ಬೆಂಗಳೂರು: ಬೆಳಿಗ್ಗೆ ಮೈಸೂರಿನಲ್ಲಷ್ಟೇ ನಿಗಮ, ಮಂಡಳಿ, ಪ್ರಾಧಿಕಾರಿಗಳ ಅಧ್ಯಕ್ಷ, ಉಪಾಧ್ಯಕ್ಷರ ನಾಮನಿರ್ದೇಶನ ರದ್ದು ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಾಹ್ನದ ವೇಳೆಗೆ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ.
ಈ ಕುರಿತು ಸರಕಾರ ಆದೇಶ ಹೊರಡಿಸಿದ್ದು, ಮುಖ್ಯಮಂತ್ರಿಗಳ ಆದೇಶಾನುಸಾರ ರಾಜ್ಯಮಟ್ಟದ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನಾಮನಿರ್ದೇಶನವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಆಯಾ ಇಲಾಖೆಗಳ ವ್ಯಾಪ್ತಿಗೊಳಪಟ್ಟಂತೆ ಸರಕಾರದ ಆದೇಶವನ್ನು ಇಂದೇ ಹೊರಡಿಸುವಂತೆ ಹಾಗೂ ಹೊರಡಿಸಲಾದ ಆದೇಶದ ಪ್ರತಿಯನ್ನು ಖುದ್ದಾಗಿ ಮುಖ್ಯಗಳ ಕಾರ್ಯದರ್ಶಿಯವರ ಕಛೇರಿಗೆ ತಲುಪಿಸುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿ ಎಂ. ಉಮೇಶ ಬಾಬು ಟಿಪ್ಪಣಿ ನೀಡಿದ್ದಾರೆ.
ನಾಮನಿರ್ದೇಶನ ರದ್ದುಗೊಂಡಿರುವ ನಿಗಮ, ಮಂಡಳಿ, ಪ್ರಾಧಿಕಾರಿಗಳು ಇಂತಿವೆ.
- ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.
- ಜಲ ಸಂಪನ್ಮೂಲ ಇಲಾಖೆ,
- ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ,
- ನಗರಾಭಿವೃದ್ಧಿ ಇಲಾಖೆ,
- ಇಂಧನ ಇಲಾಖೆ,
- ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ,
- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,
- ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ,
- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,
- ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ,
- ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ,
- ಸಹಕಾರ ಇಲಾಖೆ,
- ಅಲ್ಪ ಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಸ್ ಇಲಾಖೆ
- ಸರ್ಕಾರದ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
- ಕೃಷಿ ಇಲಾಖೆ,
- ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ,
- ಪುವಾಸೋದ್ಯಮ ಇಲಾಖೆ,
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ,
- ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ(ಗಣಿ),
- ಸಮಾಜ ಕಲ್ಯಾಣ ಇಲಾಖೆ,
- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
- ಸಾರಿಗೆ ಇಲಾಖೆ.
ಬೆಳಿಗ್ಗೆ ಮೈಸೂರಿನಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈಗಾಗಲೇ ನಿಗಮ ಮಂಡಳಿಗೆ ನಾಮನಿರ್ದೇಶಿತರಾಗಿ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲದಿಂದ ಅಧಿಕಾರದಲ್ಲಿರುವ ಎಲ್ಲರನ್ನು ಕೈಬಿಡಲಾಗುವುದು. ಆ ಜಾಗಗಳಿಗೆ ಹೊಸಬರಿಗೆ ಅವಕಾಶ ನೀಡಲಾಗುವುದು ಎಂದು ಮಾಹಿತಿ ನೀಡಿದ್ದರು.
ಈಗ ಎಲ್ಲ ನಿಗಮ, ಮಂಡಳಿ ಮತ್ತು ಪ್ರಾಧಿಕಾರಿಗಳ ನಾಮನಿರ್ದೆಶಿತರನ್ನು ಕೈಬಿಟ್ಟಿರುವುದರಿಂದ ಬಿಜೆಪಿಯಲ್ಲಿ ಈ ಸ್ಥಾನಗಳಿಗೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಹೊಸ ಆಶಾಭಾವನೆ ಮೂಡಿದೆ. ಈ ಸ್ಥಾನಗಳ ಆಕಾಂಕ್ಷಿಗಳು ಈಗ ಮತ್ತೆ ಕ್ರೀಯಾಶೀಲರಾಗಿದ್ದಾರೆ.