ವಿಜಯಪುರ: ಕಳೆದ 11 ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವ ಮೂಲಕ ಬಸವ ನಾಡಿನ ಪೊಲೀಸರು ಗಮನ ಸೆಳೆದಿದ್ದಾರೆ.
24.07.2011ರಲ್ಲಿ ಆಂಧ್ರಪ್ರದೇಶದ ಶ್ರೀಶೈಲಂ ಕಾಡಿನಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪೊಲೀಸರು ಭೇದಿಸಿದ್ದಾರೆ. ಅಲ್ಲದೇ, ಈ ಪ್ರಕರ, ಸಂಬಂಧ ಓರ್ವ ದೈಹಿಕ ಶಿಕ್ಷಣ ನಿರ್ದೇಶಕ ಸೇರಿ ಮೂವರನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.
ಈ ಕೊಲೆಯಲ್ಲಿ ಮಹಿಳೆತ ಪತಿಯೇ ಶಾಮೀಲಾಗಿದ್ದು ಗಮನಾರ್ಹವಾಗಿದೆ. ಕೊಲೆಯಾದ ಪ್ರಿಯಾಂಕ ಉರ್ಫ್ ದಾನೇಶ್ವರಿ ಇವಳ ಪತಿ ಮುದ್ದೇಬಿಹಾಳ ಎಂಜಿವಿಸಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಚ್. ಜಿ. ಪಾಟೀಲ, ಆತನ ಸಹೋದರ ಎಸ್. ಜಿ. ಪಾಟೀಲ, ತಂಗಡಗಿ ಗ್ರಾಮದ ಕಾರು ಚಾಲಕ ಉಮೇಶ ಕಮಲಾಪೂರ ಬಂಧಿತ ಆರೋಪಿಗಳಾಗಿದ್ದಾರೆ.
ಮುದ್ದೇಬಿಹಾಳ ಸಿಪಿಐ ಆನಂದ ವಾಗ್ಮೋಡೆ ನೇತೃತ್ವದಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ
ಎಚ್. ಜಿ. ಪಾಟೀಲ ನಿಡಗುಂದಿ ತಾಲೂಕು ರಾಜನಾಳದ ಪ್ರಿಯಾಂಕಾ ಉರ್ಫ್ ದಾನೇಶ್ವರಿ ಮಮದಾಪೂರ ಎಂಬಾಕೆಯೊಂದಿಗೆ 2008 ರಲ್ಲಿ ವಿಜಯಪುರದಲ್ಲಿ ಮದುವೆಯಾಗಿದ್ದರು. ಗಂಡ ಹೆಂಡತಿ ನಡುವೆ ಸಂಬಂಧ ಸರಿ ಇರಲಿಲ್ಲ. ಆಕೆ ಬೇರೊಬ್ಬರೊಂದಿಗೆ ಸಂಬಂಧವಿರುವ ಬಗ್ಗೆ ಗಂಡನಿಗೆ ಸಂಶಯವಿತ್ತು. ಹೆಂಡತಿಯ ನಡತೆಯಿಂದ ಬೇಸತ್ತು ಆಕೆಯನ್ನು ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಹೋಗಿ ಬರುವುದಾಗಿ ನಂಬಿಸಿ 24.7.2011ರಂದು ಕರೆದುಕೊಂಡು ಹೋಗಿದ್ದರು. ದರ್ಶನ ಮುಗಿಸಿ ಮರಳಿ ಬರುವಾಗ ಕಾರಿನಲ್ಲಿಯೇ ಪ್ಲಾಸ್ಟಿಕ್ ವೈರನಿಂದ ಆಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿ ಅರಣ್ಯದಲ್ಲಿ ಎಸೆದು ಬಂದಿದ್ದರು. ನಂತರ ಆಕೆ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದರು.
ಈ ಮಧ್ಯೆ ಆಂಧ್ರ ಪ್ರದೇಶದ ಶ್ರೀಶೈಲಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಶವ ಪತ್ತೆ ಪ್ರಕರಣ ದಾಖಲಾಗಿತ್ತು. ಈ ಕುರಿತು ಮಹಿಳೆಯ ತಂದೆ ಬಸವರಾಜ ಮಮದಾಪೂರ ನೀಡಿದ್ದ ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದರು.