ವಿಜಯಪುರ: ಆಂಧ್ರ ಪ್ರದೇಶ ಸರಕಾರ ಶ್ರೀಶೈಲ ಪೀಠಕ್ಕೆ 10 ಎಕರೆ ಜಮೀನನ್ನು ಮಂಜೂರು ಮಾಡಿದೆ. ಅದರಲ್ಲಿ ಐದು ಎಕರೆ ಸ್ಥಳವನ್ನು ದೇವಾಸ್ಥಾನಕ್ಕೆ ಒಪ್ಪಿಸಿದೆ. ಇನ್ನುಳಿದ ಐದು ಎಕರೆ ಜಾಗದಲ್ಲಿ 100 ಬೆಡ್ ಸುಸಜ್ಜಿತ ಆಸ್ಪತ್ರೆ, ಪಾದಯಾತ್ರಿಕರಿಗೆ 500 ಕೋಣೆಗಳ ಯಾತ್ರಿ ನಿವಾಸ, 5000 ಕಂಬಗಳ ಮಂಟಪ ನಿರ್ಮಾಣ, ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುತ್ತಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ವಿಜಯಪುರ ನಗರದ ಕಿತ್ತೂರು ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಚಾರ್ಯ ಮಾಹಾಸ್ವಮಿಗಳ ದ್ವಾದಶ ಪೀಠಾರೋಹಣ ಮಹೋತ್ಸವ ಮತ್ರು ಜನ್ಮ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಗುರುವಂದನಾ ಸಮಾರಂಭ ಹಾಗೂ ಶ್ರೀಕ್ಷೇತ್ರ ಶ್ರೀಶೈಲದಲ್ಲಿ ನಡೆಯಲಿರುವ ರಾಷ್ಟ್ರೀಯ ಜನಜಾಗೃತಿ ಸಮಾರಂಭದ ಚಿಂತನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಜಯಪುರ ಜಿಲ್ಲೆಯಿಂದ ಶ್ರೀಶೈಲಕ್ಕೆ ಅತೀ ಹೆಚ್ಚು ಭಕ್ತರು ಆಗಮಿಸುತ್ತಾರೆ. ಇಲ್ಲಿಯ ಜನ ಇತಿಹಾಸ ಸೃಷ್ಟಿಸುವ ಶಕ್ತಿ ಹೊಂದಿದ್ದಾರೆ. ಈ ಹಿಂದೆ ನಾನಾ ಸಂದರ್ಭಗಳಲ್ಲಿ ಅಂದಿನ ಪ್ರಧಾನಿಯನ್ನು ಬಂಗಾರದಲ್ಲಿ ತೂಗಿ ದೇಶಕ್ಕೆ ಅರ್ಪಿಸಿದ್ದಾರೆ. ಹೀಗಾಗಿ ಶ್ರೀಶೈಲ ಕ್ಷೇತ್ರದ ಅಭಿವೃದ್ಧಿಗೆ ಕಾರ್ಯಗಳಿಗೆ ಬಸವ ನಾಡಿನ ಭಕ್ತರು ನೆರವಾಗಬೇಕು ಎಂದು ಹೇಳಿದರು.
