National Doctor’s Day: ರಾಷ್ಟ್ರೀಯ ವೈದ್ಯರ ದಿನಾಚರಣೆ- ಡಾ. ಬಿ. ಸಿ. ರಾಯ್ ಜನ್ಮದಿನದ ವಿಶೇಷ

ಡಾ. ರವಿ ಎಸ್. ಕೋಟೆಣ್ಣವರ

ವಿಜಯಪುರ: ನಾವು ಭೂಮಿಯ ಮೇಲೆ ದೇವರನ್ನು ನೋಡಲು ಸಾಧ್ಯವಿಲ್ಲ ಎನ್ನುವುದು ಎಲ್ಲರು ತಿಳಿದಿರುವ ಸತ್ಯ. ಆದರೆ ನಮ್ಮ ಆರೋಗ್ಯವನ್ನು ಉತ್ತಮ ಗೊಳಿಸಿ, ನಮ್ಮನ್ನು ಆರೈಕೆ ಮಾಡುವ ವೈದ್ಯರುಗಳೇ ದೈವ ಶಕ್ತಿಯನ್ನು ಪಡೆದುಕೊಂಡು, ಕಣ್ಣೆದುರಿಗೆ ನಿಲ್ಲುವ ದೇವರು ಎಂದು ಹೇಳಬಹುದು. ಈ ಕೋವಿಡ್ ಹೆಮ್ಮಾರಿ ವೈದ್ಯನೇ ಭೂಮಿಯ ಮೇಲಿನ ದೈವ ಎಂದು ಜನಸಾಮನ್ಯರಿಗೆ ಸಾಬಿತು ಪಡೆಸಿದೆ. ಜು.1 ರಂದು ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ. ಅಲೋಪತಿ, ಹೋಮಿಯೋಪತಿ, ಆಯುರ್ವೇದ. ಯುನಾನಿ ಹೀಗೆ ಬೇರೆ ಬೇರೆ ವೈದ್ಯ ಪದ್ದತಿಗಳ ಮೂಲಕ ನಮ್ಮೆಲ್ಲರ ಆರೋಗ್ಯಕ್ಕಾಗಿ ತಮ್ಮ ಬದುಕನ್ನು ಶ್ರೀಗಂಧದ ಕೊರಡಿನಂತೆ ಸವೆಸಿಕೊಂಡು ಮನುಕುಲದ ಏಳಿಗೆಗೆ ತಮ್ಮ ಬದುಕನ್ನು ಸಮರ್ಪಿಸಿ ಕೊಂಡಿರುವ ವೈದ್ಯರಿಗೆ ಅಭಿನಂದಿಸುವ, ಕೃತಜ್ಞತೆ ಸೂಚಿಸುವ ದಿನ‌ ಇದಾಗಿದೆ.

ನಮ್ಮ ದೇಹದ ಆರೋಗ್ಯದಲ್ಲಿ ವೈಪರೀತ ಬಂದಾಗ ಜೀವನ್ಮರಣದ ನಡುವೆ ಬದುಕಲು ಹೆಣಗಾಡುತ್ತಿರುವಾಗ ನೋವು ಶಮನಗೊಳಿಸಿ, ದೈರ್ಯ ತುಂಬಿ, ಆತ್ಮವಿಶ್ವಾಸ ತುಂಬಿ ಬಾಳಿಗೆ ಬೆಳಕು ನೀಡಿ ಹೊಸ ಜೀವನಕ್ಕೆ ರಹದಾರಿ ಮಾಡಿ ಕೊಟ್ಟ ನಮ್ಮ ನೆಚ್ಚಿನ ವೈದ್ಯರನ್ನು ಸ್ಮರಿಸುವ, ನೆನಪಿಸಿಕೊಳ್ಳುವ ಮತ್ತು ಆದರಿಸುವ ಸ್ಮರಣೀಯವಾದ ದಿನವಿದು. ಭಾರತದ ವೈದ್ಯರೆಲ್ಲರೂ ಅಭಿಮಾನ ಪಡುವ ಮಹಾವೈದ್ಯ ಶಿಕ್ಷಣ ತಜ್ಞ, ಸ್ವಾತಂತ್ರ ಹೋರಾಟಗಾರ ಶ್ರೇಷ್ಠ ರಾಜಕೀಯ ಧುರೀಣ, ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಮಂತ್ರಿ. ಅಪ್ರತಿಮ ವ್ಯಕ್ತಿತ್ವದ ಡಾ. ಬಿಧಾನ ಚಂದ್ರ ರಾಯ್ (ಡಾ.ಬಿ.ಸಿ.ರಾಯ್) ಅವರ ಜನ್ಮ ದಿನ 01.07.1882. ಇವರ ಸವಿನೆನಪಿಗಾಗಿ ಈ ದಿನವನ್ನು ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನ ಎಂದು ಆಚರಿಸುತ್ತೇವೆ.
ಈ ದಿನದಂದು ಭಾರತದ ಎಲ್ಲ ವೈದ್ಯ ಭಾಂದವರು ಸಮಾಜದ ಬಡತನ ರೇಖೆಗಿಂತ ಕೆಳಗಿರುವ ಮನುಸಂಕುಲದ ಉದ್ಧಾರಕ್ಕಾಗಿ ಪ್ರತಿಜ್ಞೆ ಮಾಡುತ್ತಾರೆ.

