ವಿಜಯಪುರ: ಪ್ರಭಾವಿಗಳು ಶಾಮೀಲಾಗಿರುವುದರಿಂದ ಪಿಎಸ್‌ಐ ನೇಮಕಾತಿ ಹಗರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರ ಆರೋಪ ಮಾಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವjರು, ಪಿಎಸ್‌ಐ ನೇಮಕಾತಿ ಹಗರಣ ಮುಚ್ಚಿಹಾಕಲು ಪ್ರಯತ್ನ ನಡೆಯುತ್ತಿದೆ. ಈ ಮುಂಚೆಯೇ ನಾನು ಈ ಬಗ್ಗೆ ಹೇಳಿದ್ದೇನೆ. ನ್ಯಾಯಾಧೀಶರು ಸ್ಚ್ರಾಂಗ್ ಇದ್ದಾರೆಂಬ ಕಾರಣಕ್ಕೆ ಇಷ್ಟೇಲ್ಲ ಬಹಿರಂಗವಾಗಿದೆ. ಈಗ ಬಂಧಿಸಲಾಗಿರುವ ಹಿರಿಯ ಪೊಲೀಸ್ ಅಧಿಕಾರಿ ಪಾಲ್ ಮಾತ್ರ ಈ ಹಗರಣದಲ್ಲಿ ಭಾಗಿಯಾಗಿಲ್ಲ. ಇದರಲ್ಲಿ ಬಹಳಷ್ಟು ಜನರ ಪಾಲು ಇದೆ. ಬಹಳ ದೊಡ್ಡವರು ಈ ಹಗರಣದಲ್ಲಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಹಲವಾರು ಅಭ್ಯರ್ಥಿಗಳು ತಲಾ ರೂ. 70 ರಿಂದ 80 ಲಕ್ಷ ಲಂಚ ನೀಡಿದ್ದಾರೆ. ಅವರೆಲ್ಲ ಪಾಪ ಮನೆಮಛ ಮಾರಿ ಹಣ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿಯೊಬ್ಬರ ಮಗ 150 ಅಭ್ಯರ್ಥಿಗಳನ್ನು ಪಾಸು ಮಾಡಿಸಿದ್ದಾನೆ ಎಂದು ಜನ ಹೇಳುತ್ತಿದ್ದಾರೆ. ಈ ಹಗರಣದಲ್ಲಿ ಬಹಳಷ್ಟು ಜನ ಶಾಮೀಲಾಗಿದ್ದಾರೆ. ಬಹಳಷ್ಟು ಜನ ಬಲೆಗೆ ಬೀಳಲಿದ್ದಾರೆ. ಈ ಬಗ್ಗೆ ನಮ್ಮಲ್ಲಿಯೂ ಮಾಹಿತಿ ಇದೆ. ಹೈಕೋರ್ಟ್ ಈ ಪ್ರಕರಣವನ್ನು ಚನ್ನಾಗಿ ನಿರ್ಹವಣೆ ಮಾಡುತ್ತಿದೆ. ಆ ನ್ಯಾಯಾಧೀಶರನ್ನೂ ವರ್ಗಾವಣೆ ಮಾಡಬೇಡಿ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಡಿಜಿಪಿ ಸೇರಿದಂತೆ ಇತರ ಪೊಲೀಸ್ ಅಧಿಕಾರಿಯನ್ನು ಟ್ರಾನ್ಸಫರ್ ಮಾಡಬೇಡಿ. ನೀವೇನಾದರೂ ಟ್ರಾನ್ಸಫರ್ ಮಾಡಿದರೆ ಹಣ ನೀಡಿದ ಎಲ್ಲ 500 ಜನ ಮನೆಗಳು ಹಾಳಾಗಲಿವೆ ಎಂದು ಅವರು ಎಚ್ಚರಿಕೆ ನೀಡಿದರು.
ಈ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಸತ್ಯ. ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಈ ಪ್ರಕರಣದ ತನಿಖೆ ಸರಿಯಾಗಿ ನಡೆಯಬೇಕು. ಒಳ್ಳೆಯ ಪೋಲೀಸ್ ಅಧಿಕಾರಿಗಳು ಸೇವೆಗೆ ಬರಬೇಕು. ಬಡವರು ರೂ. 70 ರಿಂದ ರೂ. 80 ಲಕ್ಷ ಹಣ ಎಲ್ಲಿಂದ ನೀಡಬೇಕು? ಹಣ ನೀಡಿ ಕೆಲಸ ಪಡೆದವ ಸೇವೆಗೆ ಬಂದು ಭ್ರಷ್ಟಾಚಾರ ಮಾಡುತ್ತಾನೆ. ಅಂಥ ಅಧಿಕಾರಿಯ ವಿರುದ್ಧ ಏನು ಮಾಡಲು ಸಾಧ್ಯ? ಸೇವೆಗೆ ಬಂದ ತಕ್ಷಣ ಆತ ರಸ್ತೆಯ ಮೇಲೆ ನಿಂತು ಕಲೆಕ್ಷನ್ ಮಾಡುತ್ತಾನೆ. ಈ ಹಗರಣದಲ್ಲಿ ಎಲ್ಲರೂ ಭಾಗಿಯಾಗಿದ್ದಾರೆ. ಅನ್ಯಾಯ ಆಗಿ ಹೋಗಿದೆ. ವರ್ಗಾವಣೆ ಮಾಡಬೇಡಿ ಎಂದು ಯತ್ನಾಳ ಹೇಳಿದರು.
ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಮಗ ಶಾಮೀಲಾಗಿದ್ದಾರೆ ಎಂದು ವಿಧಾನ ಪರಿಷತ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಮುಖ್ಯಮಂತ್ರಿಯ ಮಗ ಎಂದು ಹೇಳಿದರೆ ಸಿದ್ಧರಾಮಯ್ಯ ಅವರ ಮಗನೂ ಬರುತ್ತಾನೆ. ದೇವೇಗೌಡರ ಮಗನೂ ಬರುತ್ತಾನೆ. ಈ ಹಿಂದೆ ಕುಮಾರಸ್ವಾಮಿ ಕೂಡ ಮಾಜಿ ಸಿಎಂ ಮಗ ಈ ಹಗರಣದಲ್ಲಿದ್ದಾನೆ ಎಂದು ಹೇಳಿದ್ದರು. ಹಾಗಾದರೆ ಆತ ಕುಮಾರ್ಸವಾಮಿ ಅವರ ಮಗನಾ? ಅಥವಾ ದೇವೇಗೌಡರ ಮಗ ಮಾಜಿ ಸಿಎಂ ಅವರಿದ್ದಾರಾ? ಯಾರು ಎಂಬುದನ್ನು ಬಿಚ್ಚಿ ಹೇಳಬೇಕು. ಎಲ್ಲರೂ ಇದರಲ್ಲಿದ್ದಾರೆ ಎಂದು ಆರೋಪಿಸಿದರು.
ಸಿದ್ಧರಾಮೋತ್ಸವ ವಿಚಾರ
ಮಾಜಿ ಮುಖ್ಯಮಂತ್ರಿ ಮತ್ತು ವಿಧಾನ ಪರಿಷತ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ಅವರ ಜನ್ಮದಿನ ಸಿದ್ಧರಾಮೋತ್ಸವ ಕಾರ್ಯಕ್ರಮದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಲ್ಲರಿಗೂ 75 ವರ್ಷಗಳಾದ ನಂತರ ಜನ ನಮ್ಮನ್ನು ಮರೆಯಬಾರದು ಎಂದು ಜನ್ಮದಿನ ಆಚರಿಸಿಕೊಳ್ಳುತ್ತಾರೆ. ಇದಕ್ಕೆ ಯಾವ ರಾಜಕಾರಣಿಯೂ ಹೊರತಲ್ಲ. ಈಗ ಸಿದ್ಧರಾಮಯ್ಯ ಅವರೂ ಮಾಡಿಕೊಳ್ಳುತ್ತಿದ್ದಾರೆ. 75 ವರ್ಷಗಳಿಗೆ ಬಿಜೆಪಿಯಲ್ಲಿ ನಿವೃತ್ತಿಯಿದೆ. ಒಂದು ದಿನ ಹೆಚ್ಚಾದರೂ ನಿವೃತ್ತಿ ಮಾಡಿಬಿಡುತ್ತಾರೆ. ನಮ್ಮವರೂ ಉತ್ಸವ ಮಾಡಿಕೊಂಡಿದ್ದಾರೆ. ಇವರೂ ಮಾಡಿಕೊಳ್ಳುತ್ತಾರೆ. ಇದರಿಂದ ಏನೂ ಆಗುವುದಿಲ್ಲ ಎಂದು ಹೇಳಿದರು.
