ವಿಜಯಪುರ: ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣ ಕುರಿತಂತೆ ಚರ್ಚಿಸಲು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಜಿಲ್ಲೆಯ ನಾನಾ ತಹಸೀಲ್ದಾರಗಳ ಜೊತೆ ವಿಡಿಯೋ ಸಂವಾದ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಸಭಾಂಗಣದಲ್ಲಿ ನಡೆದ ವಿಡಿಯೋ ಸಂವಾದ ಸಭೆಯಲ್ಲಿ ಮಳೆಯ ವಿವರ, ಭೀಮಾ ನದಿ ಪಾತ್ರದ ಸೊನ್ನ ಮತ್ತು ಉಜನಿ ಜಲಾಶಯಗಳ ಮತ್ತು ಕೃಷ್ಣಾ ನದಿ ಪಾತ್ರದ ಹಿಪ್ಪರಗಿ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ನೀರಿನ ಒಳ ಮತ್ತು ಹೊರ ಹರಿವಿನ ಕುರಿತು ಅವರು ಮಾಹಿತಿ ಪಡೆದರು.
ಅಲ್ಲದೇ, ಮಹಾರಾಷ್ಟ್ರ ರಾಜ್ಯದಲ್ಲಿ ಕೃಷ್ಣಾ ನದಿ ಪಾತ್ರದ ಜಲಾಶಯಗಳ ಹರಿವಿನ ವಿವರ, ಜಿಲ್ಲೆಯಲ್ಲಿ ಹರಿಯುತ್ತಿರುವ ನದಿಗಳು, ಭೀಮಾ ನದಿಗೆ ನೀರು ಹರಿಬಿಟ್ಟಾಗ ಜಲಾವೃತವಾಗುವ ಗ್ರಾಮಗಳ ವಿವರ, ಆಲಮಟ್ಟಿ ಜಲಾಶಯದಿಂದ ನೀರು ಹರಿಯಬಿಟ್ಟಾಗ ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಜಲಾವೃತವಾಗುವ ಗ್ರಾಮಗಳ ವಿವರ ಹಾಗೂ ಭೀಮಾ ನದಿಯಿಂದ ಜಲಾವೃತವಾಗಬಹುದಾದ ಚಡಚಣ ಹಾಗೂ ಇಂಡಿ ಮತ್ತು ಸಿಂದಗಿ ತಾಲೂಕಿನ ಗ್ರಾಮಗಳ ವಿವರದ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದರು.
ತೀವ್ರ ಮಳೆ ಹಿನ್ನೆಲೆಯಲ್ಲಿ ಚಡಚಣ, ಇಂಡಿ, ಮುದ್ದೇಬಿಹಾಳ, ಬಬಲೇಶ್ವರ ಮತ್ತು ನಿಡಗುಂದಿ ತಾಲೂಕುಗಳಲ್ಲಿ ಕಾಳಜಿ ಕೇಂದ್ರ ಪ್ರಾರಂಭಿಸಲು ಗುರುತಿಸಲಾದ ಸ್ಥಳಗಳ ಬಗ್ಗೆ, ರಕ್ಷಣಾ ಸಾಮಗ್ರಿಗಳ ಸಂಗ್ರಹದ ಬಗ್ಗೆ, ಮಾನವ ಮತ್ತು ಜಾನುವಾರು ಜೀವಹಾನಿ ಮತ್ತು ಬೆಳೆ ಹಾನಿಗೆ ಪರಿಹಾರ ಧನ ವಿತರಿಸಿದ ಬಗ್ಗೆ ಮತ್ತು ಮನೆಗಳಿಗೆ ಮತ್ತು ಬೆಳೆ ಹಾನಿಗೆಗೆ ಪರಿಹಾರ ಧನ ವಿತರಿಸಿದ ಬಗ್ಗೆ ಡಾ. ವಿಜಯಮಹಾಂತೇಶ ಬಿ. ದಾನಮ್ಮವರು ಸಮಗ್ರ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಅವರು, ಜಿಲ್ಲೆಯ ಒಟ್ಟು 12 ತಾಲೂಕುಗಳ ವ್ಯಾಪ್ತಿಯಲ್ಲಿ ಭೀಮಾ, ದೋಣಿ, ಕೃಷ್ಣಾ ನದಿಗಳು ಹರಿಯುತ್ತವೆ. ಮಹಾರಾಷ್ಟç ರಾಜ್ಯದಲ್ಲಿ ಸಹ ಹೆಚ್ಚಿನ ಮಳೆಯಾಗುತ್ತಿದ್ದು ಉಜನಿ ಜಲಾಶಯದಿಂದ ಭೀಮಾ ನದಿಗೆ 2 ಲಕ್ಷ ಕ್ಯೂಸೆಕ್‌ಕ್ಕೂ ಅಧೀಕ ಪ್ರಮಾಣದಲ್ಲಿ ನೀರು ಹಿರಿಬಿಟ್ಟಾಗ ಚಡಚಣ ತಾಲೂಕಿನ 19, ಇಂಡಿ ತಾಲೂಕಿನ 11, ಸಿಂಧಗಿ ತಾಲೂಕಿನ 12 ಗ್ರಾಮಗಳು ಜಲಾವೃತವಾಗಲಿವೆ. ಅದೇ ರೀತಿ ಆಲಮಟ್ಟಿ ಜಲಾಶಯದಿಂದ 5 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಾಗ ನಾರಾಯಣಪುರ ಜಲಾಶಯದ ಹಿನ್ನಿರಿನಿಂದ ಮುದ್ಚೇಬಿಹಾಳ ತಾಲೂಕಿನ 9 ಮತ್ತು ನಿಡಗುಂದಿ ತಾಲೂಕಿನ ಒಂದು ಮತ್ತು ಆಲಮಟ್ಟಿ ಜಲಾಯಶದಿಂದ ನಾಲ್ಕ ಗ್ರಾಮಗಳು ಜಲಾವೃತವಾಗಲಿವೆ. ಹೀಗಾಗಿ ಪ್ರವಾಹಪೀಡಿತವಾಗಬಹುದಾದ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಡಂಗೂರ ಸಾರಿಸಿ ಮಾಹಿತಿ ನೀಡಲು ಸಂಬAಧಿಸಿದ ತಹಸೀಲ್ದಾರಗಳಿಗೆ ನಿರ್ದೇಶನ ನೀಡಿದರು.
ಸಮಿತಿಗಳನ್ನು ಜಾಗೃತಗೊಳಿಸಿ
ಆಯಾ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ವಿಪತ್ತು ನಿರ್ವಹಣೆ ಸಮಿತಿಗಳನ್ನು ರಚಿಸಿ ಸಮಿತಿಯ ಕಾರ್ಯವೈಖರಿಯ ಬಗ್ಗೆ ತಿಳಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಅತೀವೃಷ್ಟಿ ಬಗ್ಗೆ ಯಾವುದೇ ತೊಂದರೆಯಾಗುವ ಸಂಭವವಿದ್ದಲ್ಲಿ ಆ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆ ಕೊಡುತ್ತಿರಬೇಕು. ಎತ್ತರದ ಸ್ಥಳದಲ್ಲಿರುವ ಸಮುದಾಯ ಭವನ, ದೊಡ್ಡ ಕಟ್ಟಡಗಳನ್ನು ಗುರುತಿಸಬೇಕು. ಸಂತ್ರಸ್ಥರಿಗೆ ಗಂಜಿ ಕೇಂದ್ರ ತೆರೆಯಲು ಮತ್ತು ಅಡುಗೆ ಸಾಮಾನುಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಬಿಸಿ ಊಟದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಡಿಸಿ ಸೂಚನೆ ನೀಡಿದರು.
ನೋಡಲ್ ಅಧಿಕಾರಿಗಳಿಗೆ ಸೂಚನೆ
ಪ್ರವಾಹ ಪರಿಸ್ಥಿತಿ ನಿಯಂತ್ರಣ ಕುರಿತು ನೇಮಿಸಲಾದ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ಮತ್ತು ಆಲಮಟ್ಟಿ ಜಲಾಶಯದಲ್ಲಿ ಪ್ರವಾಹ ನಿಯಂತ್ರಣ ಕುರಿತು ನೇಮಿಸಿದ ಅಧಿಕಾರಿಗಳು ಪ್ರವಾಹ ಪರಿಸ್ಥಿತಿ ನಿಯಂತ್ರಣದ ಬಗ್ಗೆ ಗಮನ ಹರಿಸಬೇಕು. ಪ್ರತಿ ಹಳ್ಳಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಮತ್ತು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿಗಳು ಸಹ ಕೇಂದ್ರ ಸ್ಥಾನದಲ್ಲಿದ್ದು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ವರದಿ ಸಲ್ಲಿಸಲು ಸೂಚನೆ
ಪ್ರತಿದಿನದ ಮಳೆಯ ವರದಿ, ಪ್ರಕೃತಿ ವಿಕೋಪದಿಂದ ಉಂಟಾಗಿರುವ ಮಾನವ-ಜಾನುವಾರು ಜೀವ ಹಾನಿ, ಕೃಷಿ ಮತ್ತು ತೋಟಗಾರಿಕಾ ಬೆಳೆ ಹಾನಿ ಮತ್ತು ಬಿದ್ದಿರುವ ಮನೆಗಳ ವರದಿಯನ್ನು ಪ್ರತಿ ದಿನ ತಪ್ಪದೇ ಬೆಳಗ್ಗೆ 11 ಗಂಟೆಯೊಳಗಾಗಿ ಸಲ್ಲಿಸಬೇಕು. ಮಾನವ ಜಾನುವಾರು ಜೀವಹಾನಿ ಮನೆ ಬೆಳೆ ಹಾನಿಯ ಪ್ರದೇಶಕ್ಕೆ ತಹಶೀಲ್ದಾರರು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಕಾರ್ಯ ಕೈಗೊಳ್ಳಬೇಕು. ಮಾನವ ಜಾನುವಾರು ಜೀವಹಾನಿಗೆ ಘಟನೆ ಸಂಭವಿಸಿದ 24 ಗಂಟೆಗಳ ಒಳಗಾಗಿ ಮಾರ್ಗಸೂಚಿಯನುಸಾರ ಪರಿಹಾರ ಧನವನ್ನು ನೀಡಲು ಕ್ರಮ ವಹಿಸಬೇಕು ಎಂದು ಅವರು ಸೂಚನೆ ನೀಡಿದರು.
ಅಧಿಕಾರಿಗಳಿಗೆ ಸಲಹೆ
ರಕ್ಷಣಾ ಸಾಮಗ್ರಿಗಳನ್ನು ಸುಸಜ್ಜಿತವಾಗಿಟ್ಟುಕೊಳ್ಳಬೇಕು. ಜನರ ಸಂರಕ್ಷಣೆಗೆ ಅವಶ್ಯಕತೆ ಬರುತ್ತದೆ ಎಂಬುದು ಗೊತ್ತಾದಲ್ಲಿ ಪರಿಶೀಲಿಸಿ ಬೋಟುಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಸನ್ನದ್ಧ ಸ್ಥಿತಿಯಲ್ಲಿರಬೇಕು. ಕಂಟ್ರೋಲ್ ರೂಂ ಸ್ಥಾಪನೆ ಮಾಡಿ 24 ಗಂಟೆಗಳ ಕಾಲ ಸಿಬ್ಬಂದಿ ನೇಮಿಸಬೇಕು. ಈಜುಗಾರ ಮುಳುಗು ತಜ್ಞರನ್ನು ಗುರುತಿಸಿಟ್ಟುಕೊಳ್ಳಬೇಕು. ಯುವ ಜನ ಸೇವಾ ಇಲಾಖೆ, ಯುವ ಜನ ಸಂಘ-ಸAಸ್ಥೆಗಳ ಸಂಪರ್ಕದಲ್ಲಿದ್ದು ಅವಶ್ಯಕತೆ ಬಿದ್ದರೆ ಅವರ ಸೇವೆ ಪಡೆಯಬೇಕು ಎಂದು ಅವರು ಅಧಿಕಾರಿಗಳಿಗೆ ಸಲಹೆ ಮಾಡಿದರು.
ಚರಂಡಿ ಶುಚಿಗೊಳಿಸಿ
ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತಿಯಿAದ ಚರಂಡಿ ಸ್ವಚ್ಛತೆ ನಡೆಸಿ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು. ಮಳೆಯಿಂದಾಗಿ ರಸ್ತೆಯ ಮೇಲೆ ಬೀಳುವ ಗಿಡ-ಮರಗಳನ್ನು ತಕ್ಷಣ ತೆರವಿಗೆ ಏರ್ಪಾಡು ಮಾಡಿಕೊಂಡಿರಬೇಕು. ಪ್ರವಾಹ ಬಂದ ಸಂದರ್ಭದಲ್ಲಿ ಸಾರಿಗೆ ಸಂಚಾರವನ್ನು ಬೇರೆ ಸುರಕ್ಷಿತ ಮಾರ್ಗದಿಂದ ಮಾಡುವ ಕುರಿತ ಏರ್ಪಾಡು ಮಾಡಲು, ವಿದ್ಯುತ್ ತಂತಿಗಳು, ಟ್ರಾನ್ಸಫಾರ್ಮರಗಳು ಬಿದ್ದು ವಿದ್ಯುತ್ ಹರಿದು ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸುವ ಕುರಿತು ಅವಶ್ಯಕ ಕ್ರಮಗಳನ್ನು ತುರ್ತಾಗಿ ಜರುಗಿಸಬೇಕು ಎಂದು ಸಂಬAಧಿಸಿದ ಅಧಿಕಾರಿಗಳಿಗೆ ಡಾ. ವಿಜಯಮಹಾಂತೇಶ ಬಿ ದಾನಮ್ಮನವರ ಸೂಚನೆ ನೀಡಿದರು.
ವೈದ್ಯಾಧಿಕಾರಿಗಳಿಗೆ ಸೂಚನೆ
ಜನ ಸಾಮಾನ್ಯರ ಆರೋಗ್ಯಕ್ಕೆ ಬೇಕಾಗುವ ಔಷಧಿಗಳ ದಾಸ್ತಾನು ಕುರಿತು ಸರಕಾರಿ ದವಾಖಾನೆಗಳಲ್ಲಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಸಂಗ್ರಹವಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ದನಕರುಗಳಿಗೆ ಕೂಡಾ ಮೇವು ಔಷಧಿಗಳ ವ್ಯವಸ್ಥೆ ಇದೆಯೋ ಇಲ್ಲವೋ ಎಂಬುದನ್ನು ನೋಡಿಕೊಳ್ಳಲು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಪಶು ವೈದ್ಯಾಧಿಕಾರಿಗಳು ಗಮನ ಹರಿಸಬೇಕು ಎಂದು ಅವರು ಸೂಚಿಸಿದರು.
ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ
ಆಲಮಟ್ಟಿ, ನಾರಾಯಣಮರ ಮತ್ತು ಉಜನಿ ಜಲಾಶಯಗಳ ಒಳ-ಹೊರ ಹರಿವು ಮೇಲೆ ನಿಗಾ ವಹಿಸಬೇಕು. ಮಹಾರಾಷ್ಟ್ರ ರಾಜ್ಯದಲ್ಲಿನ ಎಲ್ಲ ಜಲಾಶಯಗಳಿಗೆ ನೀರಾವರಿ ಇಲಾಖೆಯ ಸಿಬ್ಬಂದಿ ನೇಮಿಸಬೇಕು. ಎಲ್ಲ ಜಲಾಶಯಗಳ ಗರಿಷ್ಠ ಮಟ್ಟ ಹಾಗೂ ದಿನಂಪ್ರತಿ ತಲುಪುವ ಜಲಾಶಯಗಳ ನೀರಿನ ಮಟ್ಟದ ಕುರಿತು ವರದಿಗಳನ್ನು ಪ್ರತಿ ದಿನ ಜಿಲ್ಲಾಧಿಕಾರಿಗಳಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮತ್ತು ಇನ್ನಿತರ ಸಂಬAಧಪಟ್ಟ ಎಲ್ಲ ಇಲಾಖೆಗಳಿಗೆ ಕಳುಹಿಸಲು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಿ ಕ್ರಮ ವಹಿಸಬೇಕು ಎಂದು ಅವರು ಹೇಳಿದರು.
ಜಂಟಿ ಸಮೀಕ್ಷೆ ನಡೆಸಿ
ಬೆಳೆ ಹಾನಿಗೆ ಜಂಟಿ ಸಮೀಕ್ಷೆ ಕಾರ್ಯ ನಡೆಯಬೇಕು. ಪ್ರವಾಹದಿಂದ ಆಗುವ ಕೃಷಿ ತೋಟಗಾರಿಕೆ ಬೆಳೆ ಹಾನಿಯ ಕುರಿತು ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ತಂಡವನ್ನು ರಚಿಸಿ ಸಮೀಕ್ಷೆ ಕಾರ್ಯ ಕೈಗೊಂಡು ಎಸ್.ಡಿ.ಆರ್.ಎಫ್ ಅಥವಾ ಎನ್.ಡಿ.ಆರ್.ಎಫ್ ಮಾರ್ಗಸೂಚಿಯನುಸಾರ ಆಗಿರುವ ಹಾನಿಯ ಕುರಿತು ಮಾಹಿತಿ ಸಲ್ಲಿಸಬೇಕು ಎಂದು ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸೂಚನೆ ನೀಡಿದರು.
75 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಳ ಆಗಿರುವುದರಿಂದ 75 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಕೋಲಾರ, ನಿಡಗುಂದಿ ಮುದ್ದೇಬಿಹಾಳ ಪ್ರವಾಹಪೀಡಿತ ಗ್ರಾಮಗಳಲ್ಲಿ ಈಗಾಗಲೇ ಡಂಗೂರ ಸಾರಿ ಮುನ್ನೆಚ್ಚರಿಕೆ ವಹಿಸಲು ತಿಳಿಸಲಾಗಿದೆ ಎಂದು ಸಂಬAಧಿಸಿದ ತಹಸೀಲ್ದಾರರು ಮಾಹಿತಿ ನೀಡಿದರು.
ಈ ವಿಡಿಯೋ ಸಂವಾದದಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಸಹಾಯಕ ಆಯುಕ್ತ ಬಲರಾಮ ಲಮಾಣಿ, ರಾಮಚಂದ್ರ ಗಡಾದಿ, ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ರಾಕೇಶ ಜೈನಾಪುರೆ, ಆಯಾ ತಾಲೂಕಿನ ತಹಸೀಲ್ದಾರರು, ಜಿಲ್ಲಾಮಟ್ಟದ ಪ್ರವಾಹ ನೋಡಲ್ ಅಧಿಕಾರಿಗಳು, ನಾನಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.