Money Siddheshwar Swamiji: ಹಣವನ್ನು ಪ್ರೀತಿಸಿ ಆದರೆ ದುರುಪಯೋಗ ಪಡಿಸಿಕೊಳ್ಳಬೇಡಿ- ಶ್ರೀ ಸಿದ್ದೇಶ್ವರ ಸ್ವಾಮೀಜಿ

ವಿಜಯಪುರ: ಹಣವನ್ನು ಪ್ರೀತಿಸಿ. ಆದರೆ, ದುರುಪಯೋಗ ಪಡಿಸಿಕೊಳ್ಳಬೇಡಿ ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ಶ್ರೀ ಪರಮಾನಂದ ಪತ್ತಿನ ಸಹಕಾರಿ ಸಂಘದ 5ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ನಾಗಠಾಣ ಗ್ರಾಮದ ಶ್ರೀ ಪರಮಾನಂದ ಪತ್ತಿನ ಸಹಕಾರಿ ಸಂಘದ 5ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು

 

ಪ್ರತಿಯೊಂದು ಕುಟುಂಬವೂ ಸಹಿತ ಸಹಕಾರಿ ಸಂಘಗಳಿದ್ದಂತೆ. ತಂದೆ, ತಾಯಿ, ಮಕ್ಕಳು ಸೇರಿದಂತೆ ಸಂಘವನ್ನು ಮುನ್ನಡೆಸಿದಂತೆ ಸಹಕಾರಿ ಸಂಘಗಳ ಅಧ್ಯಕ್ಷ, ಉಪಾಧ್ಯಕ್ಷ ಸದಸ್ಯರುಗಳು ತಮ್ಮ ಕುಟುಂಬದಂತೆ ಪತ್ತಿನ ಸಹಕಾರಿ ಸಂಘವನ್ನು ನಿರ್ವಹಿಸಬೇಕು. ಒಳ್ಳೆಯ ಮಾತುಗಳು ಕುಟುಂಬದ ಜೀವಾಳವಿದ್ದಂತೆ. ಈ ಮಾತುಗಳಿಗೆ ಹಣದ ಅವಶ್ಯಕತೆ ಇಲ್ಲ. ಹಣವನ್ನು ಪ್ರೀತಿಸಿ ಆದರೆ ದುರುಪಯೋಗ ಪಡಿಸಿಕೊಳ್ಳಬೇಡಿ ಎಂದು ಎಂದು ಅವರು ಕಿವಿಮಾತು ಹೇಳಿದರು.

ಪಾಶ್ಚಿಮಾತ್ಯ ತತ್ವಜ್ಞಾನಿಯೋರ್ವ ನಗುವೇ ಜೀವನ, ನಗುವೇ ಸ್ವರ್ಗ ಎಂದು ಹೇಳಿದ್ದಾನೆ. ಮನಸ್ಸು ಒಳ್ಳೆಯದಾಗಿದ್ದರೆ ಮಾತ್ರ ಸಂತಸದ ನಗು ಸಾಧ್ಯ. ಮನಸ್ಸು ಕೆಟ್ಟದ್ದಾಗಿದ್ದರೆ ದುಃಖಗಳು ತಾಂಡವಾಡುತ್ತವೆ. ಆದ್ದರಿಂದ ಮನಸ್ಸಿನಲ್ಲಿ ಆನಂದದ ಬ್ಯಾಂಕ್ ಸ್ಥಾಪಿಸಿ, ಜೀವನಪೂರ್ತಿ ಸಂತೋಷದಿಂದಿರಿ. ಮನುಷ್ಯನ ಹಸಿವನ್ನು ಇಂಗಿಸಿ. ಸಂತೋಷಕ್ಕೆ ಕಾರಣವಾಗುವ ಅನ್ನ, ನೀರುಗಳೇ ದೇವರು. ಯಾವುದೇ ಸಭೆ ಸಮಾರಂಭಗಳು ಸ್ವರ್ಗದಲ್ಲಿ ನಡೆಯಲಿ ಅಥವಾ ಭೂಮಂಡಲದಲ್ಲಿ ನಡೆಯಲಿ. ಅಲ್ಲಿ ಅನ್ನ, ನೀರು ಹೊರತುಪಡಿಸಿ ಯಾವುದೇ ಸಮಾರಂಭಗಳಿಲ್ಲ. ಅನ್ನ ನೀರಿಗಿಂತಲೂ ಜಗತ್ತಿನಲ್ಲಿ ಮಿಗಿಲಾದದ್ದು ಬೇರೊಂದಿಲ್ಲ ಎಂದು ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಬಸವನ ಬಾಗೇವಾಡಿ ಶಾಸಕ ಮತ್ತು ವಿಜಯಪುರ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಶಿವಾನಂದ ಪಾಟೀಲ ಮಾತನಾಡಿ, ಈ ಚಿಕ್ಕ ಸಂಘ ಕೇವಲ ಐದು ವರ್ಷಗಳಲ್ಲಿ ಗ್ರಾಮದ ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಿದೆ. ಈ ಮೂಲಕ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರನ್ನು ಆಕರ್ಷಿತರಾಗಿ ಮಾಡಿದೆ ಎಂದು ಶ್ಲಾಘಿಸಿದರು.

ಗುರುದೇವಾಶ್ರಮ ಕಾತ್ರಾಳದ ಅಮೃತಾನಂದ ಸ್ವಾಮಿಗಳು ಮಾತನಾಡಿ, ನಾಗಠಾಣ ಭಕ್ತಿಯ ಧಾಮ. ಮೇಲಿಂದ ಮೇಲೆ ಸಿದ್ದೇಶ್ವರ ಶ್ರೀ ಗಳ ರವರ ಆಗಮನದೊಂದಿಗೆ ಆಶೀರ್ವಚನ ನಡೆಯಲಿ. ಕಡುಬಡುವರನ್ನು ಗುರುತಿಸಿ ಆರ್ಥಿಕ ಸಹಕಾರವನ್ನು ನೀಡುವುದರೊಂದಿಗೆ ಈ ಸಂಘ ಇನ್ನೂ ಹೆಚ್ಚು ಬೆಳೆಯಲಿ ಎಂದು ಶುಭ ಹಾರೈಸಿದರು.

ಉದಯೇಶ್ವರ ಮಠ ನಾಗಠಾಣದ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಸಂಘಗಳು ಸಾಕಷ್ಟು ಜನ್ಮ ತಾಳುತ್ತವೆ.‌‌ ಬೆಳೆಯುತ್ತವೆ. ಆದರೆ, ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುವಲ್ಲಿ ವಿಫಲವಾಗುತ್ತವೆ. ಇವುಗಳಿಗೇಲ್ಲ ಪರ್ಯಾಯವೆಂಬಂತೆ ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ನಾಗಠಾಣ ಕಲ್ಲಯ್ಯಾರೂಢ ಮಠ ಗುರುದೇವಾಶ್ರಮದ ಪ್ರಜ್ಞಾನಂದ ಸ್ವಾಮಿಗಳು, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ, ಸಂಘದ ಅಧ್ಯಕ್ಷರಾದ ಪ್ರಭುಲಿಂಗ ಹಂಡಿ, ಪ್ರಕಾಶ ಹಂಡಿ ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ‌ ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಂತೋಷ ಬಂಡೆ ವಂದಿಸಿದರು. ‌ಶಿಕ್ಷಕ ಪ್ರಮೋದ ಮೆಂಚ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