ಬೆಂಗಳೂರು: ಶುಕ್ರವಾರ ಮಧ್ಯಾಹ್ನವಷ್ಟೇ ಆದೇಶ ಹೊರಡಿಸಿದ್ದ ರಾಜ್ಯ ಸರಕಾರ ಆ ಆದೇಶಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಆದೇಶವನ್ನು ಹಿಂದಕ್ಕೆ ಪಡೆದಿದೆ.
ಇದೀಗ ಈ ಆದೇಶದ ಬಗ್ಗೆ ಜನಾಕ್ರೋಶದಿಂದ ಪಾರಾಗಲು ಸಿಎಂ ಸೂಚನೆ ಹಿನ್ನೆಲೆಯಲ್ಲಿ ಆದೇಶ ಹಿಂಪಪಡಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಯಾವುದು ಆ ಆದೇಶ?
ರಾಜ್ಯ ಸರಕಾರದ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ವೀಡಿಯೋ ಮಾಡಬಾರದು ಎಂಬ ಆದೇಶವನ್ನು ಸರಕಾರ ಶುಕ್ರವಾರ ಮಧ್ಯಾಹ್ನ ಹೊರಡಿಸಿತ್ತು. ಇದಕ್ಕೆ ಸಾರ್ವಜನಿಕರು, ಪ್ರತಿಪಕ್ಷಗಳು, ನಾನಾ ಸಂಘಟನೆಗಳು ಕಟು ಟೀಕೆ ಮಾಡಿದ ಹಿನ್ನೆಲೆ ಈ ಆದೇಶವನ್ನು ಮಧ್ಯರಾತ್ರಿ ರದ್ದು ಪಡಿಸಲಾಗಿದೆ. ಅಲ್ಲದೇ ಈ ಮುಂಚೆ ಹೊರಡಿಸಲಾಗಿದ್ದ ಆದೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ವಾಪಸ್ ಪಡೆಯಲಾಗಿದೆ.
ಕರ್ನಾಟಕ ರಾಜ್ಯ ನೌಕರರ ಸಂಘ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸರಕಾರಿ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ತೆಗೆಯಬಾರದು ಮತ್ತು ವಿಡಿಯೋ ಮಾಡದಂತೆ ನಿಷೇಧಿಸಿ ಆದೇಶವನ್ನು ಹೊರಡಿಸಲಾಗಿತ್ತು. ಈ ಆದೇಶವನ್ನು ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಮಧ್ಯರಾತ್ರಿಯೇ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.