ವಿಜಯಪುರ: ಜಿಲ್ಲೆಯಲ್ಲಿ ಮಳೆಯಿಲ್ಲದಿದ್ದರೂ ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಪ್ರವಾಹ ಎದುರಿಸುತ್ತಿರುವ ಬಸವ ನಾಡು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ನಾನಾ ಗ್ರಾಮಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮವರ ಮತ್ತು ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಜಯಪುರ ಜಿಲ್ಲೆಯಲ್ಲಿ ಮಳೆ ಸಮರ್ಪಕವಾಗಿಲ್ಲ. ಆದರೆ, ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಆಲಮಟ್ಟಿಗೆ ನೀರನ ಒಳಹರಿವು ಹೆಚ್ಚಾಗಿದೆ. ಹೀಗಾಗಿ ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರದಿಂದ ನೀರನ್ನು ಕೃಷ್ಣಾ ನದಿಗೆ ಹೊರ ಬಿಡಲಾಗುತ್ತಿದೆ. ಈ ನೀರು ನಿಡಗುಂದಿ ತಾಲೂಕಿನ ಕೃಷ್ಣಾ ನದಿ ತೀರದ ಹಲವಾರು ಗ್ರಾಮಗಳಲ್ಲಿ ಪ್ರವಾಹ ಎದುರಿಸುವಂತೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳು ನಿಡಗುಂದಿ ತಾಲೂಕಿನ ಪ್ರವಾಹ ಪೀಡಿತ ಯಲಗೂರ ಗ್ರಾಮದ ನದಿ ಪಾತ್ರದ ಜಾಕವೆಲ್ ಗೆ ಬೇಟಿ ನೀಡಿ ಪರೀಲಿಶೀಲನೆ ನಡೆಸಿದರು.
ಮಸೂತಿ ಗ್ರಾಮಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಪರಿಸ್ಥಿತಿ ಅವಲೋಕಿಸಿದರು. ನಂತರ ಯಲ್ಲಮ್ಮನ ಬೂದಿಹಾಳ ಗ್ರಾಮಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ, ಆಯಾ ಗ್ರಾಮಸ್ಥರಿಂದ ಪ್ರವಾಹದ ಕುರಿತು ಮಾಹಿತಿ ಪಡೆದರು. ಅಲ್ಲದೇ, ಅಧಿಕಾರಿಗಳಿಂದಲೂ ಮಾಹಿತಿ ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ನಿರಂತರ ಮಳೆ ಮತ್ತು ಅದರಿಂದ ಉಂಟಾಗುವ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಜಿಲ್ಲಾಡಳಿತ ಮತ್ತು ನಾನಾ ತಾಲೂಕಾಡಳಿತಗಳು ಸನ್ನದ್ಧವಾಗಿವೆ ಎಂದು ತಿಳಿಸಿದರು.
ಎಲ್ಲ ತಹಸೀಲ್ದಾರಗಳು, ಕೃಷಿ, ತೋಟಗಾರಿಕೆ, ಪಶುಪಾಲನೆ, ರೇಷ್ಮೆ, ಹೆಸ್ಕಾಂ, ಲೋಕೋಪಯೋಗಿ ಸೇರಿದಂತೆ ಪ್ರಮುಖ ಇಲಾಖಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳ ನಿರ್ದೇಶನ ನೀಡಲಾಗಿದೆ. ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಾಗಿರುವುದರಿಂದ ಈಗ 75 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಜಿಲ್ಲೆಯ ಕೋಲ್ಹಾರ, ನಿಡಗುಂದಿ ಮತ್ತು ಮುದ್ದೇಬಿಹಾಳ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಡಂಗೂರ ಸಾರಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಒಟ್ಟು 12 ತಾಲೂಕುಗಳ ವ್ಯಾಪ್ತಿಯಲ್ಲಿ ಭೀಮಾ, ದೋಣಿ, ಕೃಷ್ಣಾ ನದಿಗಳು ಹರಿಯುತ್ತವೆ. ಆಲಮಟ್ಟಿ, ನಾರಾಯಣಪುರ ಮತ್ತು ಮಹಾರಾಷ್ಟ್ರದ ಉಜನಿ ಜಲಾಶಯಗಳ ಒಳ-ಹೊರ ಹರಿವು ಮೇಲೆ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ಉಜನಿ ಜಲಾಶಯದಿಂದ ಭೀಮಾ ನದಿಗೆ 2 ಲಕ್ಷ ಕ್ಯೂಸೆಕ್‌ಕ್ಕೂ ಅಧೀಕ ಪ್ರಮಾಣದಲ್ಲಿ ನೀರು ಹಿರಿಬಿಟ್ಟಾಗ ಚಡಚಣ ತಾಲೂಕಿನ 19, ಇಂಡಿ ತಾಲೂಕಿನ 11, ಸಿಂಧಗಿ ತಾಲೂಕಿನ 12 ಗ್ರಾಮಗಳು ಜಲಾವೃತವಾಗಲಿವೆ ಎಂದು ಅವರು ತಿಳಿಸಿದರು.
ಆಲಮಟ್ಟಿ ಜಲಾಶಯದಿಂದ 5 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಾಗ ನಾರಾಯಣಪುರ ಜಲಾಶಯದ ಹಿನ್ನಿರಿನಿಂದ ಮುದ್ಚೇಬಿಹಾಳ ತಾಲೂಕಿನ 9 ಮತ್ತು ನಿಡಗುಂದಿ ತಾಲೂಕಿನ ಒಂದು ಮತ್ತು ಆಲಮಟ್ಟಿ ಜಲಾಯಶದಿಂದ ನಾಲ್ಕ ಗ್ರಾಮಗಳು ಜಲಾವೃತವಾಗಲಿವೆ. ಪ್ರವಾಹ ಪೀಡಿತ ಸಮಸ್ಯೆ ಎದುರಿಸುವ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಡಂಗೂರ ಸಾರಿಸಿ ಮಾಹಿತಿ ನೀಡಲು ಸಂಬಂಧಿಸಿದ ತಹಸೀಲ್ದಾರಗಳಿಗೆ ನಿರ್ದೇಶನ ನೀಡಲಾಗಿದೆ. ಪ್ರವಾಹ ಪರಿಸ್ಥಿತಿ ಎದುರಾದಲ್ಲಿ ಕಾಳಜಿ ಕೇಂದ್ರ ತೆರೆಯಲು ಇಂಡಿ ತಾಲೂಕಿನಲ್ಲಿ 21, ಚಡಚಣ ತಾಲೂಕಿನಲ್ಲಿ 7, ಸಿಂದಗಿ ತಾಲೂಕಿನಲ್ಲಿ 14, ಮುದ್ದೇಬಿಹಾಳ ತಾಲೂಕಿನಲ್ಲಿ 7, ಬಬಲೇಶ್ವರ ತಾಲೂಕಿನಲ್ಲಿ 4, ನಿಡಗುಂದಿ ತಾಲೂಕಿನಲ್ಲಿ 1 ಸ್ಥಳಗಳನ್ನು ಜಿಲ್ಲಾಡಳಿತ ಈಗಾಗಲೇ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಭೀಮಾ, ದೋಣಿ, ಕೃಷ್ಣಾ ನದಿ ವ್ಯಾಪ್ತಿಯ ಪ್ರದೇಶದ 58 ಗ್ರಾಮ ಪಂಚಾಯಿತಿಗಳ ಗ್ರಾಮ ಪಂಚಾಯಿತಿ ವಿಪತ್ತು ನಿರ್ವಹಣಾ ಸಮಿತಿ ರಚನೆ, ಸಕ್ರಿಯ ಕ್ರಮ ವಹಿಸಲು ಸಮಿತಿಗಳಿಗೆ ಸೂಚನೆ ನೀಡಲಾಗಿದೆ. ಒಟ್ಟು 9 ತಾಲೂಕುಗಳಲ್ಲಿ 2022ರ ಏ. 1ರಿಂದ ಜು. 8 ರವರೆಗೆ ಮಳೆಯಿಂದಾಗಿ 49 ಕಚ್ಚಾ ಮತ್ತು ಒಂಬತ್ತು ಪಕ್ಕಾ ಸೇರಿ ಒಟ್ಟು 62 ಮನೆಗಳಿಗೆ ಹಾನಿಯಾಗಿದ್ದು, ಈಗಾಗಲೇ ರೂ. 113.07 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ಅವರು ಹೇಳಿದರು.
ಒಟ್ಟು 12 ತಾಲೂಕಿನಲ್ಲಿ ಈ ವರ್ಷ ಏ. 1 ರಿಂದ ಜು. 8 ರವರೆಗೆ 84 ಜಾನುವಾರುಗಳು ಮೃತಪಟ್ಟಿದ್ದು ರೂ. 9.52 ಲಕ್ಷ ಪರಿಹಾರ ವಿತರಿಸಲಾಗಿದೆ. ಇದೇ ಅವಧಿಯಲ್ಲಿ ಏಳು ಜನ ಸಾವಿಗೀಡಾಗಿದ್ದು, ಎಸ್ ಡಿ ಆರ್ ಎಫ್ ಮಾರ್ಗಸೂಚಿ ಅನುಸಾರ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ರೂ. 35 ಲಕ್ಷ ಪರಿಹಾರ ನೀಡಲಾಗಿದೆ ಎೞದು ಅವರು ತಿಳಿಸಿದರು.
ಪ್ರವಾಹ ಮುನ್ನೆಚ್ಚರಿಕೆ
ಈ ಬಾರಿಯೂ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ 13 ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ಮತ್ತು ಆಲಮಟ್ಟಿ ಜಲಾಶಯದಲ್ಲಿ ಪ್ರವಾಹ ನಿಯಂತ್ರಣ ಕುರಿತು ಏಳು ಜನ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಹಳ್ಳಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿಗಳು ಕೇಂದ್ರ ಸ್ಥಾನದಲ್ಲಿದ್ದು ಕಾರ್ಯ ನಿರ್ವಹಿಸಲು ಸೂಚನೆ ನೀಡಲಾಗಿದೆ. ಪ್ರತಿದಿನದ ಮಳೆಯ ವರದಿ, ಪ್ರಕೃತಿ ವಿಕೋಪದಿಂದ ಉಂಟಾಗಿರುವ ಮಾನವ-ಜಾನುವಾರು ಜೀವ ಹಾನಿ, ಕೃಷಿ ಮತ್ತು ತೋಟಗಾರಿಕಾ ಬೆಳೆ ಹಾನಿ ಮತ್ತು ಬಿದ್ದಿರುವ ಮನೆಗಳ ಕುರಿತು ಪ್ರತಿ ದಿನ ತಪ್ಪದೇ ಬೆಳಗ್ಗೆ 11 ಗಂಟೆಯೊಳಗೆ ವರದಿಯನ್ನು ಸಲ್ಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದರು.
ಮಾನವ, ಜಾನುವಾರು ಜೀವಹಾನಿ, ಮನೆ, ಬೆಳೆ ಹಾನಿಯ ಪ್ರದೇಶಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಕಾರ್ಯಕೈಗೊಳ್ಳಲು ತಹಸೀಲ್ದಾರಗೆ ನಿರ್ದೇಶನ ಕೊಟ್ಟಿದ್ದೇವೆ. ಮಾನವ ಜಾನುವಾರು ಜೀವಹಾನಿಗೆ ಘಟನೆ ಸಂಭವಿಸಿದ 24 ಗಂಟೆಗಳ ಒಳಗಾಗಿ ಮಾರ್ಗಸೂಚಿಯನುಸಾರ ಪರಿಹಾರ ಧನಕ್ಕೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಯಿಂದ ಚರಂಡಿ ಸ್ವಚ್ಛತೆ ನಡೆಸಿ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ. ಮಳೆಯಿಂದಾಗಿ ರಸ್ತೆಯ ಮೇಲೆ ಬೀಳುವ ಗಿಡ-ಮರಗಳ ತೆರವಿಗೆ, ಸಾರಿಗೆ ಸಂಚಾರವನ್ನು ಬೇರೆ ಸುರಕ್ಷಿತ ಮಾರ್ಗದಿಂದ ಮಾಡುವ ಕುರಿತ ಏರ್ಪಾಡಿಗೆ, ವಿದ್ಯುತ್ ತಂತಿಗಳು, ಟ್ರಾನ್ಸಫಾರ್ಮರಗಳು ಬಿದ್ದು ವಿದ್ಯುತ್ ಹರಿದು ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸುವ ಕುರಿತು ಅವಶ್ಯಕ ಕ್ರಮಗಳನ್ನು ಕೈಗೊಳ್ಳ;ಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ಕೊಟ್ಟಿರುವುದಾಗಿ ಅವರು ತಿಳಿಸಿದರು.
ಸರಕಾರಿ ದವಾಖಾನೆಗಳಲ್ಲಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿ ದಾಸ್ತಾನು ಇರುವಂತೆ ನೋಡಿಕೊಳ್ಳಲು ಆರೋಗ್ಯಾಧಿಕಾರಿಗಳಿಗೆ ಮತ್ತು ದನಕರುಗಳಿಗೆ ಸಹ ಮೇವು ಔಷಧಿ ವ್ಯವಸ್ಥೆ ಇರುವಂತೆ ನೋಡಿಕೊಳ್ಳಲು ಪಶು ಇಲಾಖಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ ಅವರು, ಪ್ರವಾಹದಿಂದ ಆಗುವ ಕೃಷಿ ತೋಟಗಾರಿಕೆ ಬೆಳೆ ಹಾನಿಯ ಕುರಿತು ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ತಂಡವನ್ನು ರಚಿಸಿ ಸಮೀಕ್ಷೆ ಕಾರ್ಯ ಕೈಗೊಂಡು ಎಸ್ ಡಿ ಆರ್ ಎಫ್ ಅಥವಾ ಎನ್ ಡಿ ಆರ್ ಎಫ್ ಮಾರ್ಗಸೂಚಿಯನುಸಾರ ಆಗಿರುವ ಹಾನಿಯ ಕುರಿತು ಮಾಹಿತಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದರು.