ವಿಜಯಪುರ: ಚುನಾವಣಾ ಪೂರ್ವ ಸಮೀಕ್ಷೆಗಳು ನಡೆಯುತ್ತ ಇರುತ್ತವೆ. ಈ ಸರ್ವೆಗಳಲ್ಲಿ ಏರಿಳಿತ ಆಗುತ್ತಿರುತ್ತದೆ. ಅಭ್ಯರ್ಥಿಗಳು ಆಯ್ಕೆಯಾದ ನಂತರ ಸಮೀಕ್ಷೆಗಳ ಫಲಿತಾಂಶದ ಬಗ್ಗೆ ಸ್ಪಷ್ಟವಾಗಿ ಹೇಳಬಹುದು ಎಂದು ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ ಮತ್ತು ಮಾಜಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.
ವಿಜಯಪುರ ನಗರದಲ್ಲಿ ಕಾಂಗ್ರೆಸ್ ಆಯೋಜಿಸಿರುವ ಜಿಲ್ಲಾ ಮಟ್ಟದ ನವ ಸಂಕಲ್ಪ ಚಿಂತನಾ ಶಿಬಿರದಲ್ಲಿ ಪಾಲ್ಗೋಳ್ಳಲು ಆಗಮಿಸಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಚುನಾವಣೆಗಳ ಕುರಿತು ಸರ್ವೆಗಳು ನಡೆಯುತ್ತ ಇರುತ್ತವೆ. ಸರ್ವೇಯಲ್ಲಿ ಏರಿಳಿತವಾಗುತ್ತಲೇ ಇರುತ್ತದೆ. ಪ್ರತಿ ತಿಂಗಳು ಸರ್ವೆ ಮಾಡಲಾಗುತ್ತದೆ. ಎಲ್ಲ ಸಮೀಕ್ಷೆಗಳಲ್ಲಿ ಪಕ್ಷಗಳ ಬಲಾಬಲ, ಏರಿಳಿತ ಸಹಜ. ಆದರೆ, ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳ ಆಯ್ಕೆ ಅಂತಿಮವಾದ ನಂತರ ಸಮೀಕ್ಷೆಗಳ ಸ್ಪಷ್ಟತೆ ಬಗ್ಗೆ ಹೇಳಬಹುದು ಎಂದು ಅವರು ಹೇಳಿದರು.
ನಾವೇ ಮತ್ತೇ ಆಧಿಕಾರಕ್ಕೆ ಬರುತ್ತೇವೆಂದು ಬಿಜೆಪಿಯವರು ಹೇಳುವುದು ಸಹಜ. ನಾವು ಆಧಿಕಾರಕ್ಕೆ ಬರಲು ಈ ಬಾರಿ ಅವಕಾಶವಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಎಲ್ಲಾ ಹಂತಗಳಲ್ಲಿ ವಿಫಲವಾಗಿದೆ. ಜನರು ಪರ್ಯಾಯವಾಗಿ ನೋಡುತ್ತಿದ್ದಾರೆ ಎಂದು ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ ತಿಳಿಸಿದರು.
ಸಿದ್ಧರಾಮೋತ್ಸವ ವಿಚಾರ
ಸಿದ್ದರಾಮಯ್ಯ ಅವರ 75 ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಕುರಿತು ಪ್ರತಿಪಕ್ಷಗಳು ಮಾಡುತ್ತಿರುವ ವ್ಯಂಗ್ಯದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಿದ್ಧರಾಮಯ್ಯ ಅವರ ಅಭಿಮಾನಿಗಳು ಅವರ ಜನ್ಮ ದಿನಾಚರಣೆ ಮಾಡುತ್ತಿದ್ದಾರೆ. ಪ್ರತಿಪಕ್ಷಗಳ ಟೀಕೆಗೂ ಬಿಜೆಪಿಗೂ, ಕಾಂಗ್ರೆಸ್ಸಿಗೂ ಯಾವುದೇ ಸಂಬಂಧವಿಲ್ಲ. ಅದು ವೈಯುಕ್ತಿಕವಾಗಿ ನಡೆಯಲಿರುವ ಕಾರ್ಯಕ್ರಮ. 75 ನೇ ಜನ್ಮ ದಿನಾಚರಣೆಯಾದ ಕಾರಣ ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದಾರೆ. ಇದಕ್ಕೆ ಬಿಜೆಪಿಯವರು ಟೀಕೆ ಮಾಡುವ ಪ್ರಶ್ನೆ ಬರಲ್ಲ ಎಂದು ಸತೀಶ ಜಾರಕಿಹೊಳಿ ತಿಳಿಸಿದರು.
