Krishna Puje: ಉತ್ತರ ಕರ್ನಾಟಕದ ಜೀವನಾಡಿ- ಕೃಷ್ಣಾ ಸೇರಿ ಪಂಚ ನದಿಗಳ ಉಗಮಸ್ಥಾನ ಮಹಾಬಳೇಶ್ವರದಲ್ಲಿ ಪೂಜೆ ಸಲ್ಲಿಸಿದ ಬಸವ ನಾಡಿನ ರೈತರು

ಮಹೇಶ ವಿ. ಶಟಗಾರ

ವಿಜಯಪುರ: ಕೃಷ್ಣಾ ಉತ್ತರ ಕರ್ನಾಟಕದ ಜೀವನದಿ.  ಉತ್ತರ ಕರ್ನಾಟಕದಲ್ಲಿ ಮಳೆಯಾಗದಿದ್ದರೂ ಈ ನದಿ ರೈತರು, ಜನಜಾನುವಾರುಗಳಿಗೆ ಪ್ರತಿವರ್ಷ ನೀರೊದಗಿಸುತ್ತದೆ.  ಈ ಬಾರಿಯೂ ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಮಳೆ ಅಷ್ಟಕ್ಕಷ್ಟೆಯಾಗಿದ್ದರೂ, ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. 

ಹೀಗಾಗಿ ತಮಗೆ ಜೀವಜಲ ನೀಡುವ ಕೃಷ್ಣಾ ನದಿಯ ಉಗಮಸ್ಥಾನ ಮಹಾರಾಷ್ಟ್ರದಲ್ಲಿ ಮಹಾಬಳೇಶ್ವರ ಪಂಚಗಂಗಾ ದೇವಸ್ಥಾನಕ್ಕೆ ತೆರಳಿದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಅನ್ನತಾದರು ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ 15ನೇ ವರ್ಷದ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದರು.

ಕೃಷ್ಣಾ ನದಿಯ ಉಗಮಸ್ಥಾನ ಮಹಾಬಳೇಶ್ವರದ ಪಂಚಗಂಗಾ ದೇವಸ್ಥಾನ

ಕಡಲ್ಗಾರ ಹುಣ್ಣಿಮೆಯ ವಿಶೇಷ

ಕಡಲಗಾರ ಹುಣ್ಣಿಮೆ ಅಂದರೆ ಗುರು ಪೂರ್ಣಿಮೆ ಗುರುವಿಗೆ ವಂದನೆ ಸಲ್ಲಿಸುವ ಸಲುವಾಗಿ ಆಚರಿಸೊಂಡು ಬಂದಿರುವ ಹುಣ್ಣಿಮೆಯಾಗಿದೆ.  ಮುಂಗಾರು ಆರಂಭವಾಗುವದರೊಂದಿಗೆ ಬರುವ ಈ ಹುಣ್ಣಿಮೆಯಾಗಿದೆ.  ಕೃಷ್ಣಾ ನದಿ ಮತ್ತು ಈ ನದಿಯ ಉಗಮಸ್ಥಾನದ ಮಹತ್ವ ಅರಿತಿರುವ ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ 1999ರಲ್ಲಿ ಆಲಮಟ್ಟಿ ಜಲಾಷಯಯದಲ್ಲಿ ನೀರು ಸಂಗ್ರಹ ಆರಂಭವಾದಾಗ ಅಂದಿನ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಮತ್ತು ಜಲಸಂಪನ್ಮೂಲ ಸಚಿವ ಎಚ್. ಕೆ. ಪಾಟೀಲ ಅವರನ್ನು ಆಲಮಟ್ಟಿಗೆ ಕರೆಯಿಸಿ ಬಾಗೀನ ಅರ್ಪಿಸುವ ಮೂಲಕ ಗಂಗಾಪೂಜೆ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು.

ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ ದಂಪತಿ ಪಂಚಗಂಗಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು

 

ಈ ಸಂಪ್ರದಾಯದ ಮುಂದುವರೆದ ಭಾಗವಾಗಿ ಬೆಳ್ಳುಬ್ಬಿ ತಾವು ಶಾಸಕರಾಗಿದ್ದಾಗ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ರೈತರೊಂದಿಗೆ ಪ್ರತಿ ವರ್ಷ ಗುರುಪೂರ್ಣಿಮೆ ಹುಣ್ಣಿಮೆಯಂದು ಪಂಚಗಂಗಾ ದೇವಸ್ಥಾನಕ್ಕೆ ತೆರಳಿ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸುವ ಸಂಪ್ರದಾಯ ಪಾಲಿಸುತ್ತ ಬಂದಿದ್ದಾರೆ.  ಈಗ ಕೂಡ ತಮ್ಮ ಪತ್ನಿ ಮತ್ತು ಕೊಲ್ಹಾರದ ಹಿರೇಮಠದ ಶ್ರೀ ಕೈಲಾಸನಾಥ ಶಿವಾಚಾರ್ಯ ಸ್ವಾಮೀಜಿ ಜೊತೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಕೃಷ್ಣಾ ಮಾತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.  ಈ ಮೂಲಕ ಉತ್ತರ ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳ ಕೋಟ್ಯಂತರ ಜನರಿಗೆ ಜೀವನಾಡಿಯಾಗಿರುವ ಕೃಷ್ಣಾ ನದಿಯಲ್ಲಿ ಸದಾ ನೀರು ಹರಿಯಲು, ನಾಡಿನಲ್ಲಿ ಉತ್ತಮ ಮಳೆಯಾಗಿ ಸಮೃದ್ಧ ಬೆಳೆ ಬೆಳೆದು ಈ ಭಾಗ ಸದಾ ಹಸಿರಿನಿಂದ ಕಂಗೊಳಿಸಲಿ ಎಂದು ಪ್ರಾರ್ಥಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಈ ಕಾರ್ಯಕ್ರಮ ಈಗ ಮತ್ತೋಮ್ಮೆ ಅದ್ಧೂರಿಯಾಗಿ ನೆರವೇರಿದೆ.  ಈ ಭಾಗದ ಮಣ್ಣಿನ ಮಕ್ಕಳು ನೂರಾರು ಸಂಖ್ಯೆಯಲ್ಲಿ ಮಹಾಬಳೇಶ್ವರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಪಂಚನದಿಗಳ ಉಗಮಸ್ಥಾನ ಮಹಾಬಳೇಶ್ವರ ಪಂಚಗಂಗಾ ದೇವಸ್ಥಾನ

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಹಸಿರು ತಾಣ ಸಾತಾರ ಜಿಲ್ಲೆಯ ಮಹಾಬಳೇಶ್ವರದ ಪಪಂಚಗಂಗಾ ಸ್ಥಳದಲ್ಲಿ ಹುಟ್ಟುವ ಕೃಷ್ಣಾ ನದಿ ಕೇವಲ ಮಹಾರಾಷ್ಟ್ರ ಮಾತ್ರವಲ್ಲ, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಜನರಿಗೆ ನೀರುಣಿಸುತ್ತಾಳೆ.  ಈ ಮೂಲಕ ಕೃಷ್ಣೆ ಲಕ್ಷಾಂತರ ಕೋಟ್ಯಂತರ ಜನರ ಪಾಲಿಗೆ ಜೀವನಾಡಿಯಾಗಿದ್ದಾಳೆ.

ಕೃಷ್ಣಾ ನದಿ ಹುಟ್ಟುವ ಪಂಚಗಂಗೆ ಕ್ಷೇತ್ರ ಐದು ನದಿಗಳ ಉಗಮಸ್ಥಾನವಾಗಿರುವುದು ಮತ್ತೋಂದು ವಿಶೇಷ.  ಗಾಯತ್ರಿ, ಸಾವಿತ್ರಿ, ಕೋಯ್ನಾ, ವೆನ್ನಾ ಮತ್ತು ಕೃಷ್ಣಾ ನದಿಗಳ ಸಂಗಮಸ್ಥಳವೂ ಹೌದು.  ಇಲ್ಲಿ ಪಂಚಗಂಗಾ ದೇವಸ್ಥಾನ ನಿರ್ಮಿಸಲಾಗಿದ್ದು, ಈ ದೇವಾಲಯದಲ್ಲಿರುವ ಆಕಳು ಅಂದರೆ ಗೋವಿನ ಮೂರ್ತಿಯ ವಾಯಿಯಿಂದ ಎಲ್ಲ ನದಿಗಳು ಉಗಮವಾಗುತ್ತವೆ.  ಈ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಪಂಚಗಂಗಾ ಎಂದು ಕರೆಯಲಾಗುತ್ತದೆ.  ಪ್ರತಿದಿನ ಬೆ. 10 ರಿಂದ ರಾತ್ರಿ 8ರ ವರೆಗೆ ಇಲ್ಲಿಗೆ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆಯಲು ಅವಕಾಶವಿದೆ.

