F G Halakatti: ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿ ಭಾವುಕರಾದ ಡಾ. ಎಂ. ಎಸ್. ಮದಭಾವಿ

ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನಮಂತರಾಯ ರಂಗಮಂದಿರದಲ್ಲಿ ವಚನಪಿತಾಮಹ ಡಾ. ಫ‌. ಗು. ಹಳಕಟ್ಟಿಯವರ ಜನ್ಮದಿನದ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ನಡೆಯಿತು.

ಡಾ. ಫ‌ ಗು. ಹಳಕಟ್ಟಿಯವರ ಸಮಗ್ರ ಜೀವನ- ಕಾರ್ಯಸಾಧನೆಯ ಬಗ್ಗೆ ಇದೆ ವೇಳೆ ಸ್ಮರಿಸಲಾಯಿತು.

ಅಪರ ಜಿಲ್ಲಾಧಿಕಾರಿಗ ರಮೇಶ ಕಳಸದ ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸಂಗ್ರಹ ಮತ್ತು ಸಂಪಾದನೆ ಮೂಲಕ ಡಾ. ಫ.ಗು.ಹಳಕಟ್ಟಿಯವರು ವಚನ ಸಾಹಿತ್ಯವನ್ನು
ಜನಸಾಮಾನ್ಯರಿಗೆ ತಲುಪಿಸಿದ ಅವಿರತ ಕೆಲಸ ಮಾಡಿದ ಮಹಾತ್ಮರಾಗಿದ್ದಾರೆ ಎಂದು ಹೇಳಿದರು‌.

ವಿಜಯಪುರದಲ್ಲಿ ವಚನ ಸಾಹಿತ್ಯ ಸಂರಕ್ಷಣೆ ದಿನ‌ ಆಚರಿಸಲಾಯಿತು

ಶರಣ ಸೇವೆ ಏಕಮೇವ ಉದ್ದೇಶ ಹೊಂದಿ ಊರೂರು ಸುತ್ತಿ, ಜನರಿಗೆ ಕಾಡಿ-ಬೇಡಿ, ಪ್ರಾರ್ಥನೆ ಮಾಡಿ ವಚನ ಸಂಗ್ರಹಣೆ ಮಾಡಿದರು. ಜೀವನ ನಡೆಸುವುದೇ ಕಷ್ಟದಾಯಕವಾಗಿದ್ದಂತಹ ಕಾಲಘಟ್ಟದಲ್ಲಿ ಸಂಗ್ರಹ ಮತ್ತು ಪುಸ್ತಕ ಪ್ರಕಟಣೆಯಂತಹ ಅತೀ ಕಷ್ಟದ ಎರಡೂ ಕೆಲಸ‌ಗಳನ್ನು ಮಾಡಿ ತೋರಿಸಿದವರು ಫ.ಗು.ಹಳಕಟ್ಟಿಯವರು ಎಂದರು ಹೇಳಿದರು.

ವಚನ ಸಾಹಿತ್ಯ ಸಂರಕ್ಷಣೆಯ ಮಹತ್ವದ ಕಾರ್ಯದೃಷ್ಟಿಯಿಂದಾಗಿ ಮಹಾತ್ಮರಾದ ಡಾ. ಫ.‌ ಗು.‌ ಹಳಕಟ್ಟಿಯವರ ಜನ್ಮದಿನವನ್ನು ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಎಂದು ಸರಕಾರವು ಆಚರಣೆ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಿದೆ ಎಂದು ತಿಳಿಸಿದರು.

ಸಮಾಜದ ಮೌಲ್ಯಗಳನ್ನು ಜನರು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು. ಸಮಾಜಮುಖಿ ಕಾರ್ಯ ಮಾಡಬೇಕು ಎನ್ನುವ ಮನೋಭಾವ ಹೊಂದಿದ್ದ ಶರಣರಾದ ಹಳಕಟ್ಟಿಯವರು, ವಚನಗಳನ್ನು ಅರ್ಥವಾಗುವ ರೀತಿಯಲ್ಲಿ ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಮಾಡಿದ್ದಾರೆ.12ನೇ ಶತಮಾನದ ವಚನಕಾರರ ಬಗ್ಗೆ ಅವರು ಅರಿವು ಮೂಡಿಸಿದ್ದಾರೆ. ಅನೇಕ ವಚನಕಾರರ ಬಗ್ಗೆ ಮಾಹಿತಿ ಒದಗಿಸಿದ್ದಾರೆ ಎಂದು ಅವರು ಹೇಳಿದರು.

ಡಾ. ಫ. ಗು. ಹಳಕಟ್ಟಿಯವರ ಸಂಶೋಧನ ಕೇಂದ್ರದ ಕಾರ್ಯದರ್ಶಿಗಳಾದ ಡಾ ಎಂ‌. ಎಸ್. ಮದಭಾವಿ ಅವರು ವಿಶೇಷ ಉಪನ್ಯಾಸ ನೀಡಿ, ಡಾ. ಫ. ಗು.ಹಳಕಟ್ಟಯವರು ವಿಜಯಪುರದವರಾದರೂ ಧಾರವಾಡದಲ್ಲಿಯೇ ಓದಿದರು.

