Statues Procession: ಬಸವ ನಾಡಿನಲ್ಲಿ ಅದ್ದೂರಿಯಾಗಿ ನಡೆದ ಸಪ್ತ ಮಹಾತ್ಮರ ಪ್ರತಿಮೆಗಳ ಮೆರವಣಿಗೆ- ಶಾಸಕ ಯತ್ನಾಳ ಭಾಗಿ

ವಿಜಯಪುರ: ಬಸವ ನಾಡು ವಿಜಯಪುರ ನಗರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಸಪ್ತ ಮಹಾತ್ಮರ ಮೂರ್ತಿಗಳ ಭವ್ಯ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.  ಪ್ರಮುಖ ರಸ್ತೆಯಾದ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಎಲ್ಲಿ ನೋಡಿದರೂ ಜನಸಾಗರ ಕಂಡು ಬಂದಿತು.  ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೋಂಡ ಜನರು ಅಭೂತಪೂರ್ವ ಮೆರವಣಿಗೆಗೆ ಸಾಕ್ಷಿಯಾದರು. 

ನಗರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಸಪ್ತ ಮಹಾತ್ಮರ ಮೂರ್ತಿಗಳ ಭವ್ಯ ಮೆರವಣಿಗೆ ನಡೆಯಿತು

ಡೊಳ್ಳು ಕುಣಿತ, ಲಂಬಾಣಿ ನೃತ್ಯ ಸೇರಿದಂತೆ ನಾನಾ ಜನಪದ ಕಲಾ ತಂಡಗಳ ಸಾಂಸ್ಕೃತಿಕ ಶ್ರೀಮಂತಿಕೆಯ ಮಧ್ಯದಲ್ಲಿ ಮಹಾತ್ಮರ ಮೂರ್ತಿಗಳನ್ನು ಹೊತ್ತ ಸಾಲಂಕೃತ ವಾಹನಗಳು ಸಾಗಿದ್ದು ಗಮನ ಸೆಳೆಯಿತು.  ಈ ಕಾರ್ಯಕ್ರಮದ ರೂವಾರಿ ಮತ್ತು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಂಪೂರ್ಣ ಮೆರವಣಿಗೆಯಲ್ಲಿ ಪಾಲ್ಗೋಂಡರು.  ಮಹಾತ್ಮರಿಗೆ ಜೈಕಾರ ಹಾಕಿದ ಅವರು ಸಾರ್ವಜನಿಕರಿಗೆ ಕೈ ಮುಗಿಯುತ್ತ ಸಾಗಿದರು.

ವಿಜಯಪುರ ನಗರದ ಸೆಟಲೈಟ್ ಬಸ್ ನಿಲ್ದಾಣದಿಂದ ಆರಂಭವಾದ ಭವ್ಯ ಮೆರವಣಿಗೆ ಜೋರಾಪುರ ಪೇಟೆ, ಶಿವಾಜಿ ಚೌಕ, ಸರಾಫ್ ಬಜಾರ್, ಶ್ರೀ ರಾಮ ಮಂದಿರ ರಸ್ತೆ, ಹೆಗಡೆವಾರ್ ಕೌಕ್ ಮೂಲಕ ಅಮೀರ್ ಟಾಕೀಸ್, ಬಂಜಾರಾ ಆಸ್ಪತ್ರೆ, ಅಟಲ ಬಿಹಾರಿ ವಾಜಪೇಯಿ ರಸ್ತೆ, ಕಿರಾಣಾ ಬಜಾರ್ ಮೂಲಕ ಸಂಚರಿಸಿ ವಿಜಯಪುರ ನಗರ ದೇವತೆ ಶ್ರೀ ಸಿದ್ದೇಶ್ವರ ದೇವಸ್ಥಾನ ವರೆಗೆ ನಡೆಯಿತು.  ಎಲ್ಲಿ ನೋಡಿದರೂ ಕೇಸರಿ ಧ್ವಜ, ಕೇಸರಿ ಶಲ್ಯ ಧರಿಸಿದ ಯುವಕರು ಗುಂಪು ಗುಂಪಾಗಿ ಕಾಣಿಸಿಕೊಂಡರು.  ನಾನಾ ಉದ್ಘೋಷಗಳ ನಡುವೆ ಮೆರವಣಿಗೆ ಗಮನ ಸೆಳೆಯಿತು.

