Sound Earthquake: ವಿಜಯಪುರ ಜಿಲ್ಲೆಯಲ್ಲಿ ಬೆಳ್ಳಂಬೆಳಿಗ್ಗೆ ಭೂಕಂಪನ ಅನುಭವ

ವಿಜಯಪುರ ನಗರ, ಇಂಡಿ ಸೇರಿದಂತೆ ಬಹುತೇಕ ಕಡೆ ಬೆಳ್ಳಂಬೆಳಿಗ್ಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಶಬ್ದವೂ ಕೇಳಿ ಬಂದಿದೆ. ಬೆ. 5.40ರ ಸುಮಾರಿಗೆ ಸಣ್ಣ ಪ್ರಮಾಣದಲ್ಲಿ ಅನುಭವಕ್ಕೆ ಬಂದಿದ್ದರೆ, ಬೆ. 6.22ರ ಸುಮಾರಿಗೆ ಭೂಮಿ‌‌ ಗಢಗಢ ನಡುಗಿದ ಅನುಭವವಾಗಿದೆ.

ಸಕ್ಕರೆ ನಿದ್ದೆಯಲ್ಲಿದ್ದ ಜನ ಭೂಮಿ ನಡುಗಿದ ಅನುಭದಿಂದಾಗಿ ಹೌಹಾರಿ ಎದ್ದು ಕುಳಿತು‌ ಮನೆಯಲ್ಲಿದ್ದವರಿಗೆ ಭೂಕಂಪ ಆಯ್ತಾ ಎಂದು ಗಾಬರಿಯಿಂದ‌ ಪ್ರಶ್ನಿಸಿದ್ದಾರೆ.

ವಿಜಯಪುರ ನಗರದ ಆದರ್ಶ ನಗರ, ಕಾಸಗೇರಿ ಓಣಿ, ಗೋಳಗುಮ್ಮಟ ಪ್ರದೇಶ, ಕೆಸಿ ನಗರ, ಜಲನಗರ ಸೇರಿದಂತೆ ಬಹುತೇಕ ಕಡೆ ಜನ ಮನೆಯಿಂದ ಹೊರ ಬಂದು ಅಕ್ಕಪಕ್ಕದ ಮನೆಯವರಿಗೆ ಅನುಭವ ಹಂಚಿಕೊಂಡಿದ್ದಾರೆ. ಜನವೆಲ್ಲ ಮನೆಯಿಂದ ಹೊರ ಬಂದು ಭೂಕಂಪದ ಅನುಭವದ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ಆದರ್ಶ ನಗರದ ನಿವಾಸಿ ಅರವಿಂದ ಬಣಗಾರ ಮತ್ತು ಕಾಸಗೇರಿ ಓಣಿಯ ನಾಯ್ಕೋಡಿ ಹಾಗೂ ಕೆಸಿ ನಗರ ನಿವಾಸಿ ರಾಜು ಗಚ್ಚಿನಮಠ ಅವರು ತಿಳಿಸಿದ್ದಾರೆ.

ಇಂಡಿ ಪಟ್ಡಣದಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಅಲ್ಲಿನ ನಿವಾಸಿ ಜಗದೀಶ ಕ್ಷತ್ರಿ ಬಸವ ನಾಡು ವೆಬ್ ಗೆ ಮಾಹಿತಿ ನೀಡಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯಿಂದಲೇ ಜಿಟಿಜಿಟಿ ಮಳೆಯಾಗುತ್ತಿದ್ದು, ಭಾರಿ ಮೋಡ ಕವಿದ ವಾತಾವರಣದ ಮಧ್ಯೆಯೇ ಈ ಭೂಕಂಪನ ಅನುಭವವಾಗಿದ್ದು, ಗಟ್ಟಿನೆಲವಾಗಿರುವ ವಿಜಯಪುರ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

ಬಹುಷಃ ವಿಜಯಪುರ ಜಿಲ್ಲೆ ಅಥವಾ ಮಹಾರಾಷ್ಟ್ರದಲ್ಲಿ ಈ ಭೂಕಂಪದ ಕೇಂದ್ರ ಬಿಂದು ಇರಬಹುದು ಎಂದು ಶಂಕಿಸಲಾಗಿದೆ.

ಈ ಭೂಕಂಪದ ತೀವ್ರತೆ, ಕೇಂದ್ರ ಬಿಂದು ಮತ್ತು‌ ಇತರ ಮಾಹಿತಿಯನ್ನು ವಿಜಯಪುರ ಜಿಲ್ಲಾಡಳಿತ ಇನ್ನಷ್ಡೇ ಸ್ಪಷ್ಟಪಡಿಸಬೇಕಿದೆ.

Leave a Reply

ಹೊಸ ಪೋಸ್ಟ್‌