ವಿಜಯಪುರ: ರಾಜ್ಯ ಹಾಗೂ ಕೇಂದ್ರ ಸರಕಾರಗಳ ಮಹತ್ವದ ಕಾರ್ಯಕ್ರಮ ಯೋಗಾಥಾನ್-2022ಕ್ಕೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ನಗರದಲ್ಲಿ ಚಾಲನೆ ನೀಡಿದರು.
ನಗರದ ಡಾ. ಬಿ. ಎನ್. ಎಂ ಆಯುರ್ವೇದ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಯೋಗವು ನಮ್ಮ ದೇಶದ ಪರಂಪರೆ, ಸಂಸ್ಕೃತಿ ಮತ್ತು ಹಿರಿಮೆಯಾಗಿದೆ. ಪುರಾತನ ಕಾಲದಿಂದಲೂ ಯೋಗ ಪದ್ಧತಿಯನ್ನು ಅಳವಡಿಸಿಕೊಂಡು ಬಂದಿದ್ದೇವೆ. ಯೋಗ ಮಾಡುತ್ತಿದ್ದ ಋಷಿಮುನಿಗಳು ಶತಾಯುಷಿಗಳಾಗಿ ಬದುಕಿ ನಮಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗವನ್ನು ಹೆಚ್ಚು ಪ್ರಚಲಿತಗೊಳಿಸುವ ಪ್ರಯತ್ನ 2015ರಲ್ಲಿ ಆರಂಭವಾಯಿತು. ನಮ್ಮ ಪ್ರಧಾನ ಮಂತ್ರಿಗಳ ಆಶಯದಂತೆ, ಪ್ರತಿ ವರ್ಷ ಜೂ. 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಣೆ ಮಾಡುವ ಪ್ರಸ್ತಾವನೆಗೆ ವಿಶ್ವಸಂಸ್ಥೆಯಲ್ಲಿ ಎಲ್ಲ ದೇಶಗಳು ಸಹಮತಿ ಸೂಚಿಸಿದ್ದರಿಂದ 2015 ರಿಂದ ಜೂ. 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುತ್ತ ಬಂದಿದ್ದೇವೆ. ಯೋಗಾಥಾನ್ ಕಾರ್ಯಕ್ರಮವನ್ನು ದೇಶದ 75 ಐತಿಹಾಸಿಕ ಸ್ಥಳಗಳಲ್ಲಿ ನಡೆಸಲು ಕೇಂದ್ರ ಸರಕಾರವು ನಿರ್ದೇಶನ ನೀಡಿತ್ತು. ಅದರಂತೆ ರಾಜ್ಯದ ನಾಲ್ಕು ಸ್ಥಳಗಳ ಪೈಕಿ ವಿಜಯಪುರದ ಗೋಳಗುಮ್ಮಟದಲ್ಲಿಯೂ ಕಾರ್ಯಕ್ರಮ ನಡೆಸಿದ್ದು ಜಿಲ್ಲೆಯ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ. ಯೋಗದಲ್ಲಿ ಜನತೆಯನ್ನು ಸೇರಿಸಲು ಜಿಲ್ಲೆಗೆ ನಿಗದಿಪಡಿಸಿದ ಗುರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಸೇರಿಸಿ ಯಶಸ್ವಿಗೊಳಿಸಿದ್ದೇವೆ ಎಂದು ಡಿಸಿ ತಿಳಿಸಿದರು.
ಆ.27ರಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ ಮತ್ತು ಆ. 28ರಂದು ಗಿನ್ನೀಸ್ ಬುಕ್ ಆಫ್ ರೆಕಾರ್ಡ್ ಗಾಗಿ ಎರಡು ಬೃಹತ್ ಕಾರ್ಯಕ್ರಮಗಳನ್ನು ರಾಜ್ಯ ಸರಕಾರದ ಚಿಂತನೆಯ ಮೇರೆಗೆ ವಿಜಯಪುರ ನಗರದ ಸೈನಿಕ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದೆ. ಈ ಕುರಿತು ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಿ ಸಿದ್ಧತೆ ನಡೆಸಿದ್ದೇವೆ. ತಾವು ಈಗಾಗಲೇ ಸೂಚನೆ ನೀಡಿದಂತೆ ಪ್ರತಿ ರವಿವಾರ ಎಲ್ಲಾ ಶಾಲೆ, ಕಾಲೇಜುಗಳಲ್ಲಿ ನಾನಾ ಪ್ರಕಾರದ ಯೋಗಗಳ ಬಗ್ಗೆ ತಿಳಿಸುವ, ತರಬೇತಿಗಳು ನಡೆಯುತ್ತಿವೆ ಎಂದು ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ಜಿ. ಲೋಣಿ ಪ್ರಾಸ್ತಾವಿಕ ಮಾತನಾಡಿದರು.
ಈ ಸಮಾರಂಭದಲ್ಲಿ ಎಎಸ್ಪಿ ಡಾ. ರಾಮ್ ಲಕ್ಷ್ಮಣ ಅರಸಿದ್ದಿ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ. ಅನುರಾಧ ಎಲ್. ಚಂಚಲಕರ, ಸೈನಿಕ ಶಾಲೆಯ ಪ್ರಾಚಾರ್ಯೆ ಪ್ರತಿಭಾ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಾಹುಲ್ ಡೊಂಗ್ರೆ, ಎನ್ ಎಸ್ ಎಸ್ ಅಧಿಕಾರಿ ಡಾ. ಬಿ. ಎಂ. ಕೊರಬು, ಆಯುಷ್ ಟಿವಿ ನೋಡಲ್ ಅಧಿಕಾರಿ ಶ್ರೀನಿವಾಸ ಗುರುಬಲ, ಯೋಗ ಶಿಕ್ಷಕಿ ಲಕ್ಷ್ಮಿ ತದಳಗಿ ಮುಂತಾದವರು ಉಪಸ್ಥಿತರಿದ್ದರು.
ನಾಗೂರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಕೆ. ಬಿ. ನಾಗೂರ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ. ಶರಣಬಸವ ನುಚ್ಚಿ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ 800ಕ್ಕಿಂತ ಹೆಚ್ಚು ಯೋಗಪಟುಗಳು ಉಪಸ್ಥಿತರಿದ್ದರು.