ವಿಜಯಪುರ: ಉತ್ತರ ಕರ್ನಾಟಕ ಎಂದರೆ ಸಾಕು ತರಹೇವಾರಿ ಸಂಪ್ರದಾಯಗಳು ಮತ್ತು ಆಚರಣೆಗೆ ಹೆಸರುವಾಸಿ. ಅದರಲ್ಲೂ ರೈತರು ತಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿರುವ ಹಾಗೂ ಜೀವನದಲ್ಲಿ ಹಾಸು ಹೊಕ್ಕಾಗಿರುವ ಕೃಷಿಗೆ ಸಂಬಂಧಿಸಿದ ಸಲಕರಣೆಗಳು, ಸಾಕು ಪ್ರಾಣಿಗಳ ಬಗ್ಗೆ ಹೊಂದಿರುವ ಅನೂನ್ಯತೆ ಅಪರಿಮಿತವಾಗಿರುತ್ತದೆ. ಅನ್ನದಾತರು ಕೈಗೊಳ್ಳುವ ಪ್ರಮುಖ ಕೃಷಿ ಚಟುವಟಿಕೆಗಳಿಗೆ ಎತ್ತುಗಳೇ ಆಧಾರ. ತಮ್ಮ ಬದುಕಿಗೆ ಆಸರೆಯಾಗುವ ಎತ್ತುಗಳನ್ನು ಪ್ರೀತಿಯಿಂದ ಪೂಜಿಸಿ ಸಂಭ್ರಮಿಸುವ ಹಬ್ಬವೇ ಮಣ್ಣೆತ್ತಿನ ಅಮವಾಸ್ಯೆ. ಇಂಥ ವಿಶಿಷ್ಠ ದ ಹಬ್ಬದ ಅಂಗವಾಗಿ ಮಣ್ಣಿನ ಎತ್ತುಗಳ ಮಾರಾಟ ಮತ್ತು ಖರೀದಿ ಹಾಗೂ ಪೂಜೆ ಗಮನ ಸೆಳೆಯುತ್ತಿದೆ.
ಮಣ್ಣೆತ್ತಿನ ಅಮವಾಸ್ಯೆ ಆಚರಣೆ ಮಣ್ಣಿನ ಮಕ್ಕಳು ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಸಂಭ್ರಮದಿಂದ ನಡೆಯುತ್ತಿದೆ. ಸಂಭ್ರಮದಿಂದ ಆಚರಿಸಿದರು. ನಾವೆಲ್ಲ ಕಲ್ಲು ಮಣ್ಣಿನಲ್ಲಿ, ಪ್ರಕೃತಿಯಲ್ಲಿ ದೇವರನ್ನು ಕಾಣುವ ಮನೋಭಾವದವರು. ಈ ಭಾವನೆಯ ಅಂಗವಾಗಿಯೇ ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ಮಾಡಿ ಪೂಜಿಸುವ ಸಂಪ್ರದಾಯ ಪಾಲಿಸುತ್ತಿದ್ದೇವೆ. ಮುಂಗಾರು ಆರಂಭದ ಈ ಸಮಯದಲ್ಲಿ ಬರುವ ಮಣ್ಣೆತ್ತಿನ ಅಮಾವಾಸ್ಯೆ ಅಕ್ಷರಷಃ ರೈತರ ಹಬ್ಬವಾಗಿದೆ. ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ಮಣ್ಣೆತ್ತಿನ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಕೆರೆಯಿಂದ ತಂದ ಮಣ್ಣಿನಿಂದ ಸಣದಣ ಸಣ್ಣ ಎತ್ತುಗಳನ್ನು ತಯಾರಿಸಿ ಅವುಗಳಿಗೆ ಬಣ್ಣ ಹಚ್ಚಿ ಪೂಜಿಸುವುದು ವಿಶೇಷವಾಗಿದೆ. ಮಣ್ಣಿಗೂ, ಎತ್ತಿಗೂ ಅವಿನಾಭಾವ ಸಂಬಂಧವಿದೆ. ಅಲ್ಲದೆ ಮಣ್ಣಿನ ಎತ್ತಿನ ಮೂರ್ತಿಗಳನ್ನು ಪೂಜಿಸಿದರೆ ಸಕಾಲದಲ್ಲಿ ಮಳೆ ಬೆಳೆ ಸಮೃದ್ಧಿಯಾಗುತ್ತದೆ ಎನ್ನುವ ನಂಬಿಕೆಯಿದೆ. ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ರೈತಾಪಿ ಜನರು ಪೂಜಿಸಿ ಸಂಭ್ರಮಪಡುವ ಈ ಹಬ್ಬ ಕಾರಹುಣ್ಣಿಮೆಯ ನಂತರ ಬರುತ್ತದೆ. ಮಣ್ಣಿನ ಮಕ್ಕಳಿಗೆ ಅತ್ಯಂತ ಪವಿತ್ರವಾದುದು. ವಿಜಯಪುರ ನಗರದಲ್ಲಿ ರೈತಾಪಿ ಜನರು ಮಣ್ಣೆತ್ತುಗಳನ್ನು ಖರೀದಿಸುವಲ್ಲಿ ಬಿಜಿಯಾಗಿದ್ದರು. ಮಣ್ಣೆತ್ತುಗಳು ಈ ಬಾರಿ ದುಬಾರಿಯಾಗಿದ್ದು ಅತಿ ಚಿಕ್ಕವು ರೂ. 50 ರಿಂದ ಪ್ರಾರಂಭವಾಗಿ ರೂ. 1500 ವರೆಗೆ ಮಾರಾಟವಾಗುತ್ತಿವೆ. ಆದರೆ, ಈ ಬಾರಿ ಅಷ್ಟು ಬೇಡಿಕೆ ಇಲ್ಲಾ ಎನ್ನುತ್ತಿದ್ದಾರೆ ಮಣ್ಣೆತ್ತುಗಳ ತಯಾರಕ ಕಾಸುಂಡೆ.
ಮಾರುಕಟ್ಟೆಯಿಂದ ತಂದ ಮಣ್ಣೆತ್ತುಗಳನ್ನು ಸಿಂಗರಿಸಿದ ಜೋಡೆತ್ತುಗಳನ್ನು ನೋಡುವುದೇ ಒಂದು ಸೊಗಸು. ನಂತರ ದೇವರ ಜಗುಲಿಯ ಮೇಲಿಟ್ಟು ಪೂಜೆಗೆ ಅಣಿಯಾಗುವ ಹೊತ್ತಿಗೆ ಮನೆ ಹೆಣ್ಣು ಮಕ್ಕಳು ಹೋಳಿಗೆ, ಕಡಬು ಮುಂತಾದ ರುಚಿರುಚಿಯಾದ ಸಿಹಿ ತಿನಿಸುಗಳನ್ನು ತಯಾರಿಸಿ ಅಡುಗೆ ಸಿದ್ಧಪಡಿಸಿರುತ್ತಾರೆ. ಮನೆಯ ದನಕರುಗಳ ಮೈತೊಳೆದು ಪೂಜೆಗೆ ಸಿಂಗರಿಸುತ್ತಾರೆ. ಮಣ್ಣೆತ್ತುಗಳಿಗೆ ಕಾಯಿ, ಕರ್ಪರ, ಊದುಬತ್ತಿ, ಲೋಭಾನ ಹಾಕಿ ಎಡೆ ಹಿಡಿದು ಪೂಜೆ ಮಾಡುತ್ತಾರೆ. ಸಕಲ ಜೀವರಾಶಿಗಳಿಗೆ ಅನ್ನ ಹಾಕುವ ಭೂತಾಯಿಗೆ ಈ ಮೂಲಕ ಪೂಜೆ ಸಲ್ಲಿಸಿ ಕೃತಜ್ಞತೆ ಅರ್ಪಿಸುತ್ತಾರೆ. ಹೊಸ ಬಟ್ಟೆಗಳನ್ನು ತೊಟ್ಟು ಊರಿನಲ್ಲಿ ದೇವಸ್ಥಾನಗಳಿಗೆ ಕಾಯಿ, ಕರ್ಪರದೊಂದಿಗೆ ಹೋಗಿ ಎಡೆ ಹಿಡಿದು ಬಂದು ಒಟ್ಟಾಗಿ ಕುಳಿತು ಊಟ ಮಾಡುತ್ತಾರೆ. ಸಂಜೆ ಆರತಿ ಹಿಡಿದ ಹೆಣ್ಣುಮಕ್ಕಳು ಮನೆಮನೆಗೆ ತೆರಳಿ ಪೂಜಿಸಲ್ಪಟ್ಟ ಎತ್ತುಗಳಿಗೆ ಆರತಿ ಬೆಳಗಿ ಸಂಭ್ರಮಿಸುತ್ತಾರೆ ಎನ್ನುತ್ತಾರೆ ಮಣ್ಣೆತ್ತಿನ ಪೂಜೆ ನೆರವೇರಿಸಿದ ಪ್ರತಿಭಾ ವಿಜಯ ಸಾರವಾಡ.
ಹಬ್ಬ ರೈತ, ಮಣ್ಣು ಮತ್ತು ಎತ್ತುಗಳ ನಡುವೆ ಇರುವ ಅನನ್ಯ ಅವಿನಾಭಾವ ಸಂಬಂಧದ ಸಂಕೇತ ಮಣ್ಣೆತ್ತಿನ ಅಮವಾಸ್ಯೆ. ಎತ್ತು, ಭೂಮಿ ಇಲ್ಲದೆ ರೈತನ ಬದುಕು ಇಲ್ಲ. ರೈತನಿಗೆ ಭೂಮಿ ಎಷ್ಟು ಮುಖ್ಯವೋ, ಎತ್ತುಗಳು ಸಹ ಅಷ್ಟೇ ಅವಶ್ಯ. ಹೀಗಾಗಿ ಈ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ ಈಗ ಬಸವ ನಾಡಿನಲ್ಲಿ ಜೋರಾಗಿಯೇ ಸಾಗಿದೆ.