Kitturu Development: ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸಭೆ- ರೂ. 45.56 ಕೋ. ವೆಚ್ಚದಲ್ಲಿ ಕಿತ್ತೂರು ಅರಮನೆ, ಕೋಟೆ ಸಂರಕ್ಷಣೆ, ಜೀರ್ಣೋದ್ಧಾರ, ವಸ್ತುಸಂಗ್ರಹಾಲಯ ನವೀಕರಣಕ್ಕೆ ಅನುಮೋದನೆ

ಬೆಂಗಳೂರು: ಕಿತ್ತೂರಿನ ರಾಣಿ ಚೆನ್ನಮ್ಮನ ಅರಮನೆ ಮತ್ತು ಕೋಟೆಯನ್ನು ರೂ.18.05 ಕೋ. ವೆಚ್ಚದಲ್ಲಿ ಸಂರಕ್ಷಣೆ ಹಾಗೂ ಪುನರ್ ಸ್ಥಾಪನೆಯನ್ನು ಹಾಗೂ ವಸ್ತು ಸಂಗ್ರಹಾಲಯದ ನವೀಕರಣ ಮತ್ತು ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ರೂ. 27. 51 ಕೋ. ವೆಚ್ಚದಲ್ಲಿ ಕೈಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುಮೋದನೆ ನೀಡಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ‌ ಕಿತ್ತೂರು‌ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಯಿತು

ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ 4ನೇ ಸಭೆಯಲ್ಲಿ ಮಾತನಾಡಿದ ಅವರು, ಕಿತ್ತೂರು ಕೋಟೆ ಅತ್ಯಂತ ಶಿಥಿಲವಾಗಿದೆ. ‌ಇದನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಪುನರ್ ಸ್ಥಾಪನೆ ಮತ್ತು ಜೀರ್ಣೋದ್ಧಾರ ಎರಡೂ ಆಗಬೇಕಿದೆ. ‌ ಕೋಟೆಯ ಒಳಭಾಗದ ಜೀರ್ಣೋದ್ಧಾರ ಸರಿಯಾಗಿ ಮಾಡಬೇಕು ಹಾಗೂ ಕೋಟೆಯ ಸುತ್ತ ಸ್ವಚ್ಛ ಮಾಡಬೇಕು. ಇದರ ನಿರ್ವಹಣೆಗೆ ಅಂದಾಜು ಪಟ್ಟಿಯನ್ನು ತಯಾರಿಸುವಂತೆ ಮುಖ್ಯಮಂತ್ರಿಗಳು ಸೂಚಿನೆ ನೀಡಿದರು.

ವಸ್ತು ಸಂಗ್ರಹಾಲಯದಲ್ಲಿ ಕಿತ್ತೂರು ಸಂಸ್ಥಾನದ ಸಂಪೂರ್ಣ ಕಥೆಯನ್ನು ಹೇಳುವಂತೆ ಅಭಿವೃದ್ಧಿಗೊಳಿಸಬೇಕು. ಪ್ರತಿ ಪಾತ್ರಕ್ಕೂ ಸಮಾನ ಮಹತ್ವವನ್ನು ನೀಡಬೇಕು ಕಿತ್ತೂರು ಅರಮನೆಯ ದರ್ಬಾರಿನ ಪ್ರತಿರೂಪವನ್ನು ನಿರ್ಮಿಸಲು ಹುಬ್ಬಳ್ಳಿಯ ಮೂರು ಸಾವಿರ ಮಠ ಹಾಗೂ ಅಮ್ಮಿನಭಾವಿ ಮಠಗಳ ವಾಸ್ತುಶಿಲ್ಪವನ್ನು ಅಧ್ಯಯನ ಮಾಡಬೇಕು. ಹಾಲೋಗ್ರಾಫಿಕ್ ಸ್ಟುಡಿಯೋ ನಿರ್ಮಾಣವನ್ನು ಮುಂದಿನ ಹಂತದಲ್ಲಿ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

ಕಾಮಗಾರಿಯನ್ನು ಅನುಭವ ಮತ್ತು ಪರಿಣಿತಿಹೊಂದಿರುವ ಗುತ್ತಿಗೆದಾರರಿಂದ ಮಾಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಸಚಿವ ಗೋವಿಂದ ಕಾರಜೋಳ, ಶಾಸಕರಾದ ಮಹಾಂತೇಶ ದೊಡ್ಡಗೌಡರ್, ಮಹಾಂತೇಶ್ ಕೌಜಲಗಿ, ಸತೀಶ್ ಜಾರಕಿಹೊಳಿ, ಕಂದಾಯ ಇಲಾಖೆ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.‌ ಎನ್. ಮಂಜುಳಾ, ಆರ್ಥಿಕ ಇಲಾಖೆ ಕಾರ್ಯದರ್ಶಿ ಡಾ. ಪಿ. ಸಿ. ಜಾಫರ್ ಮುಂತಾದವರು‌ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