Jnanayogashram Gurupurnime: ಜಿಟಿಜಿಟಿ ಮಳೆಯ ಮಧ್ಯೆಯೂ ವಿಜಯಪುರ ಜ್ಞಾನಯೋಗಾಶ್ರಮದಲ್ಲಿ ಸಂಭ್ರಮದಿಂದ ನಡೆದ ಗುರು ಪೂರ್ಣಿಮೆ ಆಚರಣೆ

ವಿಜಯಪುರ: ಕಳೆದ ಎರಡು ದಿನಗಳಿಂದ ವಿಜಯಪುರ ನಗರ ಸೇರಿದಂತೆ ಜಿಲ್ಲಾದ್ಯಂತ ಜಿಟಿಜಿಟಿ ಮಳೆಯಾಗುತ್ತಿದೆ.  ಇದರ ಮಧ್ಯೆಯೂ, ವಿಜಯಪುರ ನಗರದ ಜ್ಞಾನ ಯೋಗಾಶ್ರಮದಲ್ಲಿ ಅರ್ಥಪೂರ್ಣವಾಗಿ ಗುರುಪೂರ್ಣಿಮೆಯನ್ನು ಆಚರಿಸಲಾಯಿತು.

ಬೆಳಿಗ್ಗೆ ಗುರು ಸ್ಮರಣೆಯೊಂದಿಗೆ ಸಾವಿರಾರು ಭಕ್ತರು ಮತ್ತು ನಾನಾ ಸ್ವಾಮೀಜಿಗಳ ಸಮ್ಮುಖದಲ್ಲಿ ಜಪಯೋಗ ಕಾರ್ಯಕ್ರಮ ನಡೆಯಿತು.  ನಂತರ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಪ್ರವಚನ ಧ್ವನಿ ಸುರಳಿಯ ಮೂಲಕ ಆಶೀರ್ವಚನ ಕೇಳಿಸಲಾಯಿತು.  ಪ್ರವಚನದ ಆಧಾರಿತ ಆಧ್ಯಾತ್ಮಿಕ ಗ್ರಂಥಗಳ ಬಿಡುಗಡೆ ಸಮಾರಂಭ ಗಮನ ಸೆಳೆಯಿತು.

ಜ್ಞಾನಯೋಗಾಶ್ರಮದಲ್ಲಿ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಜಿಟಿಜಿಟಿ ಮಳೆಯಲ್ಲಿಯೇ ಪಾಲ್ಗೋಂಡ ಭಕ್ತರು

ಜ್ಞಾನ ಯೋಗಾಶ್ರಮದ ಪ್ರಣವ ಮಂಟಪದಲ್ಲಿ ಮಂತ್ರದೊಂದಿಗೆ ಮಹಾಪೂಜೆ ಕೂಡ ನೆರವೇರಿತು. ವಿಜಯಪುರ ಜಿಲ್ಲೆಯಷ್ಟೇ ಅಲ್ಲ, ನೆರೆಯ ರಾಜ್ಯಗಳ ಭಕ್ತರು ಕೂಡ ಈ ಜಾತ್ರೆಯಲ್ಲಿ ಪಾಲ್ಗೋಂಡರು.   ಅಷ್ಟೇ, ನಾನಾ ಸೇವೆಗಳನ್ನು ಸಲ್ಲಿಸಿ ಪುನಿತರಾದರು.  ಜಿಟಿಜಿಟಿ ಮಳೆಯ ನಡುವೆಯೂ ಕೈಯಲ್ಲಿ ಛತ್ರಿ ಹಿಡಿದು ಕುಳಿತ ಭಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.  ನೂರಾರು ಜನರು ಪಾಳಿಯಲ್ಲಿ ನಿಂತರು ಪ್ರಣವ ಮಂಟಪಕ್ಕೆ ದರ್ಶನ ಪಡೆದು ಗುರುವಂದನೆ ಸಲ್ಲಿಸಿದರು.

 

ಎಲ್ಲ ಭಕ್ತರು ಸ್ವಚ್ಛತೆಯನ್ನು ಕಾಪಾಡುವ ಮೂಲಕ ಶಿಸ್ತನ್ನು ಕಾಯ್ದುಕೊಂಡರು.  ಕಳೆದೆರಡು ದಿನಗಳಿಂದ ತುಂತುರು ಆದ ಮಳೆಯ ಪ್ರಾರಂಭವಾದರೂ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಜಿಯವರ ಗದ್ದುಗೆ ಮತ್ತು ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಗಮನ ಸೆಳೆದರು.  ಆಶ್ರಮದ ಹಿರಿಯರು ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿಸುವ ಮೂಲಕ ಕ್ರಿಯಾಶೀಲರಾಗಿದ್ದರೆ, ನೂರಾರು ಜನ ಸ್ವಯಂ ಸೇವಕರೂ ಕೂಡ ಅನ್ನ ಪ್ರಸಾದ ವಿತರಣೆಯಲ್ಲಿ ತೊಡಗಿಕೊಂಡು ಅಳಿಲು ಸೇವೆ ಸಲ್ಲಿಸಿದರು.

ವಿಜಯಪುರದ ಪ್ರತಿಷ್ಚಿತ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ ಎಂ ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಿತು.

ಪೊಲೀಸ್ ಸಿಬ್ಬಂದಿ ಕೂಡ ಜನದಟ್ಟಣೆಯನ್ನು ನಿಯಂತ್ರಿಸಿ ಹೆಚ್ಚೆಚ್ಚು ಭಕ್ತರು ದರ್ಶನ ಮಾಡಲು ಅವಕಾಶ ಕಲ್ಪಿಸಿದರು.

ಒಟ್ಟಾರೆ ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ಸರಳವಾಗಿ ನಡೆದ ಗುರು ಪೂರ್ಣಿಮೆ ಆಚರಣೆ ಈ ಬಾರಿ ಜಿಟಿಜಿಟಿ ಮಳೆಯ ಮಧ್ಯೆಯೂ ಸಂಭ್ರಮದಿಂದ ನಡೆಯಿತು.

Leave a Reply

ಹೊಸ ಪೋಸ್ಟ್‌