ವಿಜಯಪುರ: ಅಬಕಾರಿ ಮತ್ತು ಪೊಲೀಸ ಇಲಾಖೆ ಅಧಿಕಾರಿಗಳನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ತರಾಟೆಗೆ ತೆಗೆದುಕೊಂಡ ಘಟನೆ ವಿಜಯಪುರದಲ್ಲಿ ನಡೆದಿದೆ.
ಬಬಲೇಶ್ವರ ತಾಲೂಕಿನ ಮದಗುಣಕಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟದಿಂದ ಸಮಸ್ಯೆಯಾಗುತ್ತಿದೆ. ಅಪ್ರಾಪ್ತ ಯುವಕರು ಕೂಡ ಮದ್ಯದ ದಾಸರಾಗುತ್ತಿದ್ದಾರೆ. ಈಗಾಗಲೇ ಕೆಲವು ಪುರುಷರು ಸಾವಿಗೀಡಾಗಿದ್ದಾರೆ. ಇದರಿಂದ ಕುಟುಂಬ ನಿರ್ವಹಣೆ ಜವಾಬ್ದಾರಿ ಮಹಿಳೆಯರಿಗೆ ಭಾರವಾಗುತ್ತಿದೆ. ಆದ್ದರಿಂದ ಈ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮದ ಮಹಿಳೆಯರು ವಿಜಯಪುರದಲ್ಲಿ ತಮ್ಮ ಶಾಸಕರಾದ ಎಂ. ಬಿ. ಪಾಟೀಲ ಅವರ ನಿವಾಸಕ್ಕೆ ತೆರಳಿ ಗಮನಸೆಳೆದರು. ಅಲ್ಲದೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮಹಿಳೆಯರು ಶಾಸಕರಿಗೆ ಮನವಿ ಮಾಡಿದರು.
ಕೂಡಲೆ ಮಹಿಳೆಯರ ಸಮಸ್ಯೆಗೆ ಸ್ಪಂದಿಸಿದ ಎಂ. ಬಿ. ಪಾಟೀಲ ಅಬಕಾರಿ ಇಲಾಖೆ ಅಧಿಕಾರಿಗೆ ಮೊಬೈಲ್ ಮೂಲಕ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಈ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಯಾಕೆ ನಡೆಯುತ್ತಿದೆ? ನೀವು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡುತ್ತಿಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದರು.
ನೀವೇ ಹೋಗಿ ಅಕ್ರಮ ಮದ್ಯ ಮಾರಾಟ ಬಂದ ಮಾಡಿಸುತ್ತೀರಾ? ಅಥವಾ ನಾವೇ ಬಂದು ಬಂದ ಮಾಡಿಸಬೇಕಾ? ಇವತ್ತೇ ನೀವು ಮದಗುಣಕಿ ಗ್ರಾಮಕ್ಕೆ ಹೋಗಬೇಕು. ಅಕ್ರಮ ಮದ್ಯ ಮಾರಾಟ ಬಂದ ಮಾಡಿಸಬೇಕು. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ಶಾಸಕರು ಎಚ್ಚರಿಕೆ ನೀಡಿದರು.
ಘಟನೆ ಹಿನ್ನೆಲೆ
ಮದಗುಣಕಿ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಂಬಾಗಿಗೆ ಹೊಂದಿಕೊಂಡಿರುವ ಮಜರೆ ಗ್ರಾಮವಾಗಿದೆ. ಇಲ್ಲಿ ಸುಮಾರು 1500 ರಿಂದ 2000 ಜನಸಂಖ್ಯೆಯಿದೆ. ಇಲ್ಲಿ ಅಕ್ರಮವಾಗಿ ಮದ್ ಮಾರಾಟ ಮಾಡುತ್ತಿರುವುದು ಮಹಿಳೆಯರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.
ಅಕ್ರಮ ಮದ್ಯ ಮಾರಾಟ ವಿರುದ್ಧ ಕಣ್ಣಿರು ಹಾಕಿದ ಮಹಿಳೆಯರು
ಅಕ್ರಮ ಮದ್ಯ ಮಾರಾಟ ವಿರುದ್ಧ ಧ್ವನಿ ಎತ್ತಿರುವ ಮದಗುಣಕಿ ಗ್ರಾಮದ ಮಹಿಳೆಯರು ತಮಗಾಗುತ್ತಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ನಮ್ಮೂರಲ್ಲಿ ಸುಮಾರು 1500 ರಿಂದ 2000 ಜನಸಂಖ್ಯೆ ಇದೆ. ಆದರೆ ನಮ್ಮ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವ 11 ಅಂಗಡಿಗಳಿವೆ. ಮಕ್ಕಳು ಸಹಿತ ಈ ಅಂಗಡಿಗಳಿಗೆ ತೆರಳಿ ಮದ್ಯ ಖರೀದಿಸುತ್ತಿದ್ದಾರೆ. ಈಗಾಗಲೇ ಕೆಲವು ಜನ ಅಪ್ಪಂದಿರು ಮದ್ಯ ಸೇವಿಸಿ ಸಾವಿಗೀಡಾಗಿದ್ದಾರೆ ಈಗ ಅವರ ಮಕ್ಕಳೂ ಮದ್ಯ ಸೇವನೆಯ ಹಾದಿ ಹಿಡಿದರೆ ಮಹಿಳೆಯರು ಏನು ಮಾಡಬೇಕು ಎಂದು ಕಣ್ಣೀರು ಹಾಕಿದರು.
ಸಂತೋಷಿಮಾತಾ ಎಂಬ ಮಹಿಳೆ ಮಾತನಾಡಿ ಮದ್ಯ ಸೇವನೆಯಿಂದ ತನ್ನ 40 ವರ್ಷದ ಪತಿ ಹಾಗೂ 35 ವರ್ಷದ ಮೈದುನ ಇಬ್ಬರು ಸಾವಿಗೀಡಾಗಿದ್ದಾರೆ. ನಾನು ಹಾಗೂ ಒರಗಿತ್ತಿ ಈಗ ವಿಧವೆಯಾಗಿದ್ದೇವೆ. ನಮ್ಮ ಸುಮಾರು 15 ವರ್ಷದ ಮಗ ಕೂಡ ಈಗ ಸುಲಭವಾಗಿ ಸಿಗುವ ಅಕ್ರಮ ಮದ್ಯ ಸೇವನೆ ಮಾಡುತ್ತಿರುವುದು ನಮಗೆ ಆತಂಕ ಉಂಟು ಮಾಡಿದೆ. ಮಕ್ಕಳೇ ನಮಗೆ ಬದುಕಿದ್ದಂತೆ. ಅವರೇ ಮದ್ಯ ಸೇವನೆಯಲ್ಲಿ ತೊಡಗಿದರೆ ಹೇಗೆ? ನಮ್ಮ ಗಂಡಂದಿರು ನಡುನೀರಲ್ಲಿ ಬಿಟ್ಟು ಹೋಗಿದ್ದಾರೆ. ಈಗ ಮಕ್ಕಳ ಪರಿಸ್ಥಿತಿ ಕಂಡು ಗಾಬರಿಯಾಗಿದ್ದೇವೆ. ಈ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲು ದೇವರಂತಿರುವ ಶಾಸಕರ ಬಳಿ ಬಂದಿದ್ದೇವೆ ಎಂದು ಕಣ್ಣೀರು ಹಾಕಿದರು.
ಮಾಯವ್ವ ಶಿವಣ್ಣವರ ಎಂಬ ಮಹಿಳೆ ಮಾತನಾಡಿ ಮದಗುಣಕಿ ಗ್ರಾಮದಲ್ಲಿ ಮಕ್ಕಳು ಮದ್ಯ ಸೇವಿಸುತ್ತಿದ್ದಾರೆ. ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪೊಲೀಸರು ಅವರಿಂದ ಲಂಚ ಪಡೆದು ಸುಮ್ಮನಾಗುತ್ತಿದ್ದಾರೆ. ನಮ್ಮೂರಲ್ಲಿ ಅಕ್ರಮ ಮದ್ಯ ಮಾರಾಟ ಮಾಡಬೇಡಿ ಎಂದು ತಿಳಿ ಹೇಳಿದರೂ ಮಾರಾಟಗಾರರು ಕ್ಯಾರೆ ಎನ್ನದೆ ಅವಾಚ್ಯ ಶಬ್ದಗಳಿಂದ ನಮ್ಮನ್ನು ಹಿಯಾಳಿಸುತ್ತಿದ್ದಾರೆ ಎಂದು ತಮ್ಮ ಅಳಲು ತೊಡಿಕೊಂಡಿದ್ದಾರೆ.
ಎಂ. ಬಿ. ಪಾಟೀಲ ಅವರು ಅಕ್ರಮ ಮದ್ಯ ಮಾರಾಟ ಕುರಿತು ಪೊಲೀಸ ಅಧಿಕಾರಿಗಳಿಗೂ ಕರೆ ಮಾಡಿ ಕೂಡಲೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುವ ಮೂಲಕ ಮಹಿಳೆಯರ ಅಹವಾಲುಗಳಿಗೆ ಸ್ಪಂದಿಸಿದರು.