ವಿಜಯಪುರಛ ಜೀವನ ಶಾಶ್ವತವಲ್ಲ. ವೃತ್ತಿ ಜೀವನ ಮತ್ತು ವೈಯಕ್ತಿಕ ಬದುಕಿನ ಮಧ್ಯೆ ಸಮತೋಲನ ಕಾಪಾಡಿಕೊಂಡಾಗ ಮಾತ್ರ ಯಶಸ್ವಿ ಜೀವನ ಸಾಗಿಸಲು ಸಾಧ್ಯ ಎಂದು ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ ಹೇಳಿದ್ದಾರೆ.
ನಗರದ ಪ್ರತಿಷ್ಠಿತ ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಒಪನ್ ಡೆ ಪ್ರಾಜೆಕ್ಟ್ ಎಕ್ಸಿಬಿಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆಲಸ ಮತ್ತು ವೈಯಕ್ತಿಕ ಜೀವನದ ಮಧ್ಯೆ ಕಾಯ್ದುಕೊಳ್ಳಬೇಕು. ಬಹಳಷ್ಟು ಹೆಸರಾಂತ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿರುವ ವ್ಯಕ್ತಿಗಳು ಒತ್ತಡ, ಖಿನ್ನತೆ, ಕೌಟುಂಬಿಕ ಸಮಸ್ಯೆಗಳು, ವೈಯಕ್ತಿಕ ಜೀವನದಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈಗಿನಿಂದಲೇ ನೀವೆಲ್ಲರೂ ನಿಮ್ಮ ಭವಿಷ್ಯವನ್ನು ಯೋಚಿಸಿ ರೂಪಿಸಿಕೊಳ್ಳಬೇಕು. ಯಶಸ್ಸು ಸಾಂದರ್ಭಿಕವಾಗಿ ಬರುವುದಿಲ್ಲ. ಸತತ ಪ್ರಯತ್ನದಿಂದ ಸಿಗುತ್ತದೆ ಶೈಕ್ಷಣಿಕ ಜೀವನದಲ್ಲಿ ಯಶಸ್ಸು ಸಾಧಿಸಿದ್ದರೂ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಮತೋಲನ ಆಗತ್ಯವಾಗಿದೆ ಎಂದು ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅವರು ಕರೆ ನೀಡಿದರು.
ಕ್ಯಾಂಪಸ್ ಸಿಲೆಕ್ಷನ್ ಆದ ನಂತರ ಜೀವನ ಚಕ್ರ ಇಲ್ಲಿಂದಲೇ ಆರಂಭವಾಗುತ್ತದೆ. ಪ್ರತಿಯೊಬ್ಬರಿಗೆ ಸ್ವಯಂ ಜವಾಬ್ದಾರಿ ಇರಬೇಕು. ಕಾಲೇಜುಗಳಲ್ಲಿ ಓದುವಾಗ ಎಲ್ಲರಿಗೂ ಕೇವಲ ಅಧ್ಯಯನದ ಬಗ್ಗೆ ಮಾತ್ರ ಗಮನ ಇರುತ್ತದೆ. ಆದರೆ, ಪದವಿ ಮುಗಿದ ನಂತರ ಜೀವನದ ಬಗ್ಗೆ ಯೋಜನೆ ರೂಪಿಸಬೇಕಾಗುತ್ತದೆ. ಆಗ ಉತ್ತಮ ನಿರ್ಧಾರ ಕೈಗೊಳ್ಳಬೇಕು. ಏಕೆಂದರೆ ನಾವು ಈವರೆಗೆ ನಡೆದು ಬಂದು ದಾರಿಯನ್ನು ನೋಡಿದರೆ ಒತ್ತಡವಿಲ್ಲದ ಕೆಲಸಗಳಿಲ್ಲ. ಪ್ರತಿಯೊಬ್ಬರಿಗೂ ಅವರ ಕೆಲಸ, ಜೀವನದಲ್ಲಿ ಒತ್ತಡ ಇದ್ದೇ ಇರುತ್ತದೆ. ಆದರೆ, ಅದನ್ನು ನಿಭಾಯಿಸುವ ಕಲೆಯನ್ನು ನಾವು ಕರಗತ ಮಾಡಿಕೊಳ್ಳಬೇಕು. ಸಾಕಷ್ಟು ಸವಾಲನ್ನು ಹೊಂದಿರುವ ಜೀವನದಲ್ಲಿ ಯಶಸ್ಸು ಸಾಧಿಸಲು ಪ್ರತಿದಿನ ನಾವು ಕನಿಷ್ಠ ಒಂದು ಗಂಟೆಯಾದರೂ ನಮ್ಮೋಂದಿಗೆ ನಾವು ಕಳೆಯಬೇಕು. ಮಾಡಿದ ಸರಿ ಮತ್ತು ತಪ್ಪು ಕೆಲಸಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸ್ಥಿತ ಪ್ರಜ್ಞೆ ವ್ಯಕ್ತಿತ್ವವನ್ನು ನಾವು ಬೆಳೆಸಿಕೊಳ್ಳಬೇಕು. ಆಗ ಎಲ್ಲವೂ ಸುಸ್ಥಿತಿಯಲ್ಲಿರುತ್ತದೆ ಎಂದು ಎಸ್ಪಿ ಹೇಳಿದರು.