ಸಿದ್ಧರಾಮಯ್ಯ ಜಾತ್ಯತೀತ ಎಂಬುದನ್ನು ತೋರಿಸಲಿ
ನಾನು ಸಿದ್ಧರಾಮಯ್ಯನವರಿಗೆ ಹೇಳುವುದಿಷ್ಟೇ. ಕುಂಕುಮ ಹಚ್ಚಿಕೊಳ್ಳಿರಿ. ಪೇಟಾ ಸುತ್ತಿಕೊಳ್ಳಿರಿ. ನೀವು ಹಿಂದೂ ಧರ್ಮದಲ್ಲಿ ಹುಟ್ಟಿದ್ದೀರಿ ಎಂಬುದರ ಅರಿವಿರಲಿ. ಅಲ್ಲಿ ಹೋಗಿ ನಮಾಜ್ ಮಾಡಿದ್ದೀರಿ. ನಿಮ್ಮ ಜನ್ಮದಿನದಂದು ಡೊಳ್ಳು ಬಾರಿಸುತ್ತ ಕುಣಿಯಿರಿ. ಭಂಡಾರ ಹಚ್ಚಿಕೊಳ್ಳಿರಿ. ಅಂದಾಗ ನೀವು ಜಾತ್ಯತೀತರಾಗುತ್ತೀರಿ. ಅದನ್ನು ಬಿಟ್ಟು ಹಿಂದೂ ಸಂಸ್ಕೃತಿಗಳನ್ನು ಅಪಮಾನ ಮಾಡುತ್ತ ಟೋಪಿ ಹಾಕಿಕೊಂಡು ಅಡ್ಡಾಡುವುದು ಜಾತ್ಯತೀತೆಯ ಲಕ್ಷಣವಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಟಿಯನ್ ರನ್ನು ಒಂದೇ ದೃಷ್ಠಿಯಿಂದ ನೋಡುವುದು ಜಾತ್ಯತೀತತೆಯಾಗಿದೆ. ಆದರೆ, ನೀವು ಕುಂಕುಮ ಹಚ್ಚಲು ಬಂದರೆ ನೂಕುತ್ತೀರಿ. ಪೇಟಾ ಸುತ್ತಲು ಬಂದರೆ ನೂಕುತ್ತೀರಿ. ಹಾಗೆ ಮಾಡಿದರೆ ಅದು ಸಿದ್ಧರಾಮಯ್ಯ ಉತ್ಸವ ಆಗುವುದಿಲ್ಲ. ಉರುಸು ಆಗುತ್ತದೆ ಎಂದು ಯತ್ನಾಳ ವ್ಯಂಗ್ಯವಾಡಿದರು.
ಅಗ್ನಿಪಥ ಯೋಜನೆಗೆ ಬೆಂಬಲ
ಈ ದೇಶದ ಅನ್ನ ತಿಂದು ಹಿಂದೂಗಳ ಮೇಲೆ ಧಾಳಿ ಮಾಡುವವರನ್ನು ಹದ್ದುಬಸ್ತಿನಲ್ಲಿ ಇಡುವ ಕೆಲಸ ಆಗಬೇಕಾಗಿದೆ. ಈಗ ಕೇಂದ್ರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆ ಮುಂಬರುವ ದಿನಗಳಲ್ಲಿ ನಮ್ಮ ದೇಶ ರಕ್ಷಣ, ನಮ್ಮ ಗ್ರಾಮ ರಕ್ಷಣೆ, ನಮ್ಮ ನಗರ ರಕ್ಷಣೆಗಾಗಿ ಜಾರಿಗೆ ತಂದಿರುವ ಯೋಜನೆಯಾಗಿದೆ. ನಾಲ್ಕು ವರ್ಷ ಈ ಯೋಜನೆಯಡಿ ಒಳ್ಳೆಯ ಕೆಲಸ ಮಾಡಿದರೆ ಸೇನೆಯಲ್ಲಿ ಮುಂದುವರೆಯುತ್ತಾರೆ. ನಾಲ್ಕು ವರ್ಷದ ಬಳಿಕ ಅವರಿಗೆ ಭದ್ರತೆಗಾಗಿ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಉದ್ಯೋಗ ಒದಗಿಸಲಿದ್ದೇವೆ. ಈಗ ದೇಶ ಉಳಿಸಲು ಅಗ್ನಿಪಥ ಬೇಕಾಗಿದೆ. ದೇಶದ್ರೋಹಿಗಳಿಗೆ ಬುದ್ದಿ ಕಲಿಸಬೇಕಾಗಿದೆ. ದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಆದಷ್ಟು ಬೇಗ ಶೀಘ್ರ ಕ್ರಮ ಕೈಗೊಳ್ಳುತ್ತೇವೆ ಎಂದು ಮೆತ್ತಗೆ ಮಾತನಾಡುವುದನ್ನು ಬಿಡಬೇಕು ಎಂದು ಯತ್ನಾಳ ತಮ್ಮದೇ ಸರಕಾರದ ಗೃಹ ಸಚಿವರ ವಿರುದ್ಧ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ವಿಜಯಪುರ ನಗರಸಭೆ ಮಾಜಿ ಅಧ್ಯಕ್ಷ ಪರಶುರಾಮ ರಜಪೂತ, ಬಿಜೆಪಿ ಮುಖಂಡ ಚಂದ್ರು ಚೌಧರಿ ಮುಂತಾದವರು ಉಪಸ್ಥಿತರಿದ್ದರು.