್ತಿದ್ದಾರೆ ಎನ್ನುವ ಬಗ್ಗೆ ಹೆಚ್ಚಿನ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನಿಯಮಪಾಲನೆ ಮಾಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಮುದ್ದೇಬಿಹಾಳದಲ್ಲಿ ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ತಾಲೂಕಿನ ಜನರು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಹೋಗಿ ತಮ್ಮ ಕುಂದುಕೊರತೆಗಳನ್ನು ಹೇಳಬಾರದು. ತಾಲೂಕು ಕೇಂದ್ರಗಳಿಗೆ ಜಿಲ್ಲಾಧಿಕಾರಿಗಳೇ ಖುದ್ದು ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಬೇಕು ಎಂದು ಆಡಳಿತವನ್ನು ಜನರ ಬಳಿಗೆ ಕೊಂಡೋಯ್ಯುವ ಸರ್ಕಾರದ ಮಹತ್ವದ ಕಾರ್ಯಕ್ರಮದಂತೆ ತಾವು ಜೂನ್ 28ರಂದು ಮುದ್ದೇಬಿಹಾಳ ತಾಲೂಕು ತಹಸೀಲ್ದಾರ ಕಚೇರಿಗೆ ಭೇಟಿ ನೀಡಿದ್ದಾಗಿ ಹೇಳಿದರು. ಜಿಲ್ಲಾಧಿಕಾರಿಗಳಿಗೆ ಖುದ್ದು ಭೇಟಿ ನೀಡಿ ಸಲ್ಲಿಸುವ ಸಾರ್ವಜನಿಕರ ಯಾವುದೇ ರೀತಿಯ ಅಹವಾಲಿಗೆ ಜಿಲ್ಲಾಡಳಿತ ಮತ್ತು ತಾಲೂಕಾಡಳಿತದಿಂದ ತಕ್ಷಣ ಸ್ಪಂದಿಸಲಾಗುವುದು. ತಾಲೂಕಿನ ಸಾರ್ವಜನಿಕ ಯಾವುದೇ ರೀತಿಯ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ತಹಸೀಲ್ದಾರ ಬಿ.ಎಸ್.ಕಡಕಬಾವಿ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಎಸ್.ವೈ.ಹೊಕ್ರಾಣಿ, ಬಿಇಓ ಎಚ್.ಜಿ.ಮಿರ್ಜಿ ಸೇರಿದಂತೆ ಮುದ್ದೇಬಿಹಾಳ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Leave a Reply

ಹೊಸ ಪೋಸ್ಟ್‌