ZP CEO: ಚಡಚಣ ತಾಲೂಕಿನಲ್ಲಿ ಇಂಚಗೇರಿ, ನಂದರಗಿ, ಬರಡೋಲ ಗ್ರಾ. ಪಂ. ಗಳಲ್ಲಿ ರಾಹುಲ ಶಿಂಧೆ ವಿಶೇಷ ಪರಿಶೀಲನೆ

ವಿಜಯಪುರ: ಜಿ. ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಹುಲ್ ಶಿಂಧೆ ಅವರು ಚಡಚಣ ತಾಲೂಕಿನಲ್ಲಿ ಪ್ರವಾಸ ಕೈಗೊಂಡು ಇಂಚಗೇರಿ, ನಂದರಗಿ ಹಾಗೂ ಬರಡೊಲ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ನಾನಾ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು.

ಇಂಚಗೇರಿ ಗ್ರಾಮದ ಮಹಾತ್ಮಗಾಂಧಿ ನರೇಗಾ ಅಮೃತ ಸರೋವರ ಕಾರ್ಯಕ್ರಮದಡಿ ಆಯ್ಕೆಯಾದ ಕೆರೆ ಹೂಳೆತ್ತುವ ಕಾಮಗಾರಿಗೆ ಭೇಟಿ ಮಾಡಿ ಕಾಮಗಾರಿಯ ಕಡತ ಪರಿಶೀಲನೆ ಮಾಡಿದರು.

ಕೂಲಿಕಾರರ ಕುಂದುಕೊರತೆಗಳನ್ನು ಆಲಿಸಿದರು. ನರೇಗಾ ಯೋಜನೆಯಲ್ಲಿ 60 ವರ್ಷ ಮೇಲ್ಪಟ್ಟ ಕೂಲಿಕಾರರಿಗೆ ಹಾಗೂ ವಿಶೇಷಚೇತನರಿಗೆ ಆದ್ಯತೆಯ ಮೇರೆಗೆ ಕೆಲಸದಲ್ಲಿ ಶೇ.50 ರಷ್ಟು ರಿಯಾಯತಿ ಇರುತ್ತದೆ ಎಂದು ತಿಳಿಸಿದರು. ಅದೇ ರೀತಿ ಗ್ರಾಮದ ಎಸ್ಸಿ ಕಾಲೋನಿಯ ಅಂಬೇಡ್ಕರ್ ಭವನದ ಗ್ರಂಥಾಲಯ ವೀಕ್ಷಣೆ ಮಾಡಿ ಅಲ್ಲಿಗೆ ಓದಲು ಬಂದಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಗ್ರಂಥಾಲಯದ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಓದಿ ಉತ್ತಮ ಸಾಧನೆ ಮಾಡಬೇಕು ಎಂದು ಸಲಹೆ ಮಾಡಿದರು. ಹಾಗೂ ಅಲ್ಲಿನ ಪಶು ಆಸ್ಪತ್ರೆಗೆ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚಸಚಣ ತಾಲೂಕಿನ‌ ನಾನಾ ರಾಹುಲ ಶಿಂಧೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು

ನಂದರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂದ ದ್ರಾಕ್ಷಿ ಸಸಿ ನೆಡುವ ಕಾಮಗಾರಿ ವೀಕ್ಷಣೆ ನಡೆಸಿದರು. ಇದೆ ವೇಳೆ ಸಾರ್ವಜನಿಕ ಉದ್ಯಾನವನ ವೀಕ್ಷಿಸಿ ಅಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಾರ್ವಜನಿಕರೊಂದಿಗೆ ಉದ್ಯಾನವನದ ಬಗ್ಗೆ ಚರ್ಚಿಸಿದರು. ನಂದರಗಿ ಗ್ರಾಮದ ಕನ್ನಡ ಗಂಡು ಮಕ್ಕಳ ಶಾಲೆಗೆ ಭೇಟಿ ನೀಡಿ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು. ‌ ಮಕ್ಕಳ ಹಾಜರಾತಿ ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕೆಂದು ಶಾಲೆಯ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದರು. ಅಲ್ಲಿನ ಬಿಸಿಯೂಟದ ಅಡುಗೆ ಕೋಣೆಗೆ ಭೇಟಿ ನೀಡಿ ನೈರ್ಮಲ್ಯ ಹಾಗೂ ಆಹಾರದ ಗುಣಮಟ್ಟವನ್ನು ಪರಿಶೀಲನೆ ಮಾಡಿದರು ಮತ್ತು ಶಾಲಾ ಶಿಕ್ಷಕರ ಹಾಜರಾತಿಯನ್ನು ಸಹ ಪರಿಶೀಲನೆ ಮಾಡಿದರು.

ಇದೇ ವೇಳೆ ಸಿಇಓ ಅವರು ಬರಡೋಲ ಗ್ರಾಮ ಪಂಚಾಯತಿಗೆ ಕೂಡ ಭೇಟಿ ನೀಡಿ, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಪ್ರಗತಿ ಹಂತದಲ್ಲಿರುವ ಸಾರ್ವಜನಿಕ ಉದ್ಯಾನವನವನ್ನು ವೀಕ್ಷಣೆ ಮಾಡಿ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.

ಬರಡೋಲ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೂಡ ಭೇಟಿ ನೀಡಿ ಅಲ್ಲಿನ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ಹಾಜರಾತಿ ಪರಿಶೀಲಿಸಿದರು.

2021-22ನೇ ಸಾಲಿನ ತಾಲೂಕು ಪಂಚಾಯತಿಯ ಅಭಿವೃದ್ಧಿ ಅನುದಾನದಡಿಯಲ್ಲಿ ತಾಲೂಕಿನ 12 ಅಂಗನವಾಡಿ ಕೇಂದ್ರಗಳಿಗೆ ಮಕ್ಕಳಿಗಾಗಿ ಚೈಲ್ಡ್ ಪ್ರೆಂಡ್ಲಿ ಪೀಠೋಪಕರಣಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಹಸ್ತಾಂತರಿಸಿದರು. ಇಂಚಗೇರಿ ಗ್ರಾಮದ ಎಚ್‌ಪಿಎಸ್ ಶಾಲೆಗೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 2 ಕಂಪ್ಯೂಟರ್, ಬ್ಯಾಟರಿ ಹಾಗೂ ಇನ್ವರ್ಟರ್‌ಗಳನ್ನು ಸದರಿ ಶಾಲೆಯ ಮುಖ್ಯ ಗುರುಗಳಿಗೆ ಹಸ್ತಾಂತರಿಸಿದರು ಹಾಗೂ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಎರಡು ವಸತಿ ನಿಲಯಗಳಿಗೆ ಟೇಬಲ್, ಖುರ್ಚಿ ಹಾಗೂ ರ‍್ಯಾಕ್‌ಗಳನ್ನು ವಸತಿ ಶಾಲೆಯ ವಾರ್ಡನ್ ಅವರಿಗೆ ಹಸ್ತಾಂತರಿಸಿದರು.

ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಇಂಟರ್ ಕಾಂ ವ್ಯವಸ್ಥೆಯನ್ನು ಅಳವಡಿಸಿರುವ ವಿಷಯಕ್ಕೆ ಇದೆ ವೇಳೆ ಸಿಇಓ ಅವರು ಪ್ರಶಂಸೆ ವ್ಯಕ್ತಪಡಿಸಿದರು. ತಾಲೂಕು ಪಂಚಾಯಿತಿಯ ಅಧಿಕಾರಿ ಹಾಗೂ ಸಿಬ್ಬಂದಿಯು ಉತ್ತಮ ಕೆಲಸ ನಿರ್ವಹಿಸಿ ತಾಲೂಕಿನ ಪ್ರಗತಿಯನ್ನು ಜಿಲ್ಲೆಯಲ್ಲಿ ಮೊದಲನೇ ಹಂತಕ್ಕೆ ತರಬೇಕು. ಇದಕ್ಕೆ ಉತ್ತಮ ಪ್ರೋತ್ಸಾಹ ನೀಡುವುದಾಗಿ ಸಿಇಓ ಅವರು ಪ್ರೇರಣೆ ನೀಡಿದರು.

ಈ ಸಂದರ್ಭದಲ್ಲಿ ಚಡಚಣ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂಜಯ ಖಡಗೇಕರ, ತಾಲೂಕು ಪಂಚಾಯತಿಯ ಲೆಕ್ಕಾಧಿಕಾರಿಗಳಾದ ಮಹೇಶ ದೈವಾಡಗಿ, ಸಹಾಯಕ ನಿರ್ದೇಶಕರಾದ ಮಹಾಂತೇಶ ಹೊಗೋಡಿ, ಇಂಚಗೇರಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಶಿವು ಪೂಜಾರಿ, ನದರಗಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಸಿಂಗೆ, ಬರಡೋಲ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಬಾಬು ಉಮದಿ, ತಾಂತ್ರಿಕ ಸಂಯೋಜಕರಾದ ಪರಮೇಶ ಮಾಳಿ, ತಾಲೂಕು ಐಇಸಿ ಸಂಯೋಜಕರಾದ ವಿನೋದ ಸಜ್ಜನ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