ವಿಜಯಪುರ: ಪೋಲಿಸ್ ನೇಮಕಾತಿಯಲ್ಲಿ ವಯೋಮಿತಿ ಸಡಲಿಕೆ ಹೆಚ್ಚಿಸಬೇಕು ಎಂದು ಎಐಡಿವೈಓ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಆಗ್ರಹಿಸಿದ್ದಾರೆ.
ವಿಜಯಪುರ ನಗರದಲ್ಲಿ ಎಐಡಿವೈಓ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ಬಳಿಕ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು
ಕೊರೊನಾ ಸಂದರ್ಭದಲ್ಲಿ ಲಕ್ಷಾಂತರ ಯುವಜನತೆ ಉದ್ಯೋಗವಿಲ್ಲದೇ ನಾನಾ ರೀತಿಯ ಸಂಕಷ್ಟ ಎದುರಿಸಿದ್ದಾರೆ. ಸರಕಾರಿ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಯಾವುದೇ ನೇಮಕಾತಿ ಕೂಡ ನಡೆಯುತ್ತಿಲ್ಲ. ನಡೆದ ಅಲ್ಪ-ಸ್ವಲ್ಪ ನೇಮಕಾತಿಗಳೂ ಪಾರದರ್ಶಕವಾಗಿಲ್ಲ. ಇನ್ನೊಂದೆಡೆ ಉದ್ಯೋಗದ ಕನಸು ಕಾಣುತ್ತಿರುವ ಲಕ್ಷಾಂತರ ಪೊಲೀಸ್ ಪರೀಕ್ಷಾರ್ಥಿಗಳು ವಯೋಮಿತಿ ಮೀರುತ್ತಿದ್ದಾರೆ. ಆದ್ದರಿಂದ ಸರಕಾರ ಕೂಡಲೇ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಂತೆ ಕರ್ನಾಟಕದದಲ್ಲಿಯೂ ಪೊಲೀಸ್ ನೇಮಕಾತಿ ವಯೋಮಿತಿಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳು ಸಂಧಾನತೀತ ಹೋರಾಟದಲ್ಲಿ ನಂಬಿಕೆ ಇಡಬೇಕು. ಭಗತಸಿಂಗ್, ನೇತಾಜಿಯಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಮುಂಬರುವ ದಿನಗಳಲ್ಲಿ ಉನ್ನತ ಹಂತದ ಚಳುವಳಿ ಮತ್ತು ಹೋರಾಟಗಳನ್ನು ಕಟ್ಟಲು ಸಜ್ಜಾಗಬೇಕೆಂದರು ಎಂದು ಎಐಡಿವೈಓ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಹೇಳಿದರು.
ಈ ಸಂದರ್ಭದಲ್ಲಿ ಪೊಲೀಸ್ ಪರೀಕ್ಷಾರ್ಥಿಗಳಾದ ಶಶಿಕುಮಾರ ಉಪ್ಪಾರ, ಪ್ರಿಯಾಂಕ ಪಾಟೀಲ, ಸಂತೋಷ ಬರಡೋಲ, ಮಹೇಶ ಭಜಂತ್ರಿ, ಕಿರಣ ನಾಯಕ, ಪಾಂಡುರಂಗ ಉಪ್ಪಾರ, ಮೀರು ನರೊನಿ, ನೀಲಕಂಠ ಮೆಡೆಗಾರ, ಶಿವಾನಂದ ಹೂಗಾರ, ಶಶಿಕುಮಾರ ಕೊರೆ, ಸಚೀನ ಪಾಟೀಲ, ಮಂಜುನಾಥ ಕುರಿ, ಅನುರಾಗ ಸಾಲುಂಕಿ ಮಾತನಾಡಿ ಸರಕಾರ ಒಂದು ವಾರದಲ್ಲಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂಬರುವ ದಿನಗಳಲ್ಲಿ ವಿಧಾನಸೌದ ಚಲೋ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ರಮೆಶ ಕಳಸದ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು.
ಇದಕ್ಕೂ ಮೊದಲು ಪೋಲಿಸ್ ನೇಮಕಾತಿಯಲ್ಲಿ ವಯೋಮಿತಿ ಸಡಲಿಕೆ ಹೆಚ್ಚಿಸಲು ಆಗ್ರಹಿಸಿ ನಗರದಲ್ಲಿ ಎಐಡಿವೈಓ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ವಿಜಯಪುರ ನಗರದ ಗ್ರಾಮದೇವತೆ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಗಾಂಧಿಚೌಕ್, ಬಸವೇಶ್ವರರ ಚೌಕ್ ಮೂಲಕ ಜಿಲ್ಲಾಧಿಕಾರಿ ಕಛೇರಿವರೆಗೆ ನಡೆಯಿತು.
ಈ ಪ್ರತಿಭಟನೆಯಲ್ಲಿ ಪಾಲ್ಗೊಂಡ 500ಕ್ಕೂ ಹೆಚ್ಚು ಉದ್ಯೋಗಕಾಂಕ್ಷಿಗಳು ಸರಕಾರದ ಯುವಜನ ವಿರೋಧಿ ನೀತಿಗಳ ವಿರುದ್ಧ ಮತ್ತು ಪೊಲೀಸ್ ವಯೋಮಿತಿ ಹೆಚ್ಚಿಸಬೇಕೆಂದು ಆಗ್ರಹುಸಿ ಘೋಷಣೆಗಳನ್ನು ಹಾಕಿದರು.