ವಿಜಯಪುರ: ನಗರದಲ್ಲಿರುವ ಕೇಂದ್ರಿಯ ವಿದ್ಯಾಲಯದಲ್ಲಿ ಇನ್ವೆಸ್ಟಿಟ್ಯೂರ್(ಶಾಲಾ ಸಂಸತ್ತು ಪದಗ್ರಹಣ) ಸಮಾರಂಭ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮವರ ಪಾಲ್ಗೋಂಡರು. ಶಾಲೆಗೆ ಆಗಮಿಸಿದ ಮುಖ್ಯ ಅತಿಥಿಗಳನ್ನು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸ್ವಾಗತಿಸಿ ವೇದಿಕೆಗೆ ಕರೆ ತಂದರು. ದೀಪ ಬೆಳಗುವ ಮೂಲಕ ಜಿಲ್ಲಾಧಿಕಾರಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸಿದರು. ಶಾಲಾ ಸಂಸತ್ತಿನ ನೂತನ ಪದಾಧಿಕಾರಿಗಳಿಗೆ ಬ್ಯಾಡ್ಜ್ ತೊಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಜವಾಬ್ದಾರಿ ವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಜಯಪುರ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳ ಶಿಸ್ತು ಶ್ಲಾಘನೀಯವಾಗಿದೆ. ಇಲ್ಲಿನ ವಾತಾವರಣ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವಂತಿದೆ. ಪರಿಸರ ಸುಂದರವಾಗಿದ್ದು, ನೈರ್ಮಲ್ಯ ಎದ್ದು ಕಾಣುತ್ತಿದೆ. ಈ ಎಲ್ಲದಕ್ಕೂ ಕಾರಣರಾಗಿರುವ ಪ್ರಿನ್ಸಿಪಾಲರು, ಶಿಕ್ಷಕರು ಮತ್ತು ವಿದ್ಯಾಲಯದ ಎಲ್ಲ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಹೌಸ್ ಕ್ಯಾಪ್ಟನ್ ಗಳಿಗೆ ಬ್ಯಾಡ್ಜ್ ತೊಡಿಸಲಾಯಿತು. ಕ್ಲಾಸ್ ಮಾನಿಟರ್ ಗಳಿಗೆ ಆಯಾ ತರಗತಿಗಳ ಶಿಕ್ಷಕರು ಬ್ಯಾಡ್ಜ್ ತೊಡಿಸಿದರು. ಶಾಲಾ ಸಂಸತ್ತಿನ ಪ್ರತಿನಿಧಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ವಿದ್ಯಾರ್ಥಿನಿಯರು ಕೇರಳ, ಉತ್ತರಾಖಂಡ ನೃತ್ಯ ಪ್ರದರ್ಶಿಸಿದರು. ನಾನಾ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಶಾಲೆಯಲ್ಲಿ ಸಸಿಯನ್ನು ನೆಟ್ಟರು. ಅಲ್ಲದೇ, ಶಾಲೆಯ ಕಚೇರಿ, ತರಗತಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅಲ್ಲದೇ, ಶಾಲೆಯನ್ನು ವೀಕ್ಷಿಸಿದರು.
ಶಾಲೆಯ ಮುಖ್ಯ ಶಿಕ್ಷಕ ರಮೇಶ ಚವ್ವಾಣ ಸೇರಿದಂತೆ ಬೋಧಕ ಮತ್ತು ಬೋದಕರ ಹೊರತಾದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೇಂದ್ರೀಯ ವಿದ್ಯಾಲಯದ ಪ್ರಿನ್ಸಿಪಾಲರಾದ ಸೆಬಾಸ್ಟಿಯನ್ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿನಿಯರು ಸ್ವಾಗತ ಗೀತೆ ಹಾಡಿದರು. ಶಿಕ್ಷಕರಾದ ಶಂಕರ ಶಾಸ್ತ್ರಿ ವಂದಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಎಲ್ಲ ಶಿಕ್ಷಕ ವೃಂದದವರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.