ಮಹಾರಾಷ್ಟ್ರದಲ್ಲಿ ಉಗಮವಾಗುವ ಕೃಷ್ಣಾ ನದಿ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಹರಿದು ಆಂಧ್ರ ಪ್ರದೇಶದ ಹಂಸಲಾದೇವಿಯಲ್ಲಿ ಬಂಗಾಳಕೊಲ್ಲಿ ಸಮುದ್ರ ಸೇರುತ್ತದೆ.  ಇದು ಮಹಾರಾಷ್ಟ್ರದಿಂದ ಆಂಧ್ರಪ್ರದೇಶದ ಬಂಗಾಳ ಕೊಲ್ಲಿ ಸಮುದ್ರದ ವರೆಗೆ ಸುಮಾರು 1392 ಕಿ. ಮೀ. ಹರಿಯುತ್ತಿದ್ದು, ನಮ್ಮ ರಾಜ್ಯ ಕರ್ನಾಟಕದಲ್ಲಿಯೇ ಸುಮಾರು 483 ಕಿ. ಮೀ. ಹರಿಯುತ್ತದೆ.

ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಮಹಾಬಳೇಶ್ವರದಲ್ಲಿರುವ ದೇವಸ್ಥಾನ

ಕರ್ನಾಟಕದಲ್ಲಿ ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಲಾಲ್ ಬಹಾದ್ದೂರ ಸಾಗರ ಮತ್ತು ಯಾದಗಿರಿ ಜಿಲ್ಲೆಯ ನಾರಾಯಣಪುರದ ಬಳಿ ಬಸವ ಸಾಗರ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ.  ಆಲಮಟ್ಟಿ ಜಲಾಷಯದಲ್ಲಿ 123.08 ಟಿಎಂಸಿ ಮತ್ತು ನಾರಾಯಣಪುರ ಜಲಾಷಯದಲ್ಲಿ 33.31 ಟಿಎಂಸಿ ಸೇರಿ ಒಟ್ಟು 156.39 ಟಿಎಂಸಿ ನೀರನ್ನು ಕರ್ನಾಟಕದಲ್ಲಿ ಬಳಸಲಾಗುತ್ತಿದೆ.  ಇದು ಉತ್ತರ ಕರ್ನಾಟಕದ ನಾಲ್ಕಾರು ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ.  ಅದರಲ್ಲೂ ಮಳೆಯೇ ಅಪರೂಪ ಎಂಬಂತಿರುವ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಪಾಲಿಗಂತೂ ಕೃಷ್ಣಾ ನದಿ ಪಕ್ಕಾ ಜೀವನದಿಯಾಗಿ ಜನರ ಜೀವನಾಡಿಯಾಗಿದೆ.

ಈಗ ಮಹಾರಾಷ್ಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.  ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ರೆಡ್ ಅಲರ್ಟ್ ಮಧ್ಯೆಯೂ ಸಂಪ್ರದಾಯ ಬಿಡದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಜನತೆ ಮಹಾಬಳೇಶ್ವರ ಪಂಚಗಂಗಾ ದೇವಸ್ಥಾನಕ್ಕೆ ತೆರಳಿ ತಮಗೆ ನೀರು ನೀಡುವ ಕೃಷ್ಣಾ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಗಂಗಾಪೂಜೆಯನ್ನೂ ಮಾಡಿ ಬಾಗೀನ ಅರ್ಪಿಸಿ ಪಾವನರಾಗಿದ್ದಾರೆ.

Leave a Reply

ಹೊಸ ಪೋಸ್ಟ್‌