ವಿಜಯಪುರ ಜಿಲ್ಲೆಯಿಂದ ಪ್ರತಿವರ್ಷ ಲಕ್ಷಾಂತರ ಭಕ್ತರು ಶ್ರೀಶೈಲಕ್ಕೆ ಪಾದಯಾತ್ರೆಯಲ್ಲಿ ಬರುತ್ತಾರೆ. ಅಣ್ಣಪ್ಪ ಕುದರಿ ಎಂಬ ಬಕ್ತರು ತಮ್ಮ ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದಿದ್ದರು. ಈ ಭಕ್ತಾದಿಗಳು ಪಾದಯಾತ್ರೆ ನಡೆಸುವ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಗಿಡ ನೆಡುವ ಮೂಲಕ ನೆರಳು ಕಲ್ಪಿಸಲಾಗುತ್ತಿದೆ ಎಂದು ಡಾ. ಚನ್ನಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಖ್ಯಾತ ನೇತ್ರ ತಜ್ಞ ಡಾ. ಪ್ರಭುಗೌಡ ಪಾಟೀಲ ಲಿಂಗದಳ್ಳಿ ಮಾತನಾಡಿ, ಪಾದಯಾತ್ರೆಯಲ್ಲಿ ವಿಜಯಪುರ ಜಿಲ್ಲೆಯಿಂದ ನಮ್ಮ ವೈದ್ಯರುಂದ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ಹಿರೂರ ಸ್ವಾಮೀಜಿ, ಜಾಲಹಳ್ಳಿಯ ಶ್ರೀ ಜಯಶಾಂತ ಲಿಂಗೇಶ್ವರ ಶಿವಾಚಾರ್ಯರು, ಸಿಂದಗಿಯ ಶ್ರೀ ಪ್ರಭುಸಾರಂಗ ದೇವರು ಶಿವಾಚಾರ್ಯರು, ತಾಳಿಕೋಟೆಯ ಶ್ರೀ ಗುರು ಜಯಸಿದ್ದೇಶ್ವರ ಶಿವಾಚಾರ್ಯರು, ಗುಂಡಕನಾಳದ ಶ್ರೀ ಗುರುಲಿಂಗ ಶಿವಾಚಾರ್ಯರು, ಶಹಾಪುರದ ಶ್ರೀ ಸೂಗುರೇಶ್ವರ ಶಿವಾಚಾರ್ಯರು, ಬಂಥನಾಳದ ಶ್ರೀ ವೃಷಭಲಿಂಗ ಶಿವಯೋಗಿ ಸ್ವಾಮೀಜಿ, ಜೈನಾಪುರ, ದದ್ದೇವಾಡಿ, ಜಮಖಂಡಿ, ಆಲಮೇಲ, ಹತ್ತಳ್ಳಿ ಬೊಮ್ಮನಹಳ್ಳಿ, ಕೊಣ್ಣೂರ ಶ್ರೀಗಳು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಉಮೇಶ ಕೋಳಕೂರ, ರಮೇಶ ಬಿದನೂರು, ಬಿ. ಆರ್. ಚೌಕಿಮಠ, ಬಸವರಾಜ ಕೌಲಗಿ, ಮಂಜುನಾಥ ಕೌಲಗಿ, ಎಂ. ಎನ್. ಬಿರಾದಾರ, ಶಿವಾನಂದ ಕೆಲೂರ, ಬಿ. ಜಿ. ಬಿರಾದಾರ (ಬಬಲೇಶ್ವರ), ಶರಣಪ್ಪ ಆಲೂರ ಪುಟ್ಟು ಸಾವಳಗಿ, ಸುರೇಶ ಬಿರಾದಾರ, ಪ್ರಭುಗೌಡ ಪಾಟೀಲ, ರಾಜುಗೌಡ ಪಾಟೀಲ(ಕುದುರಿ ಸಾಲವಾಡಗಿ), ಪಾಂಡು ಸಾಹುಕಾರ ದೊಡಮನಿ, ಸುರೇಶ ಶೇಡಶ್ಯಾಳ, ಶರಣು ಸಬರದ, ಚಿದಾನಂದ ಹಿರೇಮಠ, ಸಿದ್ದು ಹಿರೇಮಠ, ರಾಜು ಗಚ್ಚಿನಮಠ, ಸಿದ್ದು ಮಲ್ಲಿಕಾರ್ಜುನ ಮಠ, ಅಶೋಕ ತಿಮಶೆಟ್ಟಿ(ಕಾಖಂಡಕಿ) ಸೇರಿದಂತೆ ನಾನಾ ಗಣ್ಯರು ಮತ್ತು ಭಕ್ತರು ಉಪಸ್ಥಿತರಿದ್ದರು.