ಇದು ಮಾಹಿತಿ ಮತ್ತು ತಂತ್ರಜ್ಞಾನದ ಯುಗ. ಯಾರೇ ಆಗಲಿ ಯಾವುದೇ ದೇಶವಾಗಲಿ ಅಥವಾ ವಿಶ್ವವಾಗಲಿ ಮಾಹಿತಿ ಮತ್ತು ತಂತ್ರಜ್ಞಾನವಿಲ್ಲದೆ ಮುಂದೆ ಸಾಗಲು ಸಾಧ್ಯವಿಲ್ಲ. ಈ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳು ದೇಶದ ಭವಿಷ್ಯ ರೂಪಿಸಬಲ್ಲಿರಿ.
ತಮ್ಮ ವಿದ್ಯಾರ್ಥಿ ಜೀವನವನ್ನು ಸ್ಮರಿಸಿದ ಅವರು, ನಾನು ಕೂಡ ಹಳ್ಳಿಯಲ್ಲಿ ಸರಕಾರಿ ಶಾಲೆಯಲ್ಲಿ ಓದಿದ್ದೇನೆ. ಮೈಸೂರಿನಲ್ಲಿ ಪಿಯುಸಿ ಮತ್ತು ಬಿಇ ಓದಿದ್ದೇನೆ. ನಂತರ ಐಐಎಸ್‌ಸಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಈ ಸಂದರ್ಭದಲ್ಲಿ ನನ್ನ ಜೊತೆ ಕಲಿತ ಒಟ್ಟು 20 ವಿದ್ಯಾರ್ಥಿಗಳಲ್ಲಿ ನಾನೊಬ್ಬ ಹೊರತು ಪಡಿಸಿ ಉಳಿದವರೆಲ್ಲರೂ ವಿದೇಶದಲ್ಲಿ ಉತ್ತಮ ಸಂಬಳದ ಕೆಲಸಕ್ಕೆ ಸೇರಿದರು. ನನಗೆ ವಿದೇಶದಿಂದ ಆಫರ್ ಬಂದರೂ ಕೂಡ ತಿರಸ್ಕರಿಸಿ ನನ್ನ ದೇಶ, ನನ್ನ ರಾಜ್ಯದಲ್ಲಿ ಸೇವೆ ಸಲ್ಲಿಸಬೇಕು ಎಂಬ ಕಾರಣದಿಂದ ಇಲ್ಲಿಯೇ ಮೊದಲಿಗೆ ಸರಕಾರಿ ಸೇವೆಗೆ ಸೇರಿ ಎಂಜಿನಿಯರ್ ಆಗಿ ಕೆಲಸ ಮಾಡಿದೆ. ನಂತರ ಸಿವಿಲ್ ಸರ್ವಿಸಸ್ ಕಡೆಗೆ ಗಮನ ಹರಿಸಿ ಮೂರನೇ ಪ್ರಯತ್ನದಲ್ಲಿ ಐಪಿಎಸ್ ಪಾಸು ಮಾಡಿ ಈಗ ನನ್ನ ತವರು ರಾಜ್ಯದಲ್ಲಿಯೇ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಎಚ್. ಡಿ. ಆನಂದ ಕುಮಾರ ತಿಳಿಸಿದರು.
ಯು ಪಿ ಎಸ್ ಸಿ ಪರೀಕ್ಷೆ ಪಾಸು ಮಾಡಲು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು. ಇದೊಂದು ಹೆಮ್ಮೆಯ ಸೇವೆಯಾಗಿದೆ. ದೇಶದಲ್ಲಿ 125 ಕೋಟಿ ಜನಸಂಖ್ಯೆಯಿದೆ. ಆರು ಸಾವಿರ ಐಎಎಸ್ ಮತ್ತು ನಾಲ್ಕು ಐಪಿಎಸ್ ಅಧಿಕಾರಿಗಳಿದ್ದಾರೆ. ಒಟ್ಟು ಸುಮಾರು 10 ಸಾವಿರ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಇಡೀ ದೇಶವನ್ನು ಮುನ್ನಡೆಸುತ್ತಿದ್ದಾರೆ. ಇದು ಹೆಮ್ಮೆಯ ಸೇವೆ. ಈ ಮೂಲಕವೂ ಜನಸೇವೆ ಮಾಡಲು ಸಾಧ್ಯ ಎಂದು ಅವರು ತಿಳಿಸಿದರು.
