ವಿಜಯಪುರ: ಬೆಳಿಗ್ಗೆ ಸಂಭವಿಸಿದ ಭೂಕಂಪನ ದಿಂದಾಗಿ ವಿಜಯಪುರ ಜಿಲ್ಲೆಯ ತಿಕೋಟಾ ಮತ್ತು ಇಂಡಿ ತಾಲೂಕುಗಳಲ್ಲಿ ಹಾನಿ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
ತಿಕೋಟಾ ತಾಲೂಕಿನ ಅರಕೇರಿ ಮತ್ತು ಅರಕೇರಿ ತಾಂಡಾಗಳಲ್ಲಿ ಭೂಕಂಪನದಿಂದ ಹಾನಿಯಾಗಿದೆ. ಹಿರಿಯ ಭೂ ವಿಜ್ಞಾನಿ, ತಿಕೋಟಾ ಕಂದಾಯ ನಿರೀಕ್ಷಕರು ಮತ್ತು ಅರಕೇರಿ ಗ್ರಾಮ ಲೆಕ್ಕಾಧಿಕಾರಿ ಅವರು ತಹಸೀಲ್ದಾರ ಅವರ ಸಮ್ಮುಖದಲ್ಲಿ ಜಂಟಿಯಾಗಿ ಹಾನಿಯಾದ ಮನೆಗಳ ಸಮೀಕ್ಷೆ ನಡೆಸಿದ್ದಾರೆ.
ಅರಕೇರಿ ಮತ್ತು ಅರಕೇರಿ ತಾಂಡಾದಲ್ಲಿ ಎರಡು ಹಳೆಯ ಮನೆಗಳ ಹಿಂಭಾಗದ ಭಾಗವು ಭಾಗಶಃ ಹಾನಿಯಾಗಿದೆ. ಅದೇ ಗ್ರಾಮದಲ್ಲಿನ ಗ್ರಾಮ ಪಂಚಾಯಿತಿ ಕಟ್ಟಡ ಸೇರಿದಂತೆ, ಅರಕೇರಿ ಗ್ರಾಮದ ಸುತ್ತಲಿನ ತಾಂಡಾಗಳಲ್ಲಿ ಮತ್ತು ಮಜರೆ ಗ್ರಾಮದಲ್ಲಿ ಸುಮಾರು 48 ಮನೆಗಳ ಗೋಡೆಗಳಲ್ಲಿ ಅಲ್ಪ ಪ್ರಮಾಣದ ಬಿರುಕು ಬಿಟ್ಟಿದ್ದು ಕಂಡುಬಂದಿದೆ. ಭೂ ಕಂಪನದಿಂದಲೇ ಈ ಮನೆಗಳಿಗೆ ಹಾನಿಯಾಗಿದೆ ಎಂದು ಗ್ರಾಮಸ್ಥರು ಖಚಿತಪಡಿಸಿದ್ದಾರೆ. ಇದನ್ನು ಹೊರತುಪಡಿಸಿ ತಿಕೋಟಾ ತಾಲ್ಲೂಕಿನ ಯಾವುದೇ ಗ್ರಾಮಗಳಲ್ಲಿ ಭೂ ಕಂಪನದಿಂದ ಜೀವ ಹಾಗೂ ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿರುವುದಿಲ್ಲ ಎಂದು ತಿಕೋಟಾ ತಹಸೀಲ್ದಾರ ಅವರು ಪ್ರಾಥಮಿಕ ವರದಿ ನೀಡಿದ್ದಾರೆ.
ಅದೇ ರೀತಿ ಭೂಕಂಪನದಿಂದಾಗಿ ಇಂಡಿ ತಾಲೂಕಿನ ಬಳ್ಳೊಳ್ಳಿ ಗ್ರಾಮದಲ್ಲಿ 15 ಅಡಿಯ ಭಾವಿಯ ನೀರು ಬತ್ತಿ ಹೋಗಿದೆ ಎಂದು ಇಂಡಿ ತಹಸೀಲ್ದಾರ ಮಾಹಿತಿ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ದೂರವಾಣಿ ಕರೆ ಹಿನ್ನೆಲೆ ತುರ್ತು ಪರಿಶೀಲನೆ
ಭೂಕಂಪನ ಹಿನ್ನೆಲೆಯಲ್ಲಿ ಹಾನಿಯಾದ ಬಗ್ಗೆ ತುರ್ತಾಗಿ ಮಾಹಿತಿ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳು ದೂರವಾಣಿ ಕರೆ ಮಾಡಿದ ಬೆನ್ನಲ್ಲೇ ಕಾರ್ಯಪ್ರವೃತ್ತರಾಗಿ ಹಾನಿಯ ಬಗ್ಗೆ ಪರಿಶೀಲಿಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ ಎಂದು ತಿಕೋಟಾ ತಹಸೀಲ್ದಾರ ಎಂ.ಎಸ್.ಅರಕೇರಿ ಮತ್ತು ಇಂಡಿ ತಹಸೀಲ್ದಾರ ನಾಗಯ್ಯ ಹಿರೇಮಠ ಅವರು ತಿಳಿಸಿದ್ದಾರೆ.