MBP Siddheshwar Swamiji: ಎಂ. ಬಿ. ಪಾಟೀಲ ಕೇವಲ ನಾಯಕರಲ್ಲ, ಜಲದನಾಯಕರು- ಸಿದ್ಧೇಶ್ವರ ಸ್ವಾಮೀಜಿ

ವಿಜಯಪುರ: ಬದುಕು ಅಮೂಲ್ಯ.  ದೇಹ ಮನಸ್ಸು ಇದನ್ನು ಸ್ವಚ್ಚವಾಗಿಟ್ಟುಕೊಂಡು ದೇವರಿಗೆ ಸಮರ್ಪಣೆ ಮಾಡುವದರಿಂದ ಜೀವನ ಸಾರ್ಥಕವಾಗಲಿದೆ.  ದಣಿವಿಲ್ಲದೇ ಮಾಡುವ ಕಾರ್ಯವೇ ದಾಸೋಹ ಮತ್ತು ಕಾಯಕಗಳಿಗೆ ಬಸವಣ್ಣನವರು ಮಹತ್ವ ನೀಡಿದ್ದರು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

ತಿಕೋಟಾ ಪಟ್ಟಣದಲ್ಲಿ ಗ್ರಾಹಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ತಿಕೋಟಾ ಗ್ರಾಮದಲ್ಲಿ ಮೊದಲು ಜನರು ಹೆಚ್ಚು ಕಂಡು ಬರುತ್ತಿರಲಿಲ್ಲ.  ಇಲ್ಲಿ ಹೆಚ್ಚಿನ ಸಂಖ್ಯೆ ಇಲ್ಲ ಎಂದು ಅಂದುಕೊಂಡಿದ್ದೆ.  ಆದರೆ, ಇಂದು ನೋಡಿದರೆ ಎಣಿಕೆಗೆ ಸಿಗದಷ್ಟು ಜನರು ಇಲ್ಲಿ ಸೇರಿರುವುದು ನಿಜವಾಗಿ ಸಂತಸ ತಂದಿದೆ.  ಎಂ. ಬಿ. ಪಾಟೀಲ ಅವರು ಮಾಡಿರುವ ನೀರಾವರಿ ಯೋಜನೆಗಳಿಂದ ಗುಳೆ ಹೋಗಿದ್ದವರು ಇಂದು ಮರಳಿ ತಾಯ್ನಾಡಿಗೆ ಮರಳಿ ಕೃಷಿಯಲ್ಲಿ ತೊಡಗಿದ್ದಾರೆ.  ನೀರು ಕೊಟ್ಟರೆ ಅನ್ನ, ಅನ್ನ ಕೊಟ್ಟರೆ ನೀರು ಸಿಗುತ್ತದೆ ಎಂಬುದಕ್ಕೆ ಈ ಗ್ರಾಮವೇ ಸಾಕ್ಷಿ.  ಭೂಮಿಯಲ್ಲಿ ನೀರು ಹರಿಯುವವರಿಗೂ, ಜನರು ನೀರು ಕುಡಿಯುವವರೆಗೂ ಜಲದನಾಯಕರು ನೆನಪಿನಲ್ಲಿರುತ್ತಾರೆ.  ಅವರೇ ಎಂ. ಬಿ. ಪಾಟೀಲರು ಎಂದು ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ತಿಕೋಟಾ ಪಟ್ಟಣದಲ್ಲಿ ಗ್ರಾಹಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಕಾರ್ಯಕ್ರಮ ನಡೆಯಿತು

ತಿಕೋಟಾ ಗ್ರಾಮ ತ್ರಿ ಕೂಟ (ಕಾಯಕ, ಹೃದಯವಂತಿಕೆ, ಬುದ್ದಿವಂತಿಕೆ) ಮೂರು ವಿಚಾರಗಳನ್ನು ಒಳಗೊಂಡ ಗ್ರಾಮವೇ ತಿಕೋಟಾ.  ಜಿಲ್ಲೆಯ ಗ್ರಾಮಗಳಿಗೆ ನೀರು ಬರುತ್ತದೆ ಎಂದು ಯಾರು ತಿಳಿದಿರಲಿಲ್ಲ.  ಅದನ್ನು ಎಂ. ಬಿ. ಪಾಟೀಲ ಅವರು ಸಾಧಿಸಿದರು.  ಇವರು ಇನ್ನೂ ಹೆಚ್ಚಿನ ಉತ್ತಮ ಕಾರ್ಯಮಾಡಲಿ ಎಂದು ಹಾರೈಸುತ್ತೇನೆ ಎಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷ ವಹಿಸಿದ್ದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಬಬಲೇಶ್ವರ ಶಾಸಕ ಎಂ. ಬಿ. ಪಾಟೀಲ ಮಾತನಾಡಿ, ಎಲ್ಲರ ಸಹಕಾರ, ನಂಬಿಕೆಯಿಂದ ಸಂಘ ಅಥವಾ ಸಂಸ್ಥೆಗಳು ಒಂದು ಹಂತಕ್ಕೆ ಬರಲು ಸಾಧ್ಯ. ಅದಕ್ಕೆ ದಿ. ಬಸಪಣ್ಣ ತೇಲಿ ಸಾಕ್ಷಿ.  ಅವರು ತಿಕೋಟಾ ನೀರಾವರಿಗೆ ಒಳಪಟ್ಟು ರೈತರಿಗೆ ಅಗತ್ಯ ನೀರು ದೊರಕಿದರೆ ಬಂಗಾರ ಬೆಳೆಯಬಹುದು ಇದರಿಂದ ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ತಿಳಿದು ಅನೇಕ ಹೋರಾಟಗಳಲ್ಲಿ ಭಾಗಿಯಾಗಿದ್ದರು.  ಇಂದು ಸಂಪೂರ್ಣ ನೀರಾವರಿಗೆ ಒಳಪಟ್ಟಿದೆ. ಆದರೆ ಇದನ್ನು ನೋಡಲು ಅವರೆ ಇಲ್ಲ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯನವರ ನೇತೃತ್ವ ಸರಕಾರ ಅಧಿಕಾರಕ್ಕೆ ಬಂದರೆ, ನೀರಾವರಿಗೆ ರೂ. 2 ಲಕ್ಷ ಕೋ. ಅನುದಾನ ಮೀಸಲಿಟ್ಟು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಎಂ. ಬಿ. ಪಾಟೀಲ ಹೇಳಿದರು.

ಈ ಸಂದರ್ಭದಲ್ಲಿ ಇಳಕಲ್ಲ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಸ್ವಾಮಿಜಿ, ಹಿರೇಮಠದ ಶಿವಬಸವ ಶಿವಾಚಾರ್ಯ ಸ್ವಾಮಿಗಳು, ತಿಕೋಟಾ ವೀರಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮಿಜಿ, ಹಣಮಾಪುರ ಸಿದ್ದಯೋಗಿಮಠದ ಅಮರೇಶ್ವರ ಮಹಾರಾಜರು ಸಾನಿಧ್ಯ ವಹಿಸಿದ್ದರು.

ಗ್ರಾಹಕರ ಸಹಕಾರ ಸಂಘದ ಅಧ್ಯಕ್ಷೆ ಭಾಗೀರಥಿ ತೇಲಿ, ವಿಧಾನ ಪರಿಷತ ಮಾಜಿ ಸದಸ್ಯ ಜಿ. ಕೆ. ಪಾಟೀಲ, ವಿಜಯಪುರದ ಸಹಕಾರ ಸಂಘಗಳ ಉಪನಿಬಂಧಕ ಸಿ. ಎಸ್. ನಿಂಬಾಳ, ಸಹಾಯಕ ನಿಬಂಧಕ ಎಸ್. ಜಿ. ಕುಂಬಾರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