ಆದರೆ, ಸಾರ್ವಜನಿಕ ಸೇವೆ ಮಾಡುವಾಗ ಮಾನಸಿಕ ಮತ್ತು ದೈಹಿಕ ಆರೋಗ್ಯಗಳ ಬಗ್ಗೆ ಪ್ರತಿಯೊಬ್ಬರಿಗೂ ಅರಿವಿರಬೇಕು. ಮಾನಸಿಕ ಸ್ಥಿತಿಯ ಮೇಲೆ ನಮ್ಮ ದೈಹಿಕ ಆರೋಗ್ಯ ನಿಂತಿದೆ. ಮಾನಸಿಕ ಸ್ಥಿತಿ ಎಲ್ಲ ರೋಗಗಳಿಗೆ ಮೂಲವಾಗಿದೆ. ನಮ್ಮೋಂದಿಗೆ ನಾವು ಕಳೆದಾಗ ಮಾನಸಿಕ ಆರೋಗ್ಯ ಸದೃಢವಾಗಿರಲು ಸಾಧ್ಯ. ಇದರಿಂದ ನಿರ್ಣಯ, ಭವಿಷ್ಯ ಉತ್ತಮವಾಗಿರಲು ಸಾಧ್ಯವಾಗಿರುತ್ತದೆ. ನಮ್ಮ ಗುರಿಗಳ ಮೇಲೆ ನಾವು ನಂಬಿಕೆ ಇಟ್ಟರೆ ನಾವು ಕಾಣುವ ಕನಸುಗಳು ನನಸಾಗುತ್ತವೆ. ಮನುಷ್ಯನಿಗೆ ಬಡತನ ಇರಬಹುದು. ಮನಸ್ಸಿಗೆ ಬಡತನ ಇರಬಾರದು. ಶ್ರೀಮಂತಿಕೆ ಮನಸ್ಸಿಗೆ ಇರಬಹುದು. ಮನುಷ್ಯನಿಗೆ ಇರಬಾರದು ಎಂಬ ಮಾತು ಸತ್ಯಾಂಶದಿಂದ ಕೂಡಿದೆ. ತಂದೆ-ತಾಯಿಗಳು ಕಷ್ಟಪಟ್ಟು ನಮ್ಮನ್ನು ಸಾಕಿ ಸಲಹಿಸುತ್ತಾರೆ. ಅವರನ್ನು ಕಡೆಗಣಿಸಬಾರದು. ಸಾವು ಯಾವಾಗ ಬರುತ್ತೋ ಯಾರಿಗೆ ಗೊತ್ತು? ಹೀಗಾಗಿ ಪ್ರತಿಯೊಂದು ಕ್ಷಣವನ್ನು ನಾವು ಅನುಭವಿಸಬೇಕು. ಪ್ರತಿ ಕ್ಷಣಕ್ಕೂ ಮಹತ್ವ ನೀಡಬೇಕು. ಈಗ ಅಂತಿಮ ವರ್ಷದಲ್ಲಿರುವ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಿರಲಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಎಸ್ಪಿ ಎಚ್. ಡಿ. ಆನಂದ ಕುಮಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೇ, ದೇಶದ ನಾನ ಪ್ರತಿಷ್ಠಿತ ಕಂಪನಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾಲೇಜಿನ ಹಳೆಯ ವಿದ್ಯಾರ್ಥಿಗಳನ್ನೂ ಗೌರವಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಡಾ. ಶಶಿಕಾಂತ ಚೊಳಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಆಸೀಫ್ ಮೊಮಿನ್ ಪರಿಚಯಿಸಿದರು. ಉಪಪ್ರಾಚಾರ್ಯೆ ಡಾ. ಗೀತಾಂಜಲಿ ಪಾಟೀಲ ವಂದಿಸಿದರು. ಪ್ರೊ. ಕಿರಣ ಪಾಟೀಲ ನಿರೂಪಿಸಿದರು.
ಬಳಿಕ ಎಸ್ಪಿ ಡಾ. ಎಚ್. ಡಿ. ಆನಂದ ಕುಮಾರ ನಾನಾ ವಿಭಾಗಗಳಿಗೆ ತೆರಳಿ ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳು ತಯಾರಿಸಿರುವ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.