ಕಾರ್ಯಕ್ರಮ ಸಿದ್ದರಾಮೋತ್ಸವ ಅಲ್ಲಾ ಉರುಸ್ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾಡಿರುವ ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರತಿಪಕ್ಷಗಳ ಮುಖಂಡರ ಟೀಕೆ ವಿಚಾರಕ್ಕೆ ಈಗಾಗಲೇ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಅದು ಸಿದ್ದರಾಮೋತ್ಸವ ಅಲ್ಲ. ಜನ್ಮ ದಿನಾಚರಣೆ ಎಂದು ಬಸವರಾಜ ರಾಯರೆಡ್ಡಿ ಸ್ಪಷ್ಟೀಕರಣ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಬಗ್ಗೆ ಭಿನ್ನಾಭಿಪ್ರಾಯವಿಲ್ಲ
ಸಿದ್ಧರಾಮೋತ್ಸವ ಕಾರ್ಯಕ್ರಮದ ವಿಚಾರದಲ್ಲಿ ಕಾಂಗ್ರೆಸ್ಸಿನಲ್ಲಿ ಯಾವುದೇ ಭಿನ್ನಾಬಿಪ್ರಾಯವಿಲ್ಲ. ನಮ್ಮ ಆಧ್ಯಕ್ಷರೂ ಇದ್ಧಾರೆ. ಎಲ್ಲರೂ ಕೂಡಿಕೊಂಡು, ಇಡೀ ಪಕ್ಷ ಭಾಗಿಯಾಗಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಬಿಜೆಪಿ ಗುರಿ ವಿಚಾರ
ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡುವ ಗುರಿಯಿದೆ ಎಂದು ಬಿಜೆಪಿ ಮುಖಂಡರು ನೀಡುತ್ತಿರುವ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರ ಕೈಯಲ್ಲಿ ಆಧಿಕಾರವಿದೆ. ಸೈಕಲ್ ಅದು ತಿರುಗುತ್ತ ಇರುತ್ತದೆ. ಈಗ ಅವರ ಕಾಲವಿದೆ. ಮುಂದೆ ನಮ್ಮ ಕಾಲ ಬರಬಹುದು. ಅದಕ್ಕಾಗಿ ನಾವು ಕಾಯಬೇಕಿದೆ ಅಷ್ಟೇ ಎೞದು ಅವರು ತಿಳಿಸಿದರು.
ಗೋವಾ ಕಾಂಗ್ರೆಸ್ ಭಿನ್ನಮತ ವಿಚಾರ
ಗೋವಾದ ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸತೀಶ ಜಾರಕಿಹೊಳಿ, ಕೆಲವು ಕಾಂಗ್ರೆಸ್ ಶಾಸಕರ ಬಿಜೆಪಿ ಸೇರಲು ಪ್ರಯತ್ನ ಮಾಡಿದ್ದರು. ಈಗ ಹೋಗಲ್ಲ. ಇಲ್ಲಿಯೇ ಇರುತ್ತೇವೆ ಎಂದು ಹೇಳಿದ್ದಾರೆ ಎಂದು ಸತೀಶ ಜಾರಕಿಹೊಳಿ ತಿಳಿಸಿದರು.
ನವ ಸಂಕಲ್ಪ ಚಿಂತನಾ ಶಿಬಿರ
2023ರ ವಿಧಾನ ಸಭೆ ಚುನಾವಣೆಗೆ ಪೂರಕವಾಗಿ ಈಗ ನವ ಸಂಕಲ್ಪ ಚಿಂತನಾ ಶಿಬಿರ ಆಯೋಜಿಸಿದ್ದೇವೆ. ರಾಷ್ಟ್ರ ಮಟ್ಟ, ರಾಜ್ಯ ಮಟ್ಟದ ಬಳಿಕ ಜಿಲ್ಲಾ ಮಟ್ಟದಲ್ಲಿ ಶಿಬಿರ ಏರ್ಪಡಿಸಿದ್ದೇವೆ ಎಂದು ಅವರು ಹೇಳಿದರು.
ಈ ಶಿಬಿರದಲ್ಲಿ ಸ್ಥಳಿಯ ಕಾರ್ಯಕರ್ತರ ಸಮಸ್ಯೆ ಕೇಳಲಾಗುತ್ತದೆ. ಜಿಲ್ಲೆಗೆ ಸೀಮಿತವಾಗಿರುವ ಸಮಸ್ಯೆಗಳನ್ನು ರಾಜ್ಯದ ನಾಯಕರಿಗೆ ತಿಳಿಸಲಾಗುತ್ತದೆ. ನಂತರ ಅಂತಿಮ ತೀರ್ಮಾಣವನ್ನು ನಾಯಕರು ತೆಗೆದುಕೊಳ್ಳುತ್ತಾರೆ ಎಂದು ಸತೀಶ ಜಾರಕಿಹೊಳಿ ತಿಳಿಸಿದರು.