ವಿಜಯಪುರ: ಒಂದು ವಾರದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ತಹಸೀಲ್ದಾರ ಕಚೇರಿಗೆ ಅವರು ಭೇಟಿ ನೀಡಿದರು. ಪ್ರತಿ ಮಂಗಳವಾರ ತಾಲೂಕು ಕಚೇರಿಗೆ ಭೇಟಿಯ ಪೂರ್ವ ನಿರ್ಧರಿತ ಕಾರ್ಯಕ್ರಮದ ವೇಳಾಪಟ್ಟಿಯಂತೆ ಅವರು ತಾಲೂಕು ಕಚೇರಿಗೆ ಭೇಟಿದರು.
ತಹಸೀಲ್ದಾರ, ತಾ. ಪಂ. ಇಓ ಮತ್ತು ಇನ್ನಿತರ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳ ಸಮಕ್ಷಮದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.
ಈ ವೇಳೆ ಸ್ವೀಕೃತಗೊಂಡ ಒಟ್ಟು 26 ಅರ್ಜಿಗಳ ಪೈಕಿ ಕೆಲವು ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಯಿತು. ವಿಕಲಚೇತನ ಅರ್ಜಿದಾರರೊಬ್ಬರ ಮನವಿಯಂತೆ ಮಾಸಿಕ ವೇತನ ತಡೆ ಹಿಡಿದಿರುವುದನ್ನು ಕೂಡಲೇ ಬಿಡುಗಡೆ ಮಾಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ದಾಖಲೆ ತಿದ್ದುಪಡಿ ಮಾಡಬೇಕು. ರಸ್ತೆ ದುರಸ್ತಿ ಪಡಿಸಬೇಕು
ಶಾಲಾ ಕಂಪೌಂಡ್‌ಗೆ ನೀರು ನುಗ್ಗದಂತೆ ತಡೆಯಬೇಕು ಎನ್ನುವುದು ಸೇರಿದಂತೆ ನಾನಾ ವಿಷಯಗಳ ಅಹವಾಲು ಅರ್ಜಿಗಳ ವಿಲೇವಾರಿಗೆ ತುರ್ತಾಗಿ ಕ್ರಮ ವಹಿಸಲು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ವಾರದ ಗಡುವು ವಿದಿಸಿದರು.
ಪಂಪಸೆಟ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ವಿದ್ಯುತ್ ಪರಿವರ್ತಕ ಅಳವಡಿಸಲು ಕೋರಿ ಗಣಿಯಾರ ಗ್ರಾಮಸ್ಥರು ಮನವಿ ಸಲ್ಲಿಸಿದರು. ತಮ್ಮೂರಿನ ಸಾರ್ವಜನಿಕ ಶೌಚಾಲಯಕ್ಕೆ ದಾರಿ ಮಾಡಿಕೊಡಬೇಕು ಎಂದು ಚಾಂದಕವಟೆ ಗ್ರಾಮಸ್ಥರು ಮನವಿ ಮಾಡಿದರು. 1990 ರಿಂದೀಚೆಗೆ ಎಲ್ಲ ದಾಖಲಾತಿಗಳಲ್ಲಿ ಕುಮುಸಗಿ ಎಂದೇ ಗ್ರಾಮದ ಹೆಸರು ನಮೂದಾಗುತ್ತಿದೆ. ಆದರೆ, ಹಳೆಯ ದಾಖಲಾತಿಗಳಲ್ಲಿ ಕುಮಸಿ ಎಂದಷ್ಟೇ ಇದೆ. ಈ ಗೊಂದಲ ಸರಿಪಡಿಸಬೇಕು ಎಂದು ಆ ಗ್ರಾಮಸ್ಥರೊಬ್ಬರು ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳು ತಹಸೀಲ್ದಾರ ಅವರಿಗೆ ಸೂಚಿಸಿದರು.
ಸಿಂಧಗಿ ಪಟ್ಟಣದ ಸೌಂಧರ್ಯ ಹೆಚ್ಚುವ ಹಾಗೆ ಸಿಂಧಗಿ ಬಸ್ ನಿಲ್ದಾಣ ಸುತ್ತಲು ಹಾಗೂ ಇನ್ನೀತರ ಕೆಲವು ಕಡೆಗಳಲ್ಲಿ ರಸ್ತೆಗಳು ಸರಿಯಾಗಿ ದುರಸ್ತಿಯಾಗಬೇಕು. ಎಲ್ಲೆಂದರಲ್ಲಿ ಕಸ ಬೀಳದಂತೆ ನೋಡಿಕೊಳ್ಳಬೇಕು. ಚರಂಡಿಗಳನ್ನು ಸರಿಪಡಿಸಬೇಕು ಎಂದು ಪಟ್ಟಣದ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಸಿಂದಗಿ, ಆಲಮೇಲ್ ತಾಲೂಕಿನ ಸಾರ್ವಜನಿಕರು, ದೇವರಹಿಪ್ಪರಗಿ, ಜಾಲವಾದ, ಯಲಗೋಡ, ರಾಂಪೂರ ತಾಂಡಾ ಸೇರಿದಂತೆ ಇನ್ನೀತರ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳ ಸೂಚನೆ: ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಜನರಿಗೆ ತೊಂದರೆಯಾಗದ ಹಾಗೆ ಕೂಡಲೇ ಅಲ್ಲಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ತಹಸೀಲ್ದಾರಗೆ ನಿರ್ದೇಶನ ನೀಡಿದರು. ಅರ್ಜಿದಾರರೊಬ್ಬರ ಮನವಿಯಂತೆ ತೋಟದ ಬೆಳೆಗಳಿಗೆ ಹಾನಿಯಾಗದಂತೆ ವಿದ್ಯುತ್ ತಂತಿಗಳ ತೆರವಿಗೆ ಕ್ರಮ ವಹಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಇನ್ಮುಂದೆ ನಿಯಮಿತವಾಗಿ ತಾಲೂಕು ಕಚೇರಿಗಳಿಗೆ ಭೇಟಿ ನೀಡಲಾಗುವುದು. ತಾವು ಮತ್ತೊಮ್ಮೆ ತಾಲೂಕು ಕಚೇರಿಗೆ ಭೇಟಿ ನೀಡುವ ವೇಳೆಗೆ, ಸ್ವೀಕೃತವಾದ ಎಲ್ಲ ಅರ್ಜಿಗಳು ಪೂರ್ಣಪ್ರಮಾಣದಲ್ಲಿ ವಿಲೇವಾರಿಯಾಗಿರುವಂತೆ ನೋಡಿಕೊಳ್ಳಬೇಕು ಎಂದು ಆಯಾ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ನಿಂಗಪ್ಪ ಬಿರಾದಾರ, ತಾಪಂ ಕಾರ್ಯನಿರ್ವಹಣಾಧಿಕಾರಿ ಬಾಬು ರಾಠೋಡ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು ಮತ್ತು ಇನ್ನೀತರ ಇಲಾಖೆಗಳ ಅಧಿಕಾರಿಗಳು ಇದ್ದರು.