ವಿಜಯಪುರ: ಪಶು ಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ ಅವರು ಜು. 14 ರಂದು ಗುರುವಾರ ನಡೆಯುವ ಪಾಲಿಕ್ಲಿನಿಕ್ ನೂತನ ಕಟ್ಟಡದ ಉದ್ಘಾಟನೆ ಹಾಗೂ ಜಿಲ್ಲೆಗೊಂದು ಸರಕಾರಿ ಗೋಶಾಲೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೋಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಕಾರ್ಯಕ್ರಮದ ಸಿದ್ಧತೆಯನ್ನು ಪರಿಶೀಲಿಸಿದರು.
ವಿಜಯಪುರ ತಾಲೂಕಿನ ಐನಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬುರಣಾಪೂರ ಗ್ರಾಮದ ಸರಕಾರಿ ಗೋಶಾಲೆಗೆ ಭೇಟಿ ನೀಡಿದ ಅವರು, ಕಾರ್ಯಕ್ರಮದ ಬಗ್ಗೆ ಸಮಗ್ರ ಮಾಹಿತಿ ಪಡೆದರು. ಗೋ ಶಾಲೆಯ ಕಾಮಗಾರಿಯ ವಿಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಶಿಂಧೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಜಿಲ್ಲಾ ಪ್ರಾಣಿ ದಯಾ ಸಂಘದ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಪ್ರಗತಿಯಲ್ಲಿರುವ ಗೋಶಾಲೆ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಶುಪಾಲನೆ ಇಲಾಖೆಯ ಉಪನಿರ್ದೇಶಕ ಡಾ. ಪ್ರಾಣೇಶ ಜಹಾಗಿರದಾರ, ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ. ಹೊಳೆಪ್ಪಗೋಳ, ಪಶುಪಾಲನೆ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ಎಂ. ಸಿ. ಅರಕೇರಿ, ಸರಕಾರಿ ಗೋಶಾಲೆಯ ಪ್ರಭಾರ ಅಧಿಕಾರಿ ಡಾ. ಆನಂದ ದೇವರನಾವದಗಿ, ಸಹಾಯಕ ನಿರ್ದೇಶಕ ಕಾಶಿಮಸಾಬ ಮಸಳಿ, ಐನಾಪೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೋಭಕ್ಕ ಶೀಳಿನ ಮತ್ತೀತರರು ಉಪಸ್ಥಿತರಿದ್ದರು.