ಬಿಹಾರದ ಪಾಟ್ನಾದಲ್ಲಿ ಜನಿಸಿದ ಡಾ. ಬಿ. ಸಿ. ರಾಯ್ ಅವರು ಕಲ್ಕತ್ತದಲ್ಲಿ ಎಂಬಿಬಿಎಸ್ ಶಿಕ್ಷಣ ಮುಗಿಸಿದರು.‌ ವೈದ್ಯಕೀಯ ಶಿಕ್ಷಣದ ಶ್ರೇಷ್ಠ ಪದವಿ ಗಳಾದ F.R.C.S. ಮತ್ತು M.R.C.P ಯನ್ನು ಜೊತೆಜೊತೆಯಾಗಿ ಕೇವಲ ಎರಡು ವರ್ಷ ಮೂರು ತಿಂಗಳಲ್ಲಿ ಪೂರೈಸಿದ ಭಾರತದಲ್ಲಿನ ಅತೀ ವಿರಳ ಜನರಲ್ಲಿ ಇವರೂ ಒಬ್ಬರಾಗಿದ್ದಾರೆ. ಅವರ ಜ್ಞಾನ ಸಂಪತ್ತಿಗೆ, ಅವರ ಅನುಭವಕ್ಕೆ ಮತ್ತು ಅರ್ಹತೆಗೆ ಇಂಗ್ಲೆಂಡಿನ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಸಿಗುತ್ತಿತ್ತು. ಆದರೆ ತಾಯ್ನಾಡು ಭಾರತಾಂಬೆಯ ಸೇವೆಯ ವ್ಯಾಮೋಹ ಅವರನ್ನು ಬಿಡಲಿಲ್ಲ. 1911 ರಲ್ಲಿ ಭಾರತಕ್ಕೆ ಬಂದು ನಮ್ಮ ದೇಶದ ಬಡಜನರ ಉದ್ದಾರಕ್ಕಾಗಿ ಟೊಂಕ ಕಟ್ಟಿ ನಿಂತರು. ‌ ಕಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಕರಾಗಿ ಸಾವಿರಾರು ಮಂದಿ ಯುವ ವೈದ್ಯರಿಗೆ ಆದರ್ಶಪ್ರಾಯರಾದರು. ಇಂದಿಗೂ ಅವರಿಂದ ಕಲಿತ ನೂರಾರು ವೈದ್ಯರು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿ ಮಿನುಗುತ್ತಿದ್ದಾರೆ. ಅವರು ತಮ್ಮ ಪ್ರತಿ ರೋಗಿಗಳಲ್ಲಿ ದೇವರನ್ನು ಕಾಣುತ್ತಿದ್ದರು.
ತಾವು ನಂಬಿದ ತತ್ವ, ಆದರ್ಶ ಧ್ಯೇಯಗಳನ್ನು ಬಲಿಗೊಡದೆ ವೈದ್ಯಕೀಯ ವೃತ್ತಿಯನ್ನು ಪ್ರಾಮಾಣಿಕವಾಗಿ ಜೀವನದಲ್ಲಿ ಆಳವಡಿಸಿಕೊಂಡು ನುಡಿದಂತೆಯೇ ನಡೆದರು. ಸ್ವಾತಂತ್ಯ ಬಳಿಕ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಪದವಿ ಏರಿ ತಮ್ಮ ಪದವಿಯ ಗೌರವವನ್ನು ಇಮ್ಮಡಿಗೊಳಿಸಿದರು. ಹಲವಾರು ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳನ್ನು ಕಟ್ಟಿಸಿ ಬಡ ವಿದ್ಯಾರ್ಥಿಗಳಿಗೆ ಬಡ ರೋಗಿಗಳಿಗೆ ಆಶಾಕಿರಣವಾದರು. ಹೀಗೆ ವೈದ್ಯಕೀಯ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮತ್ತು ಧಾರ್ಮಿಕ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಕಾರ್ಯಬಾಹುಳ್ಯವನ್ನು ವಿಸ್ತರಿಸಿಕೊಂಡು, ಗಾಂಧೀಜಿ ಕನಸು ಕಂಡ ರಾಮರಾಜ್ಯದ ಸ್ಥಾಪನೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಸುಮಾರು 80 ವರ್ಷಗಳ ಕಾಲ ಸಾರ್ಥಕ ಜೀವನ ನಡೆಸಿ 01.07.1962 ರಂದು ಕಲ್ಕತ್ತಾ ನಗರದಲ್ಲಿ ಜೀವನದ ಕೊನೆಯುಸಿರೆಳೆದು ಅಜರಾಮರವಾದರು.

