ಬೆಂಗಳೂರು: ಸರಕಾರಿ ನಿವೃತ್ತ ನೌಕರರಿಗೆ ಆರೋಗ್ಯ ಯೋಜನೆಯನ್ನು ವಿಸ್ತರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಸರಕಾರಿ ನಿವೃತ್ತ ನೌಕರರ ಸಂಘದ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರಿ ನಿವೃತ್ತ ನೌಕರರಿಗಾಗಿ ಆರೋಗ್ಯ ಯೋಜನೆಯನ್ಬು ವಿಸ್ತರಿಸಲಾಗುವುದು. ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗನೆ ಈ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ಅವರು ತಿಳಿಸಿದರಯ.
ನಿವೃತ್ತ ನೌಕರರು ನಿರಂತರವಾಗಿ ಕ್ರಿಯಾಶೀಲರಾಗಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಿ ಕೆಲಸ ಮಾಡಬೇಕು. ಮಾನವೀಯತೆ ಇರುವ ನೌಕರರಿದ್ದರೆ ಬಡವರ ಕಷ್ಟ ಕಾರ್ಪಣ್ಯ ದೂರ ಮಾಡಲು ಸಾಧ್ಯ. ಇದರ ತಳಹದಿಯ ಮೇಲೆ ಆಡಳಿತ ನಡೆಯಬೇಕು. ಮತ್ತೊಬ್ಬರ ಬಗ್ಗೆ ಪ್ರೀತಿ, ವಿಶ್ವಾಸ, ಅನುಕಂಪವಿದ್ದಾಗ ನ್ಯಾಯ ಕೊಡಲು ಸಾಧ್ಯ. ಆರು ಕೋಟಿಗಿಂತ ಹೆಚ್ಚು ಜನಸಂಖ್ಯೆ ನಮ್ಮ ಕೈಗೆ ಜವಾಬ್ದಾರಿ ಕೊಟ್ಟಿದೆ. ಆರು ಲಕ್ಷಕ್ಕೂ ಹೆಚ್ಚಿರುವ ಸರಕಾರಿ ನೌಕರರು ಹಾಗೂ ಆಡಳಿತ ಮಾಡುವ ಜನಪ್ರತಿನಿಧಿಗಳ ಕೈಯಲ್ಲಿ ಜವಾಬ್ದಾರಿ ಇದೆ. ನಾವೆಲ್ಲ ಜನರ ವಿಶ್ವಾಸದ ಟ್ರಸ್ಟಿಗಳು. ನಮ್ಮ ಮೇಲಿರುವ ವಿಶ್ವಾಸಕ್ಕೆ ಅರ್ಹರಾಗಿ ನಾವು ನಡೆದುಕೊಳ್ಳಬೇಕು. ಆಗ ನಾವು ಈ ಸ್ಥಾನದಲ್ಲಿ ಕುಳಿತಿದ್ದಕ್ಕೆ ಸಾರ್ಥಕವಾಗುತ್ತದೆ. ಈ ಮನೋಭಾವ ಸರಕಾರಿ ನೌಕರರಿಗೆ ಬಂದರೆ ಕರ್ನಾಟಕ ವಿಶ್ವದಲ್ಲಿಯೇ ನಂಬರ್ ಒನ್ ಆಗಲು ಸಾಧ್ಯ ಎಂದು ಸಿಎಂ ಹೇಳಿದರು.