ಮೆರವಣಿಗೆಯುದ್ಧಕ್ಕೂ ಹಲವಾರು ಭಕ್ತಿ ಗೀತೆಗಳು, ಮಹಾತ್ಮರ ಉದ್ಘೋಷಗಳು ಮುಗಿಲು ಮುಟ್ಟಿದ್ದವು.  ಇದಕ್ಕೆ ಇಂಬು ನೀಡಿದಂತೆ ಡೊಳ್ಳಿನ ನಿನಾದ, ನಾನಾ ಸಂಗೀತ ವಾದ್ಯಗಳ ಸಮ್ಮಿಲನ ಮೆರವಣಿಗೆಯ ಕಳೆಯನ್ನು ಮತ್ತಷ್ಟು ಹೆಚ್ಚಿಸಿತ್ತು.

ಸಾಲಂಕೃತ ವಾಹನಗಳಲ್ಲಿ 15 ಅಡಿ ಎತ್ತರದ ಮಹಾರಾಣಾ ಪ್ರತಾಪ್ ಸಿಂಹ್ ಅವರ ಪ್ರತಿಮೆ, ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಪುತ್ಥಳಿ, ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರಕರ, ಶ್ರೀ ಸ್ವಾಮಿ ವಿವೇಕಾನಂದರ, ರಾಜಮಾತೆ ಅಹಲ್ಯಬಾಯಿ ಹೋಳ್ಕರ, ಲಾಲ್ ಬಹಾದ್ದೂರ ಶಾಸ್ತ್ರಿ ಮತ್ತು ನೇತಾಜಿ ಸುಭಾಷ ಚಂದ್ರ ಭೋಸ್ ಅವರ ಪ್ರತಿಮೆಗಳ ಭವ್ಯ ಮೆರವಣಿಗೆ ನಡೆಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಕ್ಷತ್ರೀಯ ಸಮಾಜ ಒಕ್ಕೂಟದ ಅಧ್ಯಕ್ಷ ಉದಯ ಸಿಂಗ್, ವಿಜಯಪುರ ಮಹಾನಗರ ಪಾಲಿಕೆ ಮಾಜಿ ಸದಸ್ಯ ಪರಶುರಾಮ ರಜಪೂತ, ತಾನಾಜಿ ಜಾಧವ, ಶ್ರೀ ಸಿದ್ದೇಶ್ವರ ಸಂಸ್ಥೆ ಚೇರಮನ್ ಬಸಯ್ಯ ಹಿರೇಮಠ, ಉಪಾಧ್ಯಕ್ಷ ಸಂ. ಗು. ಸಜ್ಜನ, ಸಿದ್ಧಸಿರಿ ಸೌಹಾರ್ದ ಸಹಕಾರಿ ನಿರ್ದೇಶಕ ಜಗದೀಶ ಕ್ಷತ್ರಿ, ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜೇಶ ದೇವಗಿರಿ, ಪ್ರೇಮಾನಂದ ಬಿರಾದಾರ, ಅಖಿಲ ಭಾರತ ವೀರಶೈವ ಮಹಾಸಭೆ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಉಪ್ಪಿನ ಮುಂತಾದವರು ಈ ಮೆರವಣಿಗೆಯಲ್ಲಿ ಪಾಲ್ಗೋಂಡು ಗಮನ ಸೆಳೆದರು.

One Response

Leave a Reply

ಹೊಸ ಪೋಸ್ಟ್‌