ವಿಜಯಪುರ ನಗರದ ಬಿ ಎಲ್ ಡಿ ಇ ಸಂಸ್ಥೆಯ ಬಂಗಾರಮ್ಮ ಸಜ್ಜನ ಆವರಣದಲ್ಲಿರುವ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ವಚಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನದ ಅಂಗವಾಗಿ ಹಳಕಟ್ಟಿ ಪ್ರತಿಮೆಗೆ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಮಾಲಾರ್ಪಣೆ ಮಾಡಿದರು. ನಂತರ ಹಳಕಟ್ಟಿ ಅವರ ಸಮಾಧಿಗೆ ತೆರಳಿ ಪುಷ್ಪನಮನ ಸಲ್ಲಿಸಿದರು. ಬಳಿಕ ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಬಳಿಕ ಸಂಶೋಧನ ಕೇಂದ್ರದಲ್ಲಿರುವ ಹಳಕಟ್ಟಿ ಅವರ ವಚನಗಳ ಮುದ್ರಣಕ್ಕೆ ಬಳಸುತ್ತಿದ್ದ ಸಲಕರಣೆಗಳು, ಅವರು ಪ್ರಕಟಿಸಿದ್ದ ನಿಯತಕಾಲಿಕೆಗಳನ್ನು, ಹಸ್ತಪ್ರತಿ ಮುಂತಾದವುಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಉಪಪೌರಾಯುಕ್ತ ಮಹಾವೀರ ಬೋರಣ್ಣವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ, ಹಳಕಟ್ಟಿ ಸಂಸೋಧನ ಕೇಂದ್ರದ ನಿರ್ದೇಶಕ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ಕಾರ್ಯದರ್ಶಿ ಡಾ. ಎಂ. ಎಸ್. ಮದಭಾವಿ, ಸಹಕಾರ್ಯದರ್ಶಿ ಡಾ. ಮಹಾಂತೇಶ ಬಿರಾದಾರ, ಸಂಯೋಜನಾಧಿಕಾರಿ ಡಾ. ವಿ. ಡಿ. ಐಹೊಳ್ಳಿ, ಎ. ಬಿ. ಬೂದಿಹಾಳ, ಸಂಸ್ಥೆಯ ಅಧಿಕಾರಿಗಳಾದ ಅಗರವಾಲ, ಪುಜಾರ, ಸಂಜೀವರೆಡ್ಡಿ ಪಾಟೀಲ, ಹಳಕಟ್ಟಿ ಅವರ ಕುಟುಂಬಸ್ಥರಾದ ಗಿರೀಶ ಹಳಕಟ್ಟಿ, ಸುಜಾತಾ, ಸುಮನ, ಗುರುಪುತ್ರ ಮುಂತಾದವರು ಉಪಸ್ಥಿತರಿದ್ದರು.
ಇದೇ ವೇಳೆ, ಹಳಕಟ್ಟಿ ಅವರ ಮರಿಮೊಮ್ಮಕ್ಕಳಿಗೆ ಶಿಕ್ಷಣಕ್ಕೆ ಅಗತ್ಯವಾಗಿರುವ ಹಣದ ಚೆಕ್ ನ್ನು ಬಿ ಎಲ್ ಡಿ ಇ ಸಂಸ್ಥೆಯಿಂದ ಕೊಡಮಾಡಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.