ವಿಜಯಪುರ: ಬಬಲೇಶ್ವರ ಮತಕ್ಷೇತ್ರದ ಶಿರಬೂರ, ಬಬಲಾದಿ, ಕೊಟಬಾಗಿ, ಹಂಚಿನಾಳ, ಮಂಗಳೂರು, ಮಮದಾಪುರ ಗ್ರಾಮಗಳಿಗೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ ಬಸ್ ಸೌಲಭ್ಯ ಒದಗಿಸಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಶಾಸಕ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ತಮ್ಮ ಗ್ರಾಮಗಳಿಗೆ ಸೂಕ್ತ ಸಮಯಕ್ಕೆ ಬಸ್ ಸೌಲಭ್ಯ ಒದಗಿಸುವಂತೆ ಮತ್ತು ಕೆಲವು ಬಸ್ಸುಗಳ ಮಾರ್ಗ ಬದಲಾವಣೆ ಮಾಡುವಂತೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ತಮಗೆ ಮನವಿ ಮಾಡಿದ್ದರು. ಅದರಂತೆ ಜೂ. 30 ರಂದು ಕೆ ಕೆ ಆರ್ ಟಿ ಸಿ ಡಿ.ಟಿ.ಓ ಅವರಿಗೆ ದೂರವಾಣಿಯಲ್ಲಿ ಮಾತನಾಡಿದ್ದೆ. ಅಲ್ಲದೇ, ಜು. 6 ರಂದು ಕೆ ಕೆ ಆರ್ ಟಿ ಸಿ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದಿದ್ದೆ ಎಂದು ಅವರು ತಿಳಿಸಿದ್ದಾರೆ.
ವಿಜಯಪುರ ಡಿಪೋ ಸಂಖ್ಯೆ-1 ರಿಂದ ಪ್ರತಿದಿನ ಬೆ. 9ಕ್ಕೆ ಕೊಡಬಾಗಿ ಗ್ರಾಮಕ್ಕೆ ಸಂಪರ್ಕಿಸುವ ಬಸ್ ಸಂಚಾರವನ್ನು ಮಂಗಳೂರ ವ್ಹಾಯಾ ಹಂಚನಾಳ ಪಿ.ಎಂ ಮಾರ್ಗವಾಗಿ ಸಂಚರಿಸುವ ವ್ಯವಸ್ಥೆ ಮಾಡಬೇಕು. ಬಬಲೇಶ್ವರದಿಂದ ಹೊಸದಾಗಿ ಬೆ. 7.30ಕ್ಕೆ ಮಮದಾಪೂರ, ಜೈನಾಪೂರ ವರೆಗೆ ಹೊಸ ಬಸ್ ಸಂಚಾರ ವ್ಯವಸ್ಥೆ ಮಾಡಬೇಕು. ಈ ಬಸ್ಸು ಖಿಲಾರಹಟ್ಟಿ ಮಾರ್ಗವಾಗಿ ಮಮದಾಪೂರಕ್ಕೆ ಸಂಚರಿಸಬೇಕು. ಇದರಿಂದ ಕಾಲೇಜು ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಬಬಲೇಶ್ವರ-ಮಮದಾಪೂರ ಬಸ್ ಸೌಲಭ್ಯವನ್ನು ಮದಗುಣಕಿ ಮಾರ್ಗವಾಗಿ ಮೂರು ಬಾರಿ(ಟ್ರಿಪ್) ಸಂಚರಿಸುವ ವ್ಯವಸ್ಥೆ ಮಾಡಬೇಕು. ವಿಜಯಪುರ- ದೇವರಗೆಣ್ಣೂರ ವಸ್ತಿ ಬಸ್‌ನ್ನು ಕಂಬಾಗಿ ಮಾರ್ಗ ಬದಲಿಸಿ ಕೊಡಬಾಗಿ ಲಿಂಗದ ಮಾರ್ಗವಾಗಿ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ಮಮದಾಪೂರ ಗ್ರಾಮಕ್ಕೆ ಬೆ. 9.30 ಗಂ, ಮ. 2.30ಗಂ. ಸಂ. 4.30 ಗಂ. ಬಸ್ ಸೌಲಭ್ಯ ಕಲ್ಪಿಸಬೇಕು. ವಿಜಯಪುರ-ಗಲಗಲಿ ಬಸ್ಸನ್ನು ಸುತಗುಂಡಿ ಮಾರ್ಗವಾಗಿ ಕೃಷ್ಣಾ ನಗರ ಪ್ರೌಢಶಾಲೆಯ ವರೆಗೆ ಬರಲು ವ್ಯವಸ್ಥೆ ಮಾಡಬೇಕು. ಅರ್ಜುಣಗಿಯಿಂದ ಕಾತ್ರಾಳ ಮಾರ್ಗವಾಗಿ ಮತ್ತು ವ್ಯಾಯಾ ನಂದ್ಯಾಳ ಕಂಬಾಗಿ ಗ್ರಾಮದ ಮೂಲಕ ಬಬಲೇಶ್ವರಕ್ಕೆ ತಲುಪುವಂತೆ ಹೊಸ ಬಸ್ ವ್ಯವಸ್ಥೆ ಮಾಡಬೇಕು. ಈ ಕುರಿತು ಮೂರ್ನಾಲ್ಕು ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದೆ ಎಂದು ಅವರು ಹೇಳಿದ್ದಾರೆ.
ತಮ್ಮ ಪತ್ರಕ್ಕೆ ಕೆ ಕೆ ಆರ್ ಟಿ ಸಿ ಅಧಿಕಾರಿಗಳು ಈಗ ಸ್ಪಂದಿಸಿದ್ದು, ತಾವು ಸೂಚಿಸಿದ ಮಾರ್ಗದಲ್ಲಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದು ಎಂ. ಬಿ. ಪಾಟೀಲ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.