CM Boards: ನಿಗಮ ಮಂಡಳಿಗಳಿಗೆ ಹೊಸಬರ ನೇಮಕ- ಒಂದೂವರೆ ವರ್ಷ ಮೇಲ್ಪಟ್ಟವರನ್ನು ಕೈಬಿಡಲಾಗುವುದು- ಸಿಎಂ

ಮೈಸೂರು: ನಿಗಮ ಮತ್ತು ಮಂಡಳಿಗಳಲ್ಲಿ ಒಂದೂವರೆ ವರ್ಷದಿಂದ ಮೇಲ್ಪಟ್ಟು ಅಧಿಕಾರದಲ್ಲಿ ಇರುವವರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು.

ಬೆಳಿಗ್ಗೆ ಮೈಸೂರಿಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಆರು ತಿಂಗಳ ಹಿಂದೆ ನಡೆದ ಕೋರ್ ಸಮಿತಿಯಲ್ಲಿ ಒಂದೂವರೆ ವರ್ಷ ಮೇಲ್ಪಟ್ಟವರನ್ನು ತೆಗೆದು ಹೊಸಬರಿಗೆ ಅವಕಾಶ ನೀಡಬೇಕು ಎಂದು ತೀರ್ಮಾನವಾಗಿದೆ. ಹೊಸಬರಿಗೂ ಅವಕಾಶ ಒದಗಿಸಲಾಗುತ್ತಿದೆ. ಈ ನಿಟ್ಡಿನಲ್ಲಿ ಸೂಚನೆ ನೀಡಲಾಗುವುದು ಎಂದು ಸಿಎಂ‌ ತಿಳಿಸಿದರು.

ಅತೀವೃಷ್ಠಿ, ಪ್ರವಾಹ ವಿಚಾರ

ಸಂಕಷ್ಟದ ಕಾಲದಲ್ಲಿ ಜನರೊಂದಿಗೆ ಸರಕಾರ ನಿಂತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲರನ್ನೂ ತೊಡಗಿಸಿಕೊಂಡು ಹಾಗೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲರನ್ನೂ ತೊಡಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಡುಪಿಯಲ್ಲಿ ಸಚಿವ ಎಸ್. ಅಂಗಾರ, ಸುನೀಲಕುಮಾರ್ ಮಂಗಳೂರಿನಲ್ಲಿ, ಉತ್ತರ ಕನ್ನಡದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಎಸ್. ಟಿ ಸೋಮಶೇಖರ ಅವರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಕಂದಾಯ ಸಚಿವರು ಕೊಡಗು ಮಂಗಳೂರಿಗೆ ಹೋಗಿ ಬಂದಿದ್ದಾರೆ. ಇಡೀ ಸರಕಾರವೇ ಈ ಬಗ್ಗೆ ಕಾರ್ಯ ನಿರ್ವಹಿಸುತ್ತಿದೆ. ನಾನೂ ಸಹ ಇಂದು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಅಗತ್ಯವಿರುವ ಸೂಚನೆ ಸಲಹೆಗಳನ್ನು ನೀಡಲಿದ್ದೇನೆ ಎಂದು ಅವರು ತಿಳಿಸಿದರು.

ಕೊಡಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಾಣ ಮತ್ತು ಆಸ್ತಿ ಹಾನಿಯಾಗಿರುವ ಪ್ರದೇಶಗಳಲ್ಲಿ ಜನರ ಮನ ಓಲೈಸುವ ಕೆಲಸ ಮಾಡುತ್ತೇವೆ.‌‌ ಸೆಸ್ಮಿಕ್ ವಲಯಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಮಳೆಹಾನಿ ಪ್ರಾಥಮಿಕ ಸಮೀಕ್ಷೆ

ಮಳೆಯಿಂದ ರಸ್ತೆ ಸಂಪರ್ಕ ಕಡಿತವಾಗಿದೆ. ಕೆಲವು ಕಡೆ ಭೂ ಕುಸಿತವಾಗಿದ್ದು, ಕೊಡಗಿನಲ್ಲಿ ಭೂಕಂಪ, ಕಡಲು ಕೊರೆತವಾಗಿದ್ದು, ಉತ್ತರ ಕರ್ನಾಟಕದಲ್ಲಿ ನದಿ ಪಕ್ಕದಲ್ಲಿರುವ ಮನೆಗಳಿಗೆ ಹಾನಿಯಾಗಿದೆ. ಅಲ್ಲಲ್ಲಿ ಜಲಾಶಯಗಳಿಂದ ನೀರು ಹೊರಬಿಟ್ಟ ಸಂದರ್ಭದಲ್ಲಿ ಬೆಳೆ ಹಾನಿಯಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ಪ್ರಥಮ ಹಂತದ ಸಮೀಕ್ಷೆ ಮುಗಿದಿದೆ. ಈ ಬಗ್ಗೆ ನಿಖರ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಬೆಳೆಹಾನಿ ಅಂದಾಜು ಮಾಡಿದ ನಂತರ ಕೇಂದ್ರ ಸರಕಾರದಿಂದ ಪರಿಹಾರ ಕೇಳುವ ಬಗ್ಗೆ ತೀರ್ಮಾನಿಸಲಾಗುವುದು. ಎನ್ ಡಿ ಆರ್ ಎಫ್ ನಲ್ಲಿ ರೂ. 730 ಕೋಟಿ ರೂ.ಗಳು ಲಭ್ಯವಿದೆ. ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ಅನುದಾನದ ಕೊರತೆ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ನದಿ ಪಾತ್ರಗಳಲ್ಲಿನ ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ 

ಉತ್ತರ ಕರ್ನಾಟಕದಲ್ಲಿ ನದಿಪಾತ್ರದ 63 ಊರುಗಳನ್ನು ಸ್ಥಳಾಂತರಿಸಲಾಗಿದೆ. ಕೆಲವು ಕಡೆ ಜನರು ಸ್ಥಳಾಂತರವಾಗಿಲ್ಲ. ವಿಶೇಷವಾಗಿ ನದಿ ಪಾತ್ರಲ್ಲಿರುವ ಗ್ರಾಮಗಳಲ್ಲಿನ ಮನೆಗಳನ್ನು ಸ್ಥಳಾಂತರ ಮಾಡಿ ಸುರಕ್ಷಿತಗೊಳಿಸಲು ತಜ್ಞರ ಅಭಿಪ್ರಾಯ ಕೇಳಲಾಗಿದೆ. ಆ ಪ್ರಕಾರ ವಿಶೇಷವಾದ ಯೋಜನೆಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಎಸ್. ಟಿ. ಸೋಮಶೇಖರ, ಸುನೀಲಕುಮಾರ, ಮೈಸೂರು ಸಂಸದ ಪ್ರತಾಪಸಿಂಹ, ಶಾಸಕ‌ ರಾಮದಾಸ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