ವಿಜಯಪುರ, 14: ಸಮಾಜದ ಅಂಕುಕೊಂಕುಗಳನ್ನು ತಿದ್ದಿ ವಿದ್ಯಾರ್ಥಿಗಳಿಗೆ ನಿಸ್ವಾರ್ಥ ಸೇವೆ ನೀಡುವ ಮೂಲಕ ಗುರು ಸಮಾಜ ಕಟ್ಟುವ ಕೆಲಸದಲ್ಲಿ ಮಹತ್ವದ ಕೆಲಸ ಮಾಡುತ್ತಾನೆ ಎಂದು ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ ಶಾಲ್ಮೂನ್ ಚೋಪಡೆ ಹೇಳಿದರು.
ಅವರು ಕಾಲೇಜಿನಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮಕ್ಕೆ ಸರಸ್ವತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಹೀಗೆ ತಮಗೆ ಮಾರ್ಗದರ್ಶನ ನೀಡುವ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವುದು ಗುರು ಪೂರ್ಣಿಮೆ ಆಚರಣೆಯ ಮೆರಗನ್ನು ಹೆಚ್ಚಿಸುತ್ತದೆ. ಈ ಹಿನ್ನೆಲೆಯಲ್ಲಿಯೇ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ದಾಸರು ಹೇಳಿದ್ದಾರೆ ಎಂದು ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ನಾನಾ ಉಪನ್ಯಾಸಕರು ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಚಾರ್ಯ ಪ್ರೊ. ಸುಚಿತ್ರಾ ರಾಟಿ, ಡಾ. ಎನ್. ಜಿ. ಪಾಟೀಲ, ಡಾ. ಬಶೀರ ಅಹ್ಮದ, ಡಾ. ಕವಿತಾ ಹಾಗೂ ಎಸ್ ಎನ್ ಎ ಮಾರ್ಗದರ್ಶಕ ಸಂತೋಷ ಇಂಡಿ, ಕಾಲೇಜಿನ ಬೋಧಕ, ಬೋಧಕರ ಹೊರತಾದ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗುರು ಪೂರ್ಣಿಮೆ ಅಂಗವಾಗಿ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಸೇರಿಕೊಂಡು ಗುರುಗಳಿಗೆ ಕೃತಜ್ಞತೆ ಸಲ್ಲಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ವಿದ್ಯಾರ್ಥಿ ರವಿ ನಿರೂಪಿಸಿದರು ನೇಹಾ ಚೋಪಡೆ ಸ್ವಾಗತಿಸಿದರು ಸೌಜನ್ಯ ವಂದಿಸಿದರು.