ಬಿ. ಎ., ಎಲ್ ಎಲ್ ಬಿ ಪದವಿ ಪಡೆದರು. ಆದರೆ, ತಮ್ಮ ಕಾರ್ಯ ಸಾಧನೆಗಾಗಿ ಬರದ ನಾಡಾದ ವಿಜಯಪುರಗೆ ಬಂದು ಅಗಾಧ ಸಾಧನೆ ತೋರಿದರು. 1000 ಪುಸ್ತಕಗಳ ಪ್ರಕಟಣೆಗೆ ಆಗುವಷ್ಟು ಹಸ್ತಪ್ರತಿಗಳನ್ನು ಸಂಗ್ರಹಿಸಿದ ಮಹತ್ಕಾರ್ಯ ಮಾಡಿದ್ದಾರೆ. ಒಂದು ಸರ್ಕಾರ, ಸಂಸ್ಥೆ, ವಿಶ್ವ ವಿದ್ಯಾಲಯಗಳು ಮಾಡಬೇಕಾದ ಕಾರ್ಯವನ್ನು ಇಬ್ಬರೇ ಮಾಡಿದ್ದಾರೆ ಎಂದರು.
ಆಗಿನ ಕಾಲದಲ್ಲಿ ಲಾಭದಾಯಕವಾಗಿದ್ದ ವಕೀಲಿ ವೃತ್ತಿ ಬಿಟ್ಟು ಹಸ್ತ ಪ್ರತಿ ಸಂಗ್ರಹ ಕಾರ್ಯದಲ್ಲಿ ತೊಡಗಿದರು. ವಕೀಲಿ ವೃತ್ತಿಯಿಂದ ಅವರು ಹಣ ಗಳಿಸಿ ಬೌದ್ಧಿಕ ಸುಖ ಪಡೆಯಲಿಲ್ಲ. ಶರಣರ ಸೇವೆ ಮಾಡುತ್ತೇನೆಂದು ಕಾರ್ಯಾಚರಣೆಗಿಳಿದು ಬರೋಬ್ಬರಿ 20 ವರ್ಷ ಹಸ್ತಪ್ರತಿ ಸಂಗ್ರಹ ಕಾರ್ಯ ಮಾಡಿದರು.  ಸುಧೀರ್ಘ 21 ವರ್ಷಗಳ ಕಾಲ ವಚನ ಸಂಗ್ರಹದಂತಹ ಹಿರಿದಾದ ಕಾರ್ಯ ಮಾಡಿದ ಡಾ. ಫ. ಗು.‌ಹಳಕಟ್ಟಿಯವರ ಬದುಕನ್ನು ದಯವಿಟ್ಟು ಒಂದು ಬಾರಿ ನಾವೆಲ್ಲರೂ ಓದಲೇಬೇಕು ಎಂದು ತಿಳಿಸಿದರು.

ಹಳಕಟ್ಟಿಯವರು ಜೀವನದುದ್ದಕ್ಕೂ ಶರಣ ಕಾಯಕ ಮಾಡಿದರು. ಅವರು ಸಂಗ್ರಹ ಮಾಡಿದ ಕಾರ್ಯದಿಂದ ಈ ನಾಡಿನಲ್ಲಿ 250 ವಚನಕಾರರು ಇದ್ದರು ಎಂದು ತಿಳಿಯುವಂತಾಯಿತು.‌ ಅವರನ್ನು ನೋಡಿದರೆ 12ನೇ ಶತಮಾನದ ಶರಣರನ್ನು ನೋಡಿದಂತಾಗುತ್ತದೆ.‌ ಹೀಗಾಗಿಯೇ ಅವರಿಗೆ 64ನೇ ಪುರಾಥನರು ಎಂದು ಈ ನಾಡು ಬಿರುದು ನೀಡಿದೆ. ಅವರಿಗೆ ಜನರು, ಧರೆಗಿಳಿದು ಬಂದ ಶರಣ, ರಾವ್ ಬಹದ್ದೂರ ಎಂದು ಕರೆಯುತ್ತಿದ್ದರು. ಈ ಕಾರಣಕ್ಕೆ ಶರಣ ಚರಿತ್ರೆಯನ್ನು ಭಾರತ ದೇಶವು ಅಳವಡಿಸಿಕೊಳ್ಳಲು ಮೂಲ ಕಾರಣ ಪುರುಷರು ಶರಣ ಫ.ಗು.ಹಳಕಟ್ಟಿಯವರು ಎಂದು ಹೇಳಿದರು.

ಶರಣರ ಬಗ್ಗೆ ಬರೆಯ ಹೊರಟರೆ ಹಳಕಟ್ಟಿಯವರೇ ನಮಗೆ
ಆಕರ. ಇವರನ್ನು ಹೇಳದ ಹೊರತು ಮುಂದೆ ಒಂದು ಅಕ್ಷರವನ್ನು ಕೂಡ ಬರೆಯಲಾಗುವುದಿಲ್ಲ ಎಂದು ಅವರಿ ತಿಳಿಸಿದರು.

ಹಸಿವಿನಿಂದ ಜೀವ ಮಾಡಿದವರು ಹಳಕಟ್ಟಿಯವರು. ಸ್ವಂತ ಮನೆ ಇರಲಿಲ್ಲ. ಜಮೀನು ಇರಲಿಲ್ಲ ಅವರಿಗೆ. ಆದರೂ ಸಹ
ಹಿತಚಿಂತಕ ಎನ್ನುವ ಮುದ್ರಾಲಯ ಸ್ಥಾಪನೆ ಮಾಡಿದರು. ಚಂದಾ ಹಣದಿಂದಲೇ ಜೀವನ ಸಾಗಿಸಿದರು. ಯಾವಾಗಲು ಅವರಿಗೆ ಬಡತನ ಕಾಡಿತು, ಅವರು ಒಂದಿಲ್ಲೊಂದು ಸಾವು ನೋಡುವಂತಾಯಿತು. ಒಳಗಡೆಯ ಹರಿದ ಅಂಗಿ ಕಾಣಿಸಬಾರದೆಂದು ಮೇಲೆ ಕೋಟ್ ಹಾಕುತ್ತಿದ್ದನ್ನು ಕಂಡ ಅವರ ಗುರುವೊಬ್ಬರು ಹರದಂಗಿಯ ಫಕೀರ ಎಂದೇ ಅವರಿಗೆ ಕರೆಯುತ್ತಿದ್ದರು ಎಂದು ತಿಳಿಸಿದರು.

ಭಾವುಕರಾದ‌ ಡಾ. ಎಂ. ಎಸ್. ಮದಭಾವಿ

ಜೀವನದ ಬಗ್ಗೆ ಬದ್ಧತೆ ಹೊಂದಿದ್ದ ವ್ಯಕ್ತಿಯಾಗಿದ್ದರು ಹಳಕಟ್ಟಿಯವರು. ಎಷ್ಟೇ ಪುರಸ್ಕಾರಗಳು ಬಂದರು ಸಹ ಅವುಗಳಿಂದ ಹೊಟ್ಟೆ ತುಂಬುವುದಿಲ್ಲ ಎಂಬುದನ್ನು ಅವರು ಅರಿತಿದ್ದರು. ಎಷ್ಟೆ ನೋವು ಎದುರಾದರು ಅವುಗಳನ್ನು ಎದುರಿಸಿದರು. ಬಹಳಷ್ಟು ನೋವು ಕೊಟ್ಟರೂ ತಾಳಿಕೊಂಡು ಸ್ಥಿತಪ್ರಜ್ಞೆ ಹೊಂದಿದ ವ್ಯಕ್ತಿಯಾಗಿ ದೇವರ ಪ್ರೀತಿಗೂ ಪಾತ್ರರಾದರು ಎಂದು ಮಧಬಾವಿಯವರು ಭಾವುಕರಾಗಿ ನುಡಿದರು.

ಸರಕಾರಕ್ಕೆ ಅಭಿನಂದನೆಗಳು

ಡಾ. ಫ. ಗು. ಹಳಕಟ್ಟಿಯವರು ಬದುಕಿದ್ದು ಯಾತಕ್ಕಾಗಿ ಎಂದು ಯಾರಾದರು ಕೇಳಿದರೆ, ಅದು ಈ ನಾಡಿಗಾಗಿ, ನಮಗಾಗಿ ಎಂದೇ ಹೇಳಬೇಕು. ಡಾ. ಫ. ಗು. ಹಳಕಟ್ಟಿಯವರ ಬದುಕು, ಸಾಹಿತ್ಯ, ಸಾಧನೆಯನ್ನು ಗುರುತಿಸಿ ಸರಕಾರ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸುತ್ತಿದ್ದು ತಮ್ಮ ಸಂಸ್ಥೆಯಿಂದ, ವಿಜಯಪುರ ನಾಡಿನ ಜನತೆಯಿಂದ, ಸಮಸ್ತ ಕನ್ನಡಿಗರಿಂದ ಸರ್ಕಾರಕ್ಕೆ ಅಭಿನಂದನೆಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಎ.ಬಿ ಅಲ್ಲಾಪುರ, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ನಾಗರಾಜ, ಗಣ್ಯರಾದ ಎ.ಬಿ.ಅಂಕದ, ಬಿ.ಎಂ. ನೂಲ್ವಿ, ವಿ. ಸಿ. ನಾಗಠಾಣ, ಎಸ್. ಜಿ. ಸುರಪುರ, ಎಸ್. ಬಿ.‌ಜಾಲವಾದಿ, ಮುಖಂಡರಾದ ಭೀಮರಾಯ ಜಿಗಜಣಗಿ, ಸೋಮನಗೌಡ ಕಲ್ಲೂರ, ಗಿರೀಶ ಕುಲಕರ್ಣಿ, ಪಿ.ಆರ್ ವಾಲಿ, ಡಾ.ಸಂಗಮೇಶ ಮೇತ್ರಿ, ಸತೀಶ್ ಹಾಗೂ ಸಮಾಜದ ಭಾಂದವರು ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