ಜನನ,ಮರಣದಲ್ಲಿಯೂ ವಿಶೇಷ

ಡಾ.‌ಬಿ. ಸಿ. ರಾಯ್ ಇವರ ಜನನ‌ ಮತ್ತು‌ಮರಣ ಎರಡರಲ್ಲೂ ವಿಶೇಷವಿದೆ‌. 01.07.1882 ರಂದು ಜನಸಿದ ಇವರ ನಿಧನದ ದಿನವೂ ಜು 1. ಅಂದರೆ 01.07
1962 ಎರಡೂ ಒಂದೇ ದಿನವಾಗಿದೆ. ವೈದ್ಯರೂ ಆತ್ಮ ವಿಮರ್ಶೆ ಮಾಡಿಕೊಂಡು ತಮ್ಮ ವೈದ್ಯಕೀಯ ವೃತ್ತಿಯನ್ನು ಪಾಲಿಸಿದಲ್ಲಿ ಸುಂದರ, ಸ್ವಸ್ಥ, ಸಮಥ೯, ಸದೃಢ ಸಮಾಜ ನಿರ್ಮಾಣವಾಗಬಹುದು. ಅದುವೇ ನಾವು ಡಾ. ಬಿ. ಸಿ. ರಾಯ್ ಎಂಬ ಮಹಾನ್ ಚೇತನಕ್ಕೆ ನೀಡುವ ಬಹುದೊಡ್ಡ ಗೌರವ ಎಂದರೂ ತಪ್ಪಲ್ಲ.

ಎಲ್ಲ ವೈದ್ಯಬಾಂಧವರಿಗೂ ಸುಖ, ಸಂತಸ, ನೆಮ್ಮದಿ ಸಿಗಲಿ ಎಂದು ತುಂಬು ಹೃದಯದಿಂದ ಹಾರೈಸೋಣ.

ಲೇಖಕರ ವಿಳಾಸ;
ಡಾ. ರವಿ ಎಸ್. ಕೋಟೆಣ್ಣವರ.ಎಂ.ಡಿ
ಪ್ರಾಧ್ಯಾಪಕರು, ಬಿ.ವಿ.ವಿ.ಎಸ್ ಹೋಮಿಯೋಪಥಿಕ್ ವೈದ್ಯಕೀಯ
ಮಹಾವಿದ್ಯಾಲಯ ಮತ್ತು ಆಸ್ಪತ್ರೆ. ಬಾಗಲಕೋಟೆ.

Leave a Reply

ಹೊಸ ಪೋಸ್ಟ್‌