ಆಡಳಿತಕ್ಕೆ ಅನುಭವದ ಮಾರ್ಗದರ್ಶನ ಅಗತ್ಯ
ಆಡಳಿತ ನಡೆಸಲು ನಿವೃತ್ತ ನೌಕರರ ಸಲಹೆ ಅವಸ್ಯವಿದೆ. ತಿಳಿದುಕೊಳ್ಳುವ ಹಸಿವಿರುವವನು ಬೆಳೆಯುತ್ತಾನೆ. ಸರಕಾರ ನಿವೃತ್ತ ನೌಕರರ ಸೇವೆಯನ್ನು ಆಗಾಗ್ಗೆ ಬಳಸಿಕೊಳ್ಳುತ್ತದೆ. ನಿವೃತ್ತರಾದೆವು ಎಂದು ನಿರಾಸೆಯಾಗಬೇಕಿಲ್ಲ. ಈ ಸರಕಾರ ನಿಮ್ಮ ಬಗ್ಗೆ ಗೌರವ ಇಟ್ಟು ಕೊಂಡಿದೆ. ನಿಮ್ಮ ಬೆಲೆ ನಮಗೆ ತಿಳಿದಿದೆ. ಇಷ್ಟು ದೊಡ್ಡ ಅನುಭವವುಳ್ಳ ಮಾನವ ಶಕ್ತಿ, ರಾಜ್ಯ ಕಟ್ಟಲು ಉಪಯೋಗವಾಗುತ್ತದೆ. ನಿವೃತ್ತಿ ಎನ್ನುವುದು ಸರಕಾರದ ಕಾನೂನಿನ ಅನುಸಾರವಿದೆ. ವ್ಯಕ್ತಿಗೆ ನಿವೃತ್ತಿ ಎನ್ನುವುದು ಮನಸ್ಥಿತಿ. ಕೆಲವರು ನೌಕರಿಯಲ್ಲಿದ್ದೆ ನಿವೃತ್ತಿಯಾಗುತ್ತಾರೆ. ಮಾನಸಿಕವಾಗಿ ನಿವೃತ್ತರಾಗುತ್ತಾರೆ. ಇನ್ನು ಕೆಲವು ನಿವೃತ್ತ ನೌಕರರು ಇತರರಿಗೆ ಮಾರ್ಗದರ್ಶನ ಮಾಡುತ್ತಾರೆ. ಈಗಲೂ ಕ್ರಿಯಾಶೀಲರಾಗಿದ್ದಾರೆ. ಮಾನಸಿಕವಾಗಿ ನಿವೃತ್ತರಾಗದವರು ಜೀವನದಲ್ಲಿ ಎಂದೂ ನಿವೃತ್ತ ರಾಗುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಸಮಾಜದ ಅಭಿವೃದ್ಧಿಗೆ ನಿವೃತ್ತ ನೌಕರರು ಕೊಡುಗೆ ನೀಡಬಹುದು. ಮನಸ್ಸಿಗೆ ಸಂತೋಷ ಕೊಡುವ ಕೆಲಸ ಮಾಡಲು ಅವಕಾಶವಿದೆ. ರಾಜಕಾರಣಕ್ಕೆ ವಿದ್ಯಾರ್ಹತೆ ಹಾಗೂ ನಿವೃತ್ತಿ ಎರಡೂ ಇಲ್ಲ. ಹೀಗಾಗಿ ಕೆಲವು ನೌಕರರು ನಿವೃತ್ತಿಯ ನಂತರ ರಾಜಕಾರಣಕ್ಕೆ ಸೇರುತ್ತಾರೆ. ರಾಜಕಾರಣವನ್ನು ಪ್ರಾಮಾಣಿಕತೆಯಿಂದ, ಮಾನವೀಯತೆಯಿಂದ, ಒತ್ತಡದ ನಡುವೆಯೂ ಆತ್ಮಸಾಕ್ಷಿಗೆ ತಕ್ಕಂತೆ ಮಾಡಿದರೆ ಸಂತೋಷ ಹಾಗೂ ತೃಪ್ತಿ ಇರುತ್ತದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಪ್ರಗತಿಯ ಚಕ್ರ ತಿರುಗಲು ಪ್ರಾಮಾಣಿಕವಾಗಿ ಸೇವೆ ಅಗತ್ಯ
ಕರ್ನಾಟಕದ ಆಡಳಿತ ಉತ್ತಮವಾಗಿದೆ ಎಂಬ , ಅದರಲ್ಲಿ ನಿವೃತ್ತ ನೌಕರರ ಪಾತ್ರ ದೊಡ್ಡದಿದೆ. ಇತ್ತೀಚಿನ ದಿನಗಳಲ್ಲಿ ನೌಕರರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಆದರೆ ಹತ್ತಿರದಿಂದ ನೋಡಿದಾಗ ಅವರ ಸೇವೆ ವ್ಯವಸ್ಥಿತ ಆಡಳಿತಕ್ಕೆ ಎಡೆ ಮಾಡಿಕೊಟ್ಟಿದೆ. ಸರಕಾರಿ ನೌಕರರು ಹಾಗೂ ನಿವೃತ್ತ ನೌಕರರು ಸರಕಾರದ ಎರಡು ಕಣ್ಣುಗಳಿದ್ದಂತೆ. ಅವರ ಬಗ್ಗೆ ಅಪಾರ ಗೌರವವಿದೆ. ಆಡಳಿತ ಚಕ್ರ ಸುಗಮವಾಗಿ ಸಾಗಲು ಸರಕಾರಿ ನೌಕರರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದಾಗ ಮಾತ್ರ ಸಾಧ್ಯ. ಇಲ್ಲದಿದ್ದರೆ ಪ್ರಗತಿಯ ಚಕ್ರ ಮುಂದುವರೆಯುವುದಿಲ್ಲ ಎಂದು ಸಿಎಂ ಹೇಳಿದರು.
ನಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಂಡು ನಡೆದರೆ ಸುಲಭವಾಗಿ ಆಡಳಿತ ಚಕ್ರ ಮುಂದುವರೆಯುತ್ತದೆ. 800 ವರ್ಷಗಳ ಹಿಂದೆಯೇ ಆಡಳಿತ ಹೇಗಿರಬೇಕೆಂದು ಶಿಲಾಶಾಸನಗಳು ಬರೆಸಲಾಗಿದೆ. ರಾಜ್ಯದಲ್ಲಿ ಉತ್ತಮ ಆಡಳಿತವಿರಬೇಕು. ಇಡೀ ದೇಶದಲ್ಲಿ ಕರ್ನಾಟಕಕ್ಕೆ ಒಳ್ಳೆಯ ಹೆಸರಿದೆ ಎಂದು ಅವರು ಹೇಳಿದರು.
ಜನಪರವಾಗಿ ಕೆಲಸ ಮಾಡಬೇಕು
ಆಧುನಿಕ ತಂತ್ರಜ್ಞಾನ, ತಂತ್ರಾಂಶ ಬಳಕೆ, ಇನ್ನಷ್ಟು ಪ್ರಾಮಾಣಿಕವಾಗಿ, ದಕ್ಷತೆಯಿಂದ ಕೆಲಸ ಮಾಡುವ ಅವಶ್ಯಕತೆ ಇದೆ. ಜನಪರವಾಗಿ ಕೆಲಸ ಮಾಡಬೇಕು. ಕೆಲಸ ಮಾಡಬಾರದು ಎಂದು ತೀರ್ಮಾನ ಮಾಡಿದರೆ ಅದಕ್ಕೆ ಕಾರಣಗಳನ್ನು ಹುಡುಕುತ್ತೇವೆ. ಬಡವರಿಗೆ, ದೀನದಲಿತರಿಗೆ, ಕಷ್ಟದಲ್ಲಿರುವವರಿಗೆ ಕೆಲಸ ಮಾಡಲು ಒಂದು ಕಾರಣ ಇದ್ದರೆ ಸಾಕು. ಅದು ಮಾನದಂಡವಾಗಬೇಕು. ಕಾನೂನಿನ ಚೌಕಟ್ಟಿನಲ್ಲಿ ನಮ್ಮದೇ ಮಾನದಂಡಗಳನ್ನು ಹಾಕಿಕೊಳ್ಳುವ ಅಗತ್ಯವಿದೆ. ಬಡವರ ಪರವಾದ ದೃಷ್ಟಿಯಿರಬೇಕು. ಆಡಳಿತದಲ್ಲಿ ಕರುಣೆ ಮುಖ್ಯ. ಜಾಗತೀಕರಣ, ಉದಾರೀಕರಣ, ಖಾಸಗೀಕರಣವಾದ ಬಳಿಕ ಅಂತ:ಕರಣ ಮರೆತ್ತಿದ್ದೇವೆ. ಆಡಳಿತವೂ ಮಾರುಕಟ್ಟೆ ಕೇಂದ್ರೀಕೃತವಾಗುತ್ತಿದೆ. ಮಾರುಕಟ್ಟೆ ಯಲ್ಲಿ ಮಾನವೀಯತೆ ದೊರೆಯುವುದು ವಿರಳ. ನಮ್ಮ ಮನದಾಳದಲ್ಲಿ, ನಿರ್ಣಯಗಳಲ್ಲಿ ಮಾನವೀಯತೆ ಇರಬೇಕು. ಆಗ ಮಾತ್ರ ಕಲ್ಯಾಣ ರಾಜ್ಯವಾಗಿ ಬೆಳೆಯಲು ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.