GP Building Inauguration: ತೆನ್ನಿಹಳ್ಳಿ ಗ್ರಾ. ಪಂ. ಕಟ್ಟಡ ಉದ್ಘಾಟಿಸಿದ ಇಂಡಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ

ವಿಜಯಪುರ: ಪಂಚಾಯಿತಿ ರಾಜ್ ವ್ಯವಸ್ಥೆಯು ಪ್ರಜಾಪ್ರಭುತ್ವ ತಳಹದಿ ಮೇಲೆ ನಿಂತಿದೆ. ಗ್ರಾಮಗಳ ಅಭಿವೃದ್ಧಿ ದೆಸೆಯಲ್ಲಿ ನಡೆಸುವ ಗ್ರಾಮ ಸಭೆಗಳಲ್ಲಿ ಪ್ರತಿ ನಾಗರಿಕನು ಭಾಗವಹಿಸುವಂತೆ ಮಾಡಬೇಕು. ಅಂದಾಗ ಮಾತ್ರ ಗ್ರಾಮಸ್ಥರ ಆಶಯಗಳ ಅನುಷ್ಠಾನ ಸಾಧ್ಯವಾಗಲಿದೆ ಎಂದು ಶಾಸಕರಾದ ಯಶವಂತರಾಯಗೌಡ ಪಾಟೀಲ ಹೇಳಿದರು.

2021-22ನೇ ಸಾಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ನಿರ್ಮಿಸಿದ ಇಂಡಿ ತಾಲೂಕಿನ ತೆನ್ನಿಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಕಾರ್ಯಾಲಯ ಮತ್ತು ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಜೂನ್ 27ರಂದು ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಾಮ ಸ್ವಚ್ಚತೆ’ಯು ಮಹತ್ವದ ಕಾರ್ಯವಾಗಿದೆ. ಇದು ಪ್ರತಿಯೊಬ್ಬರ ಮನೆಯಿಂದಲೇ ಆರಂಭವಾಗಬೇಕು. ನಮ್ಮೂರಿನ ಶಾಲೆಯೆಂದರೆ ಅದು ನಮ್ಮೂರಿನ ಭವಿಷ್ಯವನ್ನು ನಿರ್ಮಿಸುವ ಕೇಂದ್ರವಿದ್ದಂತೆ. ಪ್ರತಿ ಶಿಕ್ಷಕರೂ ವಿಶೇಷವಾಗಿ ಕಲಿಸಲು ಆಸಕ್ತಿ ತೋರಬೇಕು ಎಂದರು. ಈಗ ಪಂಚಾಯತಿಗಳಿಗೆ ಇರುವ ಅವಕಾಶ ಮತ್ತು ಅಧಿಕಾರವು ನಗರಗಳಿಗೆ ಇಲ್ಲ. ಆದ್ದರಿಂದ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಬೇಕು. ಸಾರ್ವಭೌಮತ್ವ ಎತ್ತಿ ಹಿಡಿಯುವ ಕೆಲಸ ಆಗಬೇಕು ಎಂದರು.

ತೆನಿಹಳ್ಳಿಯಲ್ಲಿ ಗ್ರಾ. ಪಂ. ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿ. ಪಂ. ಸಿಇಓ ರಾಹುಲ ಶಿಂಧೆ ಮಾತನಾಡಿದರು

ವಿಧಾನ ಪರಿಷತ್ ಶಾಸಕಾರದ ಪಿ.ಎಚ್.ಪೂಜಾರಿ ಅವರು ಮಾತನಾಡಿ, ಗ್ರಾಮಗಳು ಅಭಿವೃದ್ಧಿಯಾದಲ್ಲಿ ದೇಶದ ಅಭಿವೃದ್ಧಿ ಸಾಧ್ಯವಿದೆ. ಎಲ್ಲ ವೈಷಮ್ಯ ಮರೆತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮ ಸೇವೆ ಸಲ್ಲಿಸಬೇಕು. ಕೇಂದ್ರ ಸರ್ಕಾರವು ಕೋಟ್ಯಂತರ ರೂಪಾಯಿಗಳನ್ನು ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ಕೊಡುತ್ತಿದೆ. ಇದರಿಂದ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಕೇಂದ್ರ ಸರ್ಕಾರವು ಗ್ರಾಮಗಳ ಅಭಿವೃದ್ಧಿಗೆ ಹೊಸ ಆಯಾಮ ನೀಡಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶಿಂಧೆ ಅವರು ಮಾತನಾಡಿ, ಪ್ರತಿಯೊಂದು ಗ್ರಾಮದ ಅಭಿವೃದ್ಧಿಗೆ ಆಯಾ ಗ್ರಾಮಸ್ಥರೇ ಪ್ರೇರಕ ಶಕ್ತಿಯಾಗಿದ್ದಾರೆ. ಗ್ರಾಮಸ್ಥರು ನರೇಗಾ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು. ಮಹತ್ವದ ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸಿ ತೆನ್ನಿಹಳ್ಳಿ ಗ್ರಾಮ ಪಂಚಾಯತಿಯು ಮಾದರಿ ಗ್ರಾಮ ಪಂಚಾಯಿತಿಯಾಗಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು.

ಗೊರನಾಳ ಹಿರೇಮಠದ ಡಾ.ವಿರೂಪಾಕ್ಷ ದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ಗ್ರಾಮಾಭಿವೃದ್ಧಿ ದೃಷ್ಟಿಯಿಂದಾಗಿ ಗ್ರಾಮ ಪಂಚಾಯತಿ ಕಾರ್ಯಾಲಯವು ಪವಿತ್ರ ಸ್ಥಾನದ ಮಹತ್ವ ಹೊಂದಿದೆ. ಸಾಮಾಜಿಕ ಅಹವಾಲುಗಳನ್ನು ಸ್ವೀಕರಿಸಿ ಅವುಗಳಿಗೆ ಪರಿಹಾರ ನೀಡುವ ಶಕ್ತಿ ಕೇಂದ್ರವಾಗಿದೆ. ವ್ಯಸನ ಮುಕ್ತ, ಸತ್ಯ, ಧರ್ಮ ಪರಿಪಾಲಿಸುವ, ಸಮಾನತೆ ಸಾರುವಂತಹ ಸಾಮಾಜಿಕ ವ್ಯವಸ್ಥೆ ಕಾಪಾಡುವಂತಹ ಸೇವೆ ಮಾಡಬೇಕು ಎಂದರು. ಗ್ರಂಥಾಲಯಗಳನ್ನು ಗ್ರಾಮ ಪಂಚಾಯತಿ ಹೊಂದಿದ ಗ್ರಾಮದಲ್ಲಷ್ಟೇ ಅಲ್ಲ, ಆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿಯೂ ತೆರೆಯಬೇಕು. ಪುಸ್ತಕಗಳ ಜೊತೆ ಮಾತನಾಡಿದಾಗ ವಿದ್ವಾಂಸರು, ತತ್ವಜ್ಞಾನಿ, ಸಮಾಜ ಚಿಂತಕರ ಪರಿಚಯವಾಗುತ್ತದೆ. ಪುಸ್ತಕಗಳನ್ನೇ ಮಿತ್ರರನ್ನಾಗಿ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಸಮಾರಂಭದಲ್ಲಿ ಗ್ರಾಮದ ಹಿರಿಯರಾದ ಮೌಲಾನಾ ಶಕಿಬಸಾಬ ಜನಾಬ ಮಾತನಾಡಿದರು. ಸಹಾಯಕ ನಿರ್ದೇಶಕರಾದ ಸಂಜಯ ಖಡಗೇಕರ ಅವರು ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಂಗಲಾ ಜಿಡ್ಡಿಮನಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ದ್ರಾಕ್ಷಾಯಣಿ ಹಟ್ಟಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುನೀಲ್ ಮದ್ದಿನ, ಪಂಚಾಯತ್ ರಾಜ್ ಇಂಜಿನಿಯರ ವಿಭಾಗದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶರಣಬಸಪ್ಪ ಪೊಲೀಸ್‌ಪಾಟೀಲ, ಪಂಚಾಯತ್ ರಾಜ್ ಎಂಜಿನಿಯರ್ ಉಪವಿಭಾಗದ ಸಹಾಯಕ ಅಭಿಯಂತರರಾದ ಚಿದಾನಂದ ಮಿಂಚನಾಳ, ಕಿರಿಯ ಅಭಿಯಂತರರಾದ ಎಂ.ಆರ್. ಅಲಿಯಾಬಾದ್, ತಾಂತ್ರಿಕ ಸಂಯೋಜಕರಾದ ಸಂಜುಕುಮಾರ ಬಿರಾದಾರ, ಐಇಸಿ ಸಂಯೋಜಕಿ ಡಾ.ಜ್ಞಾನಜ್ಯೋತಿ ಚಾಂದಕವಟೆ, ತಾಂತ್ರಿಕ ಸಹಾಯಕ ಅಭಿಯಂತರದ ಸುನೀಲ್ ರಾಠೋಡ, ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ, ವಿವಿಧ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಹಾಯಕರು, ಗ್ರಾಮ ಕಾಯಕ ಮಿತ್ರರು, ಸಾರ್ವಜನಿಕರು ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಬಬಲಾದ ವಂದಿಸಿದರು.

Leave a Reply

ಹೊಸ ಪೋಸ್ಟ್‌