ವಿಜಯಪುರ: ರಾಷ್ಟೀಯ ನೇತ್ರ ಜ್ಯೋತಿ ಅಭಿಯಾನ ಅಂಗವಾಗಿ ಜಿಲ್ಲೆಯ ಒಂಬತ್ತು ಆಸ್ಪತ್ರೆಗಳಲ್ಲಿ ಉಚಿತವಾಗಿ ನೇತ್ರ ತಪಾಸಣೆ ಮಾಡಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ಹೇಳಿದರು.
ರಾಷ್ಟೀಯ ನೇತ್ರ ಜ್ಯೋತಿ ಅಭಿಯಾನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜೂನ್ 27ರ ಸಂಜೆ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಈ ಅಭಿಯಾನವು ಜಿಲ್ಲೆಯಲ್ಲಿ ಸರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರ ಸಹಾಯ ಕೂಡ ಪಡೆಯಬೇಕು. ಅವರಿಂದ ಮನೆಮನೆ ಭೇಟಿ ನಡೆಸಿ ಮಾಹಿತಿ ಪಡೆಯಬೇಕು. ಮಂದ ದೃಷ್ಟಿ, ಓದಿಗೆ ತೊಂದರೆಯಾಗುವ ಸಮೀಪ ದೃಷ್ಟಿ, ಒಂದು ವಾರಕ್ಕಿಂತ ಹೆಚ್ಚಿಗೆ ಕಣ್ಣು ನೋವು ಮತ್ತು ವಾರಕ್ಕಿಂತ ಹೆಚ್ಚು ಕಾಲ ಕಣ್ಣು ಕೆಂಪು ಬಗ್ಗೆ ಮಾಹಿತಿ ಸಂಗ್ರಹಿಸಿ ನೇತ್ರ ಚಿಕಿತ್ಸೆಗೆ ಏರ್ಪಾಡು ಮಾಡಬೇಕು ಎಂದರು.
ಅಭಿಯಾನ ಅಂಗವಾಗಿ ಎಲ್ಲ ಆರೋಗ್ಯ ಇಲಾಖೆಯ ಸಿಬ್ಬಂದಿ, ನೇತ್ರ ತಜ್ಞರು, ನೇತ್ರಾಧಿಕಾರಿಗಳು ಹಾಗೂ ಎನ್‌ಜಿಓ ಸಂಸ್ಥೆಗಳಾದ ಅನುಗ್ರಹ ಐ ಫೌಂಡೇಶನ್ ಮತ್ತು ಬಿಎಲ್‌ಡಿ ವೈದ್ಯಕೀಯ ಆಸ್ಪತ್ರೆ ಸೇರಿದಂತೆ ಎಲ್ಲರೂ ತಿಳಿಸುವ ದಿನಾಂಕದಂದು ಸಾಮಾನ್ಯ ಜನರಿಗೆ ನಿಗದಿಪಡಿಸಿದ ಆಸ್ಪತ್ರೆಗಳಲ್ಲಿ ನೇತ್ರ ತಪಾಸಣೆಗೆ ಏರ್ಪಾಡು ಮಾಡಬೇಕು ಎಂದರು.
ದೃಷ್ಟಿ ದೋಷ ಇರುವವರಿಗೆ ಕನ್ನಡಗಳನ್ನು ವಿತರಿಸಲು ಮತ್ತು ಮೋತಿ ಬಿಂದು (ಪರಿ ಬಂದವರಿಗೆ) ಆದವರಿಗೆ ಎಲ್ಲ ಆಸ್ಪತ್ರೆಗಳಲ್ಲಿ ಉಚಿತ ಶಸ್ತ್ರ ಚಿಕಿತ್ಸೆ ನಡೆಸಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿಗಳು, 50 ವರ್ಷ ಮೇಲ್ಪಟ್ಟ ಜಿಲ್ಲೆಯ ಎಲ್ಲಾ ಸಾಮಾನ್ಯ ಜನರು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ತಾಲೂಕು ಆಸ್ಪತ್ರೆಗಳಲ್ಲಿ ಉಚಿತ ನೇತ್ರ ತಪಾಸಣೆ ಮಾಡಿಸಿ ಉಚಿತವಾಗಿ ಮೋತಿ ಬಿಂದು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ತಿಳಿಸಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಮಾತನಾಡಿ, ಜಿಲ್ಲೆಯ ಜನರು ಈ ವಿಶೇಷ ಅಭಿಯಾನದ ಅನುಕೂಲ ಪಡೆಯಬೇಕು. ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ಫಲಾನುಭವಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮತ್ತು ಸಲಹೆಗಾಗಿ ಸಮುದಾಯ ಆರೋಗ್ಯ ಅಧಿಕಾರಿಗಳ ಹತ್ತಿರ ಪರೀಕ್ಷೆಗೆ ಕಳಿಹಿಸಲು ಕ್ರಮ ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಈಗಾಗಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಏಪ್ರಿಲ್‌ದಿಂದ ಮೇ ಮಾಹೆಯವರೆಗೆ ಒಟ್ಟು 300 ಹಾಗೂ ಎನ್‌ಜಿಓ ಸಂಸ್ಥೆಗಳಲ್ಲಿ 1566 ಜನರಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸಲಾಗಿದೆ ಎಂದು ಇದೆ ವೇಳೆ ಜಿಲ್ಲಾ ಅಂಧತ್ವ ನಿವಾರಣಾ ಅಧಿಕಾರಿ ಡಾ.ಸಂಪತ್ ಗುಣಾರಿ ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಎಸ್.ಎಲ್.ಲಕ್ಕನ್ನವರ, ಬಿಎಲ್‌ಡಿ ಮತ್ತು ಅನುಗ್ರಹ ಆಸ್ಪತ್ರೆಯ ಮುಖ್ಯಸ್ಥರು ಮತ್ತು ಪದಾಧಿಕಾರಿಗಳು, ರೋಗಿಗಳು ಮತ್ತು ರೋಗಿಗಳ ಸಂಬಂಧಿಕರು ಉಪಸ್ಥಿತರಿದ್ದರು.
ನೇತ್ರ ಸಮಸ್ಯೆಗಳು, ನೇತ್ರ ಪರೀಕ್ಷೆ, ರಾಷ್ಟೀಯ ನೇತ್ರ ಜ್ಯೋತಿ ಅಭಿಯಾನದ ಬಗ್ಗೆ ಡಾ.ಸಂಪತ್ ಗುಣಾರಿ ಅವರು ಪ್ರಾತ್ಯಕ್ಷಿಕೆಯ ಮೂಲಕ ಸಭೆಗೆ ಮಾಹಿತಿ ನೀಡಿದರು.