ವಿಜಯಪುರ: ಪ್ರತಿಪಕ್ಷಗಳು ಉಚಿತ ಯೋಜನೆಗಳನ್ನು ಘೋಷಣೆ ಮಾಡಿ ಜನರ ಬಲವನ್ನು ಕುಂದಿಸುವ ಕೆಲಸ ಮಾಡುತ್ತಿವೆ. ಆದರೆ, ಬಿಜೆಪಿ ಮಾತ್ರ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಗುರಿ ಹೊಂದಿದೆ ಎಂದು ಬಿಜೆಪಿ ವಿಜಯಪುರ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಹೇಳಿದ್ದಾರೆ.
ವಿಜಯಪುರದಲ್ಲಿ ನಡೆದ ಬಿಜೆಪಿ ಜಿಲ್ಲಾ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತವಾಡಿದರು.
ಬಿಜೆಪಿ ಹೊರತಾದ ರಾಜಕೀಯ ಪಕ್ಷಗಳು ಆಳ್ವಿಕೆ ನಡೆಸಿದ ರಾಜ್ಯಗಳಲ್ಲಿ ಕೇವಲ ಚುನಾವಣೆ ದೃಷ್ಠಿಕೋನದಿಂದ ಉಚಿತ ಯೋಜನೆಗಳ ದುಂಬಾಲು ಬಿದ್ದು ಆ ರಾಜ್ಯಗಳನ್ನು ದಿವಾಳಿ ಅಂಚಿಗೆ ತಲುಪಿಸುತ್ತಿವೆ. ಆದರೆ, ಬಿಜೆಪಿ ಮಾತ್ರ ಬಿಜೆಪಿ ಜನಹಿತ ಕಾಪಾಡುತ್ತ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಗುರಿ ಹೊಂದಿದೆ. ಉಚಿತ ಯೋಜನೆ ಘೋಷಣೆ ಮಾಡಿ ಜನರ ಬಲವನ್ನು ಕುಂದಿಸುವ ಮನೋಭಾವ ಬಿಜೆಪಿಯಲ್ಲಿ ಇಲ್ಲ ಎಂದು ಅವರು ಹೇಳಿದರು.
ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ತೆಲಂಗಾಣ ಹೀಗೆ ಪ್ರತಿಪಕ್ಷಗಳು ಆಡಳಿತ ನಡೆಸುತ್ತಿರುವ ಸರಕಾರಗಳು ಲಕ್ಷಾಂತರ ಕೋಟಿ ರೂಪಾಯಿ ಸಾಲದ ಹೊರೆ ಹೊಂದಿವೆ. ಅರವಿಂದ ಕೇಜ್ರಿವಾಲ್ ನೇತೃತ್ವದ ಸರಕಾರ ಉಚಿತಗಳ ಯೋಜನೆಗಳ ಬೆನ್ನು ಹತ್ತಿದ್ದು ಆ ರಾಜ್ಯವನ್ನು ಆರ್ಥಿಕ ದಿವಾಳಿತನಕ್ಕೆ ತಲುಪಿಸುತ್ತಿದೆ ಎಂದು ಅವರು ಆರೋಪಿಸಿದರು.
ಶ್ರೀಲಂಕಾ ಸೇರಿದಂತೆ ನಾನಾ ದೇಶಗಳು ಆರ್ಥಿಕವಾಗಿ ದಿವಾಳಿಯಾಗಿವೆ. ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ಜಾರಿಗೆ ತರಲಾದ ಜಿಎಸ್‍ಟಿ ವ್ಯವಸ್ಥೆ ಭಾರತ ಆರ್ಥಿಕವಾಗಿ ಸಶಕ್ತೀಕರಣವಾಗುವಂತೆ ಮಾಡಿದೆ. ಕೋವಿಡ್ ಪ್ರತಿಬಂಧಕ ಲಸಿಕೆ, ಜಿಎಸ್‍ಟಿ ಹೀಗೆ ಮೋದಿಜಿ ಅವರು ಏನೇ ಯೋಜನೆ ರೂಪಿಸಿದರೂ ಪ್ರತಿಪಕ್ಷಗಳು ಹತಾಶೆಯಿಂದ ಕೇವಲ ಟೀಕೆ ಮಾಡುತ್ತಾ ಕುಳಿತುಕೊಂಡಿವೆ ಎಂದು ಆರ್. ಎಸ್. ಪಾಟೀಲ ಕೂಚಬಾಳ ಆರೋಪಿಸಿದರು.
ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮಾತನಾಡಿ, ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುವ ವಾತಾವರಣ ಸೃಷ್ಟಿಯಾಗಬೇಕು. ನಿಗಮ ಮತ್ತು ಮಂಡಳಿ, ಸ್ಥಳೀಯ ಸಂಸ್ಥೆಗಳಿಗೆ ನಾಮನಿರ್ದೇಶನ ಮಾಡುವ ಅವಕಾಶಗಳಿಂದ ಸಾಕಷ್ಟು ಕಾರ್ಯಕರ್ತರು ವಂಚಿತರಾಗಿದ್ದಾರೆ. ಆದರೂ ಕಾರ್ಯಕರ್ತ ಬಂಧುಗಳಲ್ಲಿ ಪಕ್ಷನಿಷ್ಠೆ ಕಿಂಚಿತ್ತೂ ಕಡಿಮೆಯಾಗಿಲ್ಲ. ಇದು ಬಿಜೆಪಿಯ ಕಾರ್ಯಕರ್ತರ ಶಕ್ತಿ. ಬಿಜೆಪಿ ಹಿರಿಯ ನಾಯಕರು ಕಾರ್ಯಕರ್ತರಿಗೆ ಯಾವ ಅವಕಾಶಗಳು ವಂಚಿತವಾಗದಂತೆ ನೋಡಿಕೊಂಡು ಅವರ ಶ್ರಮಕ್ಕೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕು. ಮುಂಬರುವ ಸ್ಥಳೀಯ ಸಂಸ್ಥೆ, ಜಿ. ಪಂ. ತಾ. ಪಂ. ಚುನಾವಣೆಗಳನ್ನು ಎದುರಿಸಲು ಬಿಜೆಪಿ ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದು ಹೇಳಿದರು.
ಈ ಸಭೆಯಲ್ಲಿ ಮಾಜಿ ಸಂಗಣ್ಣ ಕೆ. ಬೆಳ್ಳುಬ್ಬಿ, ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಬಿಜೆಪಿ ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ, ಬಿಜೆಪಿ ಮುಖಂಡರಾದ ಶಿವರುದ್ರ ಬಾಗಲಕೋಟ, ವಿವೇಕಾನಂದ ಡಬ್ಬಿ, ಮಲ್ಲಮ್ಮ ಜೋಗೂರ, ದಯಾಸಾಗರ ಪಾಟೀಲ, ಡಾ. ಸುರೇಶ ಬಿರಾದಾರ, ಬಸವರಾಜ ಹೂಗಾರ, ಕಾಸುಗೌಡ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.