Maha Rain Alamatti: ಮಹಾಮಳೆ ಎಫೆಕ್ಟ್ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರಕ್ಕೆ ಹರಿದು ಬರುತ್ತಿರುವ ನೀರು ವಿದ್ಯುತ್ ಉತ್ಪಾದನೆಯೂ ಆರಂಭ

ವಿಜಯಪುರ: ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆ ಕರ್ನಾಟಕದ ಪಾಲಿಗೆ ವರದಾನವಾಗಿ ಪರಿಣಮಿಸುತ್ತಿದೆ.  ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆ ವಿಳಂಬವಾಗಿದ್ದರೂ ಭರ್ಜರಿಯಾಗಿಯೇ ಸುರಿಯುತ್ತಿದೆ.  ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ತನ್ನ ವ್ಯಾಪ್ತಿಯ ಕೋಯ್ನಾ ಸೇರಿದಂತೆ ನಾನಾ ಜಲಾಷಯಗಳಿಂದ ಅಪಾರ ಪ್ರಮಾಮದಲ್ಲಿ ನೀರನ್ನು ಬಿಡುಗಡೆ ಮಾಡಿದ್ದು ಕೃಷ್ಣಾ ನದಿ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ.

ಬಸವ ನಾಡು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರಕ್ಕೆ ಈಗ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಅಣೆಕಟ್ಟಿಯಲ್ಲಿ ನೀರಿನ ಸಂಗ್ರಹವೂ ಹೆಚ್ಚಾಗಿದೆ.  ಈ ಹಿನ್ನೆಲೆಯಲ್ಲಿ 18 ಕ್ರಸ್ಟಗೇಟ್ ಗಳ ಮೂಲಕ ನೀರನ್ನು ಹೊರ ಬಿಡಲಾಗುತ್ತಿದೆ.

ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ

ಆಲಮಟ್ಟಿ ಜಲಾಷಯದಲ್ಲಿ 519.60 ಮೀಟರ್ ವರೆಗೆ ಅಂದರೆ 123.08 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದ್ದು, ಇದರಲ್ಲಿ 506.87 ಮೀಟರ್ ವರೆಗೆ ಅಂದರೆ 17.61 ಟಿಎಂಸಿ ಡೆಡ್ ಸ್ಟೋರೇಜ್ ನೀರಿದೆ.  ಈಗ ಜಲಾಷಯದಲ್ಲಿ 517.28 ಮೀ. ವರೆಗೆ 87.992 ಟಿಎಂಸಿ ನೀರು ಸಂಗ್ರಹವಾಗಿದೆ.  ಕಳೆದ ವರ್ಷ ಈ ಜಲಾಷಯದಲ್ಲಿ ಇಂದಿನ ದಿನಾಂಕಕ್ಕೆ 517.50 ಅಂದರೆ 90.864 ಟಿಎಂಸಿ ನೀರು ಸಂಗ್ರಹವಾಗಿತ್ತು.  ಈಗ ಲೈವ್ ಸ್ಟೋರೇಜ್ 7.0302 ಟಿಎಂಸಿ ಇದ್ದು, ಕಳೆದ ವರ್ಷ ಈ ದಿನ 73.244 ಟಿಎಂಸಿ ನೀರು ಸಂಗ್ರಹವಿತ್ತು.

ಈಗ ಜಲಾಷಯಕ್ಕೆ 104852 ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗಿದ್ದು, ಕಳೆದ ವರ್ಷ ಈ ದಿನ ನೀರಿನ ಒಳಹರಿವು 9469 ಕ್ಯೂಸೆಕ್ ದಾಖಲಾಗಿತ್ತು.

 

ಈ ಹಿನ್ನೆಲೆಯಲ್ಲಿ ಜಲಾಷಯದಿಂದ ನಾಲ್ಕು ವಿದ್ಯುತ್ ಉತ್ಪಾದನೆ ಘಟಕಗಳು ಮತ್ತು 18 ಗೇಟುಗಳ ಮೂಲಕ 56936 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.  ಕಳೆದ ವರ್ಷ ಈ ದಿನ 11008 ಕ್ಯೂಸೆಕ್ ನೀರನ್ನು ಕೃಷ್ಣಾ ನದಿಯ ಮೂಲಕ ಯಾದಗಿರಿ ಜಿಲ್ಲೆಯ ನಾರಾಯಣಪುರದಲ್ಲಿರುವ ಬಸವ ಸಾಗರ ಜಲಾಷಯಕ್ಕೆ ಹೊರ ಬಿಡಲಾಗಿತ್ತು.

ಈಗ ಆಲಮಟ್ಟಿ ಜಲಾಷಯದಿಂದ  ನಾಲ್ಕು ವಿದ್ಯುತ್ ಉತ್ಪಾದನೆ ಘಟಕಗಳ ಮೂಲಕ 37710 ಕ್ಯೂಸೆಕ್, 18 ಗೇಟುಗಳ ಮೂಲಕ 18756 ಕ್ಯೂಸೆಕ್, ಮುಳವಾಡ ಏತ ನೀರಾವರಿ ಯೋಜನೆಯಡಿ 25 ಕ್ಯೂಸೆಕ್ ಸೇರಿ ಒಟ್ಟು 56936 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ ಎಂದು ಕೆ ಬಿ ಜೆ ಎನ್ ಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ನದಿ ತೀರದಲ್ಲಿ ಬರುವ ವಿಜಯಪುರ ಜಿಲ್ಲೆಯ ನಿಡಗುಂದಿ ಮತ್ತು ಮುದ್ದೇಬಿಹಾಳ ತಾಲೂಕುಗಳ ಗ್ರಾಮಗಳ ರೈತರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು.  ತಮ್ಮ ಕೃಷಿ ಸಲಕರಣೆಗಳನ್ನೂ ಸುರಕ್ಷಿತ ಸ್ಥಳಕ್ಕೆ ಸಾಗಿಸಬೇಕು ಎಂದು ಕೃಷ್ಣಾ ಮೇಲ್ದಂಡೆ ಯೋಜನೆ ಕೆ ಬಿ ಜೆ ಎನ್ ಎನ್ ಅಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ.

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಈಗಲೂ ಮಳೆ ಮುಂದುವರೆದಿರುವುದರಿಂದ ಇನ್ನೂ ಕೆಲವೇ ದಿನಗಳಲ್ಲಿ ಆಲಮಟ್ಟಿ ಜಲಾಷಯ ಸಂಪೂರ್ಣ ಭರ್ತಿಯಾಗುವ ನಿರೀಕ್ಷೆಯಿದ್ದು, ಮಳೆಯಿಲ್ಲದೇ ಕಂಗಾಲಾಗಿರುವ ಬಸವ ನಾಡಿನ ಜನರಲ್ಲಿ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆ ಸಂತಸ ಉಂಟು ಮಾಡಿದೆ.

Leave a Reply

ಹೊಸ ಪೋಸ್ಟ್‌