ವಿಜಯಪುರ: ಮುಂಗಾರು ಆರಂಭವಾದರೆ ಸಾಕು ಬಸವ ನಾಡು ವಿಜಯಪುರದಲ್ಲಿ ಸಾಲು ಸಾಲು ಹಬ್ಬಗಳು ಒಂದೊಂದಾಗಿಯೇ ಬರುತ್ತವೆ. ಇಲ್ಲಿನ ಜನರೂ ಅಷ್ಟೇ, ಈ ಹಬ್ಬಗಳನ್ನು ಸಂಭ್ರಮ ಮತ್ತು ಸಡಗರಗಳಿಂದ ಆಚರಿಸುತ್ತಾರೆ. ಬಹುಷಃ ಇಡೀ ಕರ್ನಾಟಕದಲ್ಲಿ ವರ್ಷವಿಡೀ ಪ್ರತಿದಿನ ಒಂದಿಲ್ಲೋಂದು ಊರಲ್ಲಿ ಆಚರಣೆ, ಉತ್ಸವ, ಜಾತ್ರೆ ನಡೆಯುವ ಜಿಲ್ಲೆ ಎಂದರೆ ಅದು ವಿಜಯಪುರ ಎಂಬ ಮಾತಿದೆ. ಅದಕ್ಕೆ ತಕ್ಕಂತೆ ಇಲ್ಲಿ ಆಚರಣೆಗಳೂ ನಡೆಯುವೆ.
ಆಷಾಢ ಮಾಸ ಆರಂಭವಾಗುತ್ತಿದ್ದಂತೆ ದೇವತೆಗಳ ಜಾತ್ರೆಗಳು ಸಾಲು ಸಾಲಾಗಿ ಬರುತ್ತವೆ. ದುರ್ಗಾದೇವಿ, ಮರಗಮ್ಮ, ಹುಲಿಗೆಮ್ಮ, ಕೊಂತೆಮ್ಮ ಹೀಗೆ ಹತ್ತು ಹಲವಾರು ದೇವಿಯರ ಜಾತ್ರೆಗಳು ನಡೆಯುತ್ತವೆ. ಇಲ್ಲಿನ ಜನರೂ ಅಷ್ಟೇ. ಈ ಜಾತ್ರೆಗಳನ್ನು ಅತ್ಯಂತ ಶೃದ್ದಾ ಭಕ್ತಿಯಿಂದ ಆಚರಿಸುತ್ತಾರೆ. ಆಷಾಢ ತಿಂಗಳಲ್ಲಿ ಜಾತ್ರೆಗಳಿಗೇನೂ ಕೊರತೆಯಿಲ್ಲ. ಒಂದರ ಹಿಂದೆ ಒಂದು ಬರುತ್ತಲೇ ಇರುತ್ತವೆ. ಅದರಂತೆ ಈಗ ಆಷಾಢ ಮಾಸದಲ್ಲಿ ವಿಜಯಪುರ ನಗರದ ಪೊಲೀಸ್ ಹೆಡ್ ಕ್ವಾರ್ಟರ್ಸ್ ಎದುರಿಗಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಜಾತ್ರೆ ಕಳೆ ಕಟ್ಟಿದೆ. ಐದು ದಿನಗಳ ಕಾಲ ಅದ್ಧೂರಿಯಾಗಿ ದುರ್ಗಾದೇವಿ ಜಾತ್ರಾ ಮಹೋತ್ಸವ ನಡೆಯುತ್ತಿದೆ.
ಕಳೆದ 70 ವರ್ಷಗಳಿಂದ ಗೊಂಧಳಿ ಸಮಾಜದ ವತಿಯಿಂದ ಇಲ್ಲಿ ಸಂಭ್ರಮದಿಂದ ಜಾತ್ರಾ ಮಹೋತ್ಸವ ಆಚರಿಸಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಕೊರೊನಾ ಕಾಟದ ಹಿನ್ನೆಲೆಯಲ್ಲಿ ಇಲ್ಲಿನ ಜಾತ್ರೆಯನ್ನು ರದ್ದು ಪಡಿಸಲಾಗಿತ್ತು. ಆದರೆ, ಈ ಬಾರಿ ಜಾತ್ರೆ ಮತ್ತೆ ಗತವೈಭವಕ್ಕೆ ಮರಳಿದೆ. ಐದು ದಿನಗಳ ಕಾಲ ಜಾತ್ರೆಯಲ್ಲಿ ಪ್ರತಿದಿನ ನಾನಾ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು, ಸಮಾಜ ಸೇವೆಯಾದ ಅನ್ನಸಂತರ್ಪಣೆ ನಡೆಯುತ್ತಿದೆ.
ಈ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಖಡಕ್ ದೇವರೆಂದೇ ಹೆಸರಾಗಿರುವ ದುರ್ಗಾದೇವಿಯ ದರ್ಶನ ಪಡೆದು ನಾನಾ ಹರಕೆ ಹೊರುತ್ತಿದ್ದಾರೆ. ಅನೇಕರು ತಮ್ಮ ಹರಕೆಗಳು ಈಡೇರಿದ ಹಿನ್ನೆಲೆಯಲ್ಲಿ ತಾವು ಬೇಡಿಕೊಂಡ ವಸ್ತುಗಳನ್ನು ಸಂಪ್ರದಾಯಗಳನ್ನು ಅರ್ಪಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಈ ದುರ್ಗಾದೇವಿ ಜಾತ್ರೆಯ ಅಂಗವಾಗಿ ಬರುವ ಭಕ್ತಾದಿಗಳಿಗೆ ಅನುಕೂಲವಾಗಲೆಂದು ಈಗ ಈ ದೇವಸ್ಥಾನದ ಸುತ್ತಮುತ್ತ ಹೋವು, ಹಣ್ಣು, ಟೆಂಗಿನಕಾಯಿ, ಊದಿನಕಡ್ಡಿ, ಕರ್ಪೂರ, ಹಾರಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿ ಅಶೋಕ ಕಾಳೆ ಮತ್ಹೇತು ಅಮಿತ ಗರುಡಕರ ಹೇಳುವಂ, ಗೋಧಳಿ ಸಮಾಜದ ಪೂರ್ವಜರ ಕಾಲದಿಂದಲೂ ಇಲ್ಲಿ ಜಾತ್ರೆಯನ್ನು ಆಯೋಜಿಸಲಾಗಿದೆ. ಭಕ್ತರು ಕೂಡ ಜಾತ್ರೆಯ ಅಂಗವಾಗಿ ನಾನಾ ಜೆಲ್ಲೆ ಮತ್ತು ರಾಜ್ಯಗಳಿಂದ ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಇಲ್ಲಿನ ದೇವತೆ ಭಕ್ತರ ಇಷ್ಠಾರ್ಥಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆ ಎಲ್ಲರಲ್ಲಿದೆ. ಹೀಗಾಗಿ ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸಿ ದರ್ಶನ ಪಡೆಯುತ್ತಾರೆ. ಅಷ್ಟೇ ಅಲ್ಲ, ಕಳೆದ ಮೂರು ವರ್ಷಗಳಿಂದ ಜಾತ್ರೆ ರದ್ದಾಗಿತ್ತು. ಈ ಬಾರಿ ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿರುವುದು ಭಕ್ತರಲ್ಲಿ ಸಂತಸಕ್ಕೆ ಕಾರಣವಾಗಿದೆ.