Fishery Training: ಭೂತ್ನಾಳ ಬಳಿ ವೈಜ್ಞಾನಿಕ ಮೀನು ಕೃಷಿ ತರಬೇತಿ, ಮೀನು ಮರಿಗಳ ವಿತರಣೆ ಕಾರ್ಯಕ್ರಮ

ವಿಜಯಪುರ: ರಾಷ್ಟ್ರೀಯ ಮತ್ಸ್ಯ ಕೃಷಿಕರ ದಿನಾಚರಣೆ ಅಂಗವಾಗಿ ವಿಜಯಪುರ ನಗರದ ಹೊರ ವಲಯದಲ್ಲಿ ಭೂತ್ನಾಳ ಕೆರೆಯ ಬಳಿ ಇರುವ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರದಲ್ಲಿ ವೈಜ್ಞಾನಿಕ ಮೀನು ಕೃಷಿ ತರಬೇತಿ ಮತ್ತು ಮೀನು ಮರಿಗಳ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಇರ್ಫಾನ್ ಬಂಗಿ ಮಾತನಾಡಿ, ಮೀನು ಕೃಷಿ ಅತ್ಯಂತ ಲಾಭದಾಯಕವಾಗಿದೆ.  ಸ್ಥಳೀಯವಾಗಿ ದೊರೆಯುವ ನೀರಿನ ಸೌಲಭ್ಯಗಳನ್ನು ಬಳಸಿಕೊಂಡು ಇತ್ತೀಚೆಗೆ ಬಂದಿರುವ ನವೀನ ತಂತ್ರಜ್ಞಾನಗಳಾದ ಬಯಾಫ್ಲಾಕ್ ಮತ್ತು ಆರ್ಎಎಸ್ ಮೂಲಕ ಮೀನು ಕೃಷಿಯನ್ನು ರೈತ ಬಾಂಧವರು ಕೈಗೊಂಡು ಹೆಚ್ಚಿನ ಲಾಭವನ್ನು ಪಡೆಯಬಹುದು ಎಂದು ತಿಳಿಸಿದರು.

ವಿಜಯಪುರದ ಭೂತ್ನಾಳ ಕೆರೆ ಬಳಿ ಮತ್ಸ್ಯ ಕೃಷಿಕರ ದಿನಾಚರಣೆ ಅಂಗವಾಗಿ ತರಬೇತಿ ಕಾರ್ಯಕ್ರಮ ನಡೆಯಿತು

ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶರಣಗೌಡ ಬಿರಾದಾರ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಜಲಸಂಪನ್ಮೂಲಗಳಿದ್ದು, ಮೀನುಗಾರಿಕೆಗೆ ಹೇಳಿ ಮಾಡಿಸಿದಂತಿದೆ ಎಂದು ಹೇಳಿದರು.

ಮೀನುಗಾರಿಕೆ ಸಂಶೋಧನಾ ಮಾಹಿತಿ ಕೇಂದ್ರದ ಮುಖ್ಯಸ್ಥರಾದ ಡಾ.ವಿಜಯಕುಮಾರ್ ಎಸ್. ಮಾತನಾಡಿ, ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆಯ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ವಿಜಯಪುರದ ಮೀನುಮರಿ ಉತ್ಪಾದನೆ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಅಲ್ತಾಫ್ ಮನಗೂಳಿ, ಆಯುಷ್ ಮತ್ಸ್ಯ ಸೇವೆ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಹರಿಶ್ಚಂದ್ರ ಜಾದವ, ಮಹಾರಾಷ್ಟ್ರದ ಅವನ ಗ್ರೂಪ್ ಆಫ್ ಕಂಪನಿಯ ಸಮೀರ್ ಮನೆ ಉಪಸ್ಥಿತರಿದ್ದರು.

ಡಾ. ವಿಜಯ ಆತನೂರು ಕಾರ್ಯಕ್ರಮ ನಿರ್ವಹಿಸಿದರು.  ತರಬೇತಿಯಲ್ಲಿ ಸುಮಾರು 80ಕ್ಕೂ ಅಧಿಕ ರೈತರು ಭಾಗವಹಿಸಿದ್ದರು.

Leave a Reply

ಹೊಸ ಪೋಸ್ಟ